More

    2 ದಿನಗಳಲ್ಲಿ ಶುಲ್ಕ ಕಡಿತ ತೀರ್ಮಾನ ಪ್ರಕಟ

    ಶಿವಮೊಗ್ಗ: ಕರೊನಾ ಕಾರಣ ಖಾಸಗಿ ಶಾಲೆಗಳ ಶುಲ್ಕ ಕಡಿತ ವಿಚಾರದಲ್ಲಿ ಎರಡು ದಿನಗಳಲ್ಲಿ ಸ್ಪಷ್ಟ ತೀರ್ಮಾನ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್​ಕುಮಾರ್ ಹೇಳಿದರು.

    ಕರೊನಾದಿಂದ ಪಾಲಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಸಗಿ ಶಾಲೆಗಳ ಶಿಕ್ಷಕರಿಗೂ ಪೂರ್ಣ ವೇತನ ಸಿಗದ ಪರಿಸ್ಥಿತಿ ನಿರ್ವಣವಾಗಿದೆ. ಹೀಗಾಗಿ ಪಾಲಕರು ಹಾಗೂ ಶಿಕ್ಷಕರ ಹಿತವನ್ನು ಗಮನಲ್ಲಿಟ್ಟುಕೊಂಡು ಶುಲ್ಕ ಕಡಿತದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

    ಪರೀಕ್ಷೆಗೆ ಅವಧಿ ಕಡಿಮೆ ಇರುವುದರಿಂದ ಪಿಯುಸಿ, ಎಸ್ಸೆಸ್ಸೆಲ್ಸಿ ಹಾಗೂ 9ನೇ ತರಗತಿಗಳನ್ನು ಹಿಂದಿನಂತೆ ಬೆಳಗ್ಗೆಯಿಂದ ಸಂಜೆವರೆಗೂ ನಡೆಸಲು ಅನುಮತಿ ನೀಡಿ ಎಂದು ಅನೇಕರು ಒತ್ತಾಯ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಪರಿಣಿತಿ ಸಮಿತಿಯಿಂದ ವರದಿ ಪಡೆದು ಕ್ರಮ ಕೈಗೊಳ್ಳಲು ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದರು.

    ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪತ್ರ ಬರೆಯಲಾಗಿದೆ. ಒಪ್ಪಿಗೆ ಸಿಕ್ಕ ತಕ್ಷಣ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.

    ಮುಂದಿನ ಶೈಕ್ಷಣಿಕ ವರ್ಷದ ಆರಂಭದ 45 ದಿನ ವಿಶೇಷ ಬ್ರಿಡ್ಜ್ ಕೋರ್ಸ್ ನಡೆಸಲಾಗುವುದು. ಒಂದರಿಂದ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಹಿಂದಿನ ಶೈಕ್ಷಣಿಕ ವರ್ಷದ ಪಠ್ಯಗಳನ್ನು ನೆನಪಿಸಿ ಅವರನ್ನು ಅಣಿಗೊಳಿಸುವುದು ಇದರ ಉದ್ದೇಶ ಎಂದು ಶಿಕ್ಷಣ ಸಚಿವರು ತಿಳಿಸಿದರು.

    ಮೇ ಅಂತ್ಯದಲ್ಲಿ ಪರೀಕ್ಷೆಗೆ ಸಿದ್ಧತೆ: ಕರೊನಾತಂಕದಲ್ಲೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದ ಶಿಕ್ಷಣ ಇಲಾಖೆ ಪ್ರಸಕ್ತ ವರ್ಷ ಮೇ ಅಂತ್ಯದಲ್ಲಿ ಪರೀಕ್ಷೆ ನಡೆಸಲು ಮುಂದಾಗಿದ್ದು, ವಿದ್ಯಾರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಧೈರ್ಯ ತುಂಬಿದರು.

    ಬಿ.ಎಚ್.ರಸ್ತೆಯ ಸರ್ಕಾರಿ ಪಿಯು ಮತ್ತು ಪ್ರೌಢಶಾಲೆಗೆ ಬುಧವಾರ ಭೇಟಿ ನೀಡಿದ್ದ ಸಚಿವರಿಗೆ, ಪರೀಕ್ಷೆ ಮುಂದೂಡಿ ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು. ಪರೀಕ್ಷೆ ಮುಂದೂಡಿದರೆ ಆಗುವ ಅನನುಕೂಲಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದ ಸಚಿವರು, ನಿಮಗೆ ಒತ್ತಡಕ್ಕೆ ಅವಕಾಶವಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

    ಪರೀಕ್ಷೆ ಮುಂದೂಡುವುದರಿಂದ ಫಲಿತಾಂಶ, ಸಪ್ಲಿಮೆಂಟರಿ ಪರೀಕ್ಷೆ ಮತ್ತು ಅದರ ಫಲಿತಾಂಶ ಮತ್ತಷ್ಟು ವಿಳಂಬವಾಗುತ್ತದೆ. ಸಿಇಟಿ, ನೀಟ್ ಬರೆದವರಿಗೆ ಸಮಸ್ಯೆಗಳಾಗುತ್ತವೆ. ಆದ ಕಾರಣ ಪಠ್ಯ ಕಡಿಮೆ ಮಾಡಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದರು.

    ಆನ್​ಲೈನ್ ಶಿಕ್ಷಣಕ್ಕೆ ನೆಟ್​ವರ್ಕ್ ಸಮಸ್ಯೆ ಇತ್ತು. ಹಾಗಾಗಿ ಪಠ್ಯಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ವಿದ್ಯಾರ್ಥಿನಿಯರು ಸಚಿವರೆದುರು ಅಳಲು ತೋಡಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts