More

    ಮರಗಳ ಮಾರಣ ಹೋಮ ಮಾಡಿದವರು ಒಂದೂ ಸಸಿ ನೆಡಲಿಲ್ಲ ; ತುಮಕೂರು-ಶಿವಮೊಗ್ಗ ಚತುಷ್ಪಥ ಕಾಮಗಾರಿಗಾಗಿ ಹಾಳು ; ಪರಿಸರ ಪ್ರೇಮಿಗಳ ಆಕ್ರೋಶ

    ತಿಪಟೂರು : ತುಮಕೂರು-ಶಿವಮೊಗ್ಗ ಚತುಷ್ಪಥ ಕಾಮಗಾರಿಗಾಗಿ ತಾಲೂಕಿನ ಹತ್ತಿಹಾಳು ಬೆಟ್ಟದಿಂದ ಗಡಿ ಗ್ರಾಮ ಕೊನೆಹಳ್ಳಿವರೆಗೂ ಅಭಿವೃದ್ಧಿ ನೆಪದಲ್ಲಿ 3,524 ಬೃಹತ್ ಮರಗಳನ್ನು ಬಲಿ ಕೊಡಲಾಗಿತ್ತು. ಆದರೆ 3 ವರ್ಷಗಳಾದರೂ ಧರೆಗುರುಳಿದ ಮರಗಳ ಬದಲಾಗಿ 10 ಸಸಿಗಳನ್ನು ನೆಡುವ ಕಾರ್ಯ ಇನ್ನೂ ಆರಂಭವಾಗಿಲ್ಲ.

    ಎನ್‌ಎಚ್ 206 ರಸ್ತೆ ಅಂಚಿನಲ್ಲಿದ್ದ ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸಲಾಗಿತ್ತು. 2018ರ ಡಿಸೆಂಬರ್‌ನಲ್ಲಿ ನಿಯಮದಂತೆ ತೆರವುಗೊಂಡ ಒಂದು ಮರಕ್ಕೆ ಬದಲಾಗಿ 10 ಸಸಿಗಳನ್ನು ನೆಟ್ಟು ಬೆಳೆಸುವ ಷರತ್ತು ವಿಧಿಸಲಾಗಿತ್ತು. ಅದಕ್ಕಾಗಿ 3 ವರ್ಷಗಳ ಹಿಂದೆಯೇ ಅಂದಾಜು 1 ಕೋಟಿ ರೂಪಾಯಿಯನ್ನು ಹೆದ್ದಾರಿ ಗುತ್ತಿಗೆದಾರರಿಂದ ಪಡೆಯಲಾಗಿದೆ. ಆದರೆ, ಪರ್ಯಾಯ ಸಸಿಗಳನ್ನು ಬೆಳೆಸಲು ಕಾರ್ಯಸೂಚಿಯನ್ನು ಈವರೆಗೂ ತಯಾರಿಸಿಲ್ಲ.
    ಹೆದ್ದಾರಿ ಪ್ರಾಧಿಕಾರವಾಗಲಿ, ತಾಲೂಕು ಆಡಳಿತವಾಗಲಿ ಈವರೆಗೆ ಇತ್ತ ಕಡೆ ತಿರುಗಿಯೂ ನೋಡಿಲ್ಲ. ಇನ್ನು ಸಸಿಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿ ಹೊತ್ತಿರುವ ಅರಣ್ಯ ಇಲಾಖೆ ಕಾರ್ಯಸೂಚಿ ತಯಾರಿಸಲು ಮೀನ-ಮೇಷ ಎಣಿಸುತ್ತಿದೆ. ಇದು ಸಹಜವಾಗಿ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಪರಿಸರ ಸಂರಕ್ಷಣೆಗೆ ಲಾಕ್‌ಡೌನ್ ಕೊಡುಗೆ ! : ಸತತ ಲಾಕ್‌ಡೌನ್ ಪರಿಣಾಮ ಕೈಗಾರಿಕೆಗಳು ಸ್ಥಗಿತಗೊಂಡು, ವಾಹನ ಸಂಚಾರ ಕಡಿಮೆ ಆಗಿರುವ ಪರಿಣಾಮ ವಾಯು ಮಾಲಿನ್ಯವೂ ತಗ್ಗಿರುವುದು ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆಯಾಗಿದೆ. ಕರೊನಾ ಮೊದಲನೇ ಅಲೆ ಸಂದರ್ಭದಲ್ಲಿ ಕಳೆದ ವರ್ಷ ಲಾಕ್‌ಡಾನ್ ಜಾರಿಗೊಳಿಸಲಾಗಿತ್ತು. ಈಗ ಎರಡನೇ ಅಲೆ ಬಳಿಕವೂ ಏಪ್ರಿಲ್ ಅಂತ್ಯದಿಂದಲೇ ಲಾಕ್‌ಡೌನ್ ಆರಂಭವಾಗಿದ್ದು ಈ ವರ್ಷವೂ ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದೆ. ಇದರಿಂದ ದೊಡ್ಡಮಟ್ಟದಲ್ಲಿ ವಾಯುಮಾಲಿನ್ಯ ಸ್ಥಗಿತಗೊಂಡಿದೆ.

