ಪರಶುರಾಮಪುರ: ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಸೋಮವಾರ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಪರಶುರಾಮಪುರ ಹೋಬಳಿಯ ರೈತರ ಜಮೀನುಗಳಿಗೆ ತೆರಳಿ ನಷ್ಟಗೊಂಡ ಬೆಳೆ ವೀಕ್ಷಿಸಿದರು.
ಮತ್ಸಮುದ್ರ, ಹಾಲಿಗೊಂಡನಹಳ್ಳಿ, ಮೀರಾಸಾಬಿಹಳ್ಳಿ, ಕಾಲುವೇಹಳ್ಳಿ, ಕೊರ‌್ಲಕುಂಟೆ ಮತ್ತಿತರ ಹಳ್ಳಿಗಳಿಗೆ ತೆರಳಿದ ಶಾಸಕರು, ರೈತರೊಂದಿಗೆ ಜಮೀನಿಗೆ ತೆರಳಿ ಬೆಳೆನಷ್ಟದ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ರೈತರು ದೃತಿಗೆಡುವ ಅಗತ್ಯವಿಲ್ಲ. ತಮ್ಮ ಸಹಾಯಕ್ಕೆ ಸರ್ಕಾರ ಬದ್ಧವಿದೆ. ಅಲ್ಲದೆ ಜಿಲ್ಲಾಡಳಿತ ಈಗಾಗಲೇ ಹಾಪ್‌ಕಾಮ್ಸ್ ಮೂಲಕ ತೋಟಗಾರಿಕಾ ಬೆಳೆಗಳಾದ ಈರುಳ್ಳಿ, ಕಲ್ಲಂಗಡಿ, ಕರಬೂಜ, ಎಲೆ, ಬಾಳೆ ಇತರ ಬೆಳೆಗಳನ್ನು ನೇರ ರೈತರ ಜಮೀನುಗಳಿಗೆ ತೆರಳಿ ಖರೀದಿ ಮಾರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕರೊನಾ ನಿಯಂತ್ರಣ ಉದ್ದೇಶದಿಂದ ದಿಢೀರ್ ಲಾಕ್‌ಡೌನ್ ಮಾಡಿದ್ದರಿಂದ ರೈತರಿಗೆ ತೀವ್ರ ತೊಂದರೆ ಆಗಿದೆ. ಈ ಬಗ್ಗೆ ಶೀಘ್ರ ಸರ್ಕಾರದ ಗಮನಕ್ಕೆ ಗಮನಕ್ಕೆ ತಂದು ಬೆಳೆನಷ್ಟ ಭರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ರೈತ ಮುಖಂಡ ಕೆ.ಪಿ. ಭೂತಯ್ಯ ಮಾತನಾಡಿ, ಶಾಸಕರು ಅಧಿಕಾರಿಗಳೊಂದಿಗೆ ನೇರ ಜಮೀನುಗಳಿಗೆ ತೆರಳಿ ಬೆಳೆನಷ್ಟವನ್ನು ಕಣ್ಣಾರೆ ಕಂಡು ರೈತರ ಬಲ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸರ್ಕಾರಕ್ಕೂ ತಿಳಿಸಿ ನಷ್ಟ ಭರಿಸಿಕೊಟ್ಟರೆ ಕೃಷಿಕರು ಬದುಕು ಸಾಗುತ್ತದೆ ಎಂದು ಮನವಿ ಮಾಡಿದರು.
ಕೃಷಿ ಇಲಾಖೆ ಅಧಿಕಾರಿ ಮೋಹನ್ ಮಾತನಾಡಿ, ಶಾಸಕರ ಸೂಚನೆಯನ್ವಯ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ಜಂಟಿಯಾಗಿ ರೈತರ ಬೆಳೆನಷ್ಟದ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹೋಬಳಿ ರೈತರು ಬೆಳೆದ ಕಲ್ಲಂಗಡಿ, ಕರಬೂಜ, ಹೂವು, ಬೂದುಗುಂಬಳ, ಈರುಳ್ಳಿ ಇತರ ಬೆಳೆಗಳು ಹಾಳಾಗಿರುವುದನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಂದ ನಷ್ಟದ ಅಂದಾಜು ವಿವರ ಪಡೆದುಕೊಂಡರು.
ಗ್ರಾಪಂ ಅಧ್ಯಕ್ಷ ರುದ್ರೇಶ, ಪ್ರಗತಿಪರ ರೈತರಾದ ದಯಾನಂದಮೂರ್ತಿ, ರಂಗಪ್ಪ, ದಯಾನಂದ, ತಿಪ್ಪೇಸ್ವಾಮಿ, ತೋಟಗಾರಿಕಾ ಅಧಿಕಾರಿ ವಿರೂಪಾಕ್ಷಪ್ಪ, ಆರ್‌ಐ ಹಿರಿಯಪ್ಪ, ರೈತರಾದ ತಿಮ್ಮಾರೆಡ್ಡಿ, ಮುದ್ದಣ್ಣ, ಗುಜ್ಜಾರಪ್ಪ ಇತರರಿದ್ದರು.