    ಇದು ನಿರ್ಲಕ್ಷ್ಯದ ಪರಮಾವಧಿ. ಮರ ಕಡಿದಿರುವುದರಿಂದ ಪರಿಸರದ ಮೇಲೆ ಸಾಕಷ್ಟು ದುಷ್ಪಪರಿಣಾಮ ಆಗಿರುವುದು ಎಲ್ಲರಿಗೂ ಗೊತ್ತಿದೆ. ಅಭಿವೃದ್ಧಿ ಎಂದರೆ ಡಾಂಬರು ರಸ್ತೆಯಲ್ಲ. ಪರಿಸರ ಸಂರಕ್ಷಣೆ ಎಂದರೆ ಹಸಿರು ಬಣ್ಣ ಹೊಡೆಯುವುದಲ್ಲ. ಜೀವಂತ ಮರಗಳನ್ನು ಉಳಿಸಿ, ಸಂರಕ್ಷಣೆ ಮಾಡಬೇಕು. ರಸ್ತೆ ಬದಿ ಕಡಿದಿರುವ ಮರಗಳ ಬದಲಿಗೆ ಸಸಿಗಳನ್ನು ನೆಡಬೇಕು. ಯಾರದ್ದೋ ಮರ್ಜಿಗೆ ಒಳಗಾಗಿ ಅರಣ್ಯ ನಾಶ ತಡೆಯದಿದ್ದರೆ ಮುಂದಿನ ದಿನಗಳು ಭೀಕರವಾಗಲಿದೆ.
    ಎಸ್.ಎನ್. ಸ್ವಾಮಿ ರೈತ ಹೋರಾಟಗಾರರು

    ಪರಿಸರ ದಿನಾಚರಣೆಯ 2021ರ ಘೋಷವಾಕ್ಯ ‘ಪರಿಸರ ವ್ಯವಸ್ಥೆ ಪುನರ್‌ಸ್ಥಾಪನೆ’. ಮಾನವ ಜೀವನದ ನೆಮ್ಮದಿಯು, ತಾನು ವಾಸಿಸುವ ಸಂತೋಷದಾಯಕ ಮತ್ತು ಆರೋಗ್ಯಕರ ಪರಿಸರದ ಮೇಲೆ ಅವಲಂಬಿತವಾಗಿದೆ. ರಸ್ತೆ ಅಭಿವೃದ್ಧಿಗಾಗಿ ತೆರವುಗೊಳಿಸಿರುವ ಮರಗಳ ಜಾಗದಲ್ಲಿ ಹೊಸ ಸಸಿಗಳನ್ನು ನೆಟ್ಟು ಪೋಷಿಸುವ ಹೊಣೆ ನಮ್ಮ ಇಲಾಖೆಯದ್ದು. ಅದಕ್ಕೆ ಕಾರ್ಯಸೂಚಿಗಳನ್ನು ಶೀಘ್ರ ರೂಪಿಸಿ 1 ಮರಕ್ಕೆ ಪರ್ಯಾಯವಾಗಿ 10 ಸಸಿಗಳನ್ನು ನೆಡಲಾಗುವುದು.
    ಟಿ.ಎಂ.ರಾಕೇಶ್, ವಲಯ ಅರಣ್ಯಾಧಿಕಾರಿ, ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts