More

    ಈರುಳ್ಳಿ ಬಿತ್ತನೆಗೂ ಬಂತು ಯಂತ್ರ

    ಭಾರತಿ ಓ.ಚಿತ್ತಯ್ಯ

    ಪರಶುರಾಮಪುರ: ಚಳ್ಳಕೆರೆ ತಾಲೂಕಿನಲ್ಲಿ ಶೇಂಗಾ ಸರಿಸಮಾನಾಗಿ ಈರುಳ್ಳಿ ಬೆಳೆಯುವುದು ಹೆಚ್ಚಾಗುತ್ತಿದ್ದು, ರೈತರು ಉಳ್ಳಗಡ್ಡೆ ಬಿತ್ತನೆಗೆ ಯಂತ್ರಗಳ ಮೊರೆ ಹೋಗುತ್ತಿದ್ದಾರೆ.

    ಈ ಭಾಗದ ಬಹುತೇಕ ರೈತರು ಏಪ್ರಿಲ್, ಮೇ ತಿಂಗಳಲ್ಲೇ ಭೂಮಿ ಹದಗೊಳಿಸಿಕೊಂಡು ಜೂನ್, ಜುಲೈನಲ್ಲಿ ಬಿತ್ತನೆ ಮಾಡುತ್ತಾರೆ. 8 ಸಾವಿರ ಹೆಕ್ಟೇರ್ ಪ್ರದೇಶದ ಗುರಿಯಲ್ಲಿ ಈಗಾಗಲೇ 4 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೀಜ ಬಿತ್ತನೆಯಾಗಿದೆ.

    ಬೆಳೆಗೆರೆ, ಕೋನಿಗರಹಳ್ಳಿ, ಹುಲಿಕುಂಟೆ, ಕಲಮರಹಳ್ಳಿ, ಸಾಣಿಕೆರೆ, ಕಾಪರಹಳ್ಳಿ, ಯಾಲಗಟ್ಟೆ, ನಾರಾಯಣಪುರ, ತೊರೆಬೀರನಹಳ್ಳಿ, ರಾಮಜೋಗಿಹಳ್ಳಿ, ಗೊರ‌್ಲತ್ತು ಮುಂತಾದ ಗ್ರಾಮಗಳಲ್ಲಿ ಯಂತ್ರಗಳಿಂದ ಬೀಜ ಬಿತ್ತನೆ ಮಾಡಲಾಗುತ್ತಿದೆ.

    ಶೇಂಗಾ ಬಿತ್ತನೆಯ ಕೃಷಿಯಂತ್ರದ ಮಾದರಿಯಲ್ಲಿರುವ ಈ ಯಂತ್ರಕ್ಕೆ ಕೇವಲ ಭೂಮಿ ಹದಗೊಳಿಸಿದರೆ ಸಾಕು ತನ್ನಷ್ಟಕ್ಕೆ ತಾನೇ ಮೊದಲಿಗೆ ಮಡಿ ಮಾಡಿಕೊಂಡು ಎಲ್ಲ ಮಡಿಗೂ ಬೀಜವನ್ನು ಸಮನಾಗಿ ಹರಡುತ್ತದೆ.

    ಬಿತ್ತನೆ ಮಾಡಿದ ಬೀಜದ ಮೇಲೆ ಸಣ್ಣ ಪ್ರಮಾಣದಲ್ಲಿ ಮಣ್ಣನ್ನು ಚೆಲ್ಲುತ್ತದೆ. ಹೀಗೆ ಯಂತ್ರವು ಒಂದು ತಾಸಿಗೆ ಕನಿಷ್ಟ 3 ಎಕರೆ ಪ್ರದೇಶದಲ್ಲಿ ಬಿತ್ತನೆ ಮಾಡುತ್ತದೆ. ಕೂಲಿಕಾರರ ಸಮಸ್ಯೆ, ಬಿತ್ತನೆಯ ಸಮಯವೂ ಉಳಿಯುತ್ತದೆ ಎಂಬುದು ರೈತರ ಅನಿಸಿಕೆ.

    ಎಕರೆಗೆ 1200 ರೂ. ವೆಚ್ಚ: ಒಂದು ಎಕರೆ ಬಿತ್ತನೆಗೆ 1200 ರೂ. ಬೇಕಾಗುತ್ತದೆ. ಆದರೆ, ಸಾಂಪ್ರದಾಯಿಕ ಪದ್ಧತಿಯಂತೆ ಬಿತ್ತನೆ ಕಾರ್ಯಕ್ಕೆ ಕನಿಷ್ಠ 2ರಿಂದ 3 ಸಾವಿರ ರೂ. ತಗಲುತ್ತದೆ. ಆದರೆ, ಯಂತ್ರದಿಂದ ಬಿತ್ತನೆ ಅತಿ ಸುಲಭ, ಬಂಡವಾಳವೂ ಕಡಿಮೆ ಎನ್ನುತ್ತಾರೆ ಬೆಳಗೆರೆ ರೈತ ಶ್ರೀನಿವಾಸ.

    ಬಿತ್ತನೆ ಬೀಜವನ್ನು ತೇವಾಂಶದಿಂದ ಕೂಡಿದ ಬಟ್ಟೆ ಅಥವಾ ಹಾಳೆಯ ಮೇಲೆ ಹರಡಬೇಕು. ಕೆಜಿ ಬೀಜಕ್ಕೆ 100 ಗ್ರಾಂ ಟ್ರೈಕೋಡರ್ಮ ಪೌಡರ್ ಸೇರಿಸಿ ಕೈ ತೊಳೆದುಕೊಂಡು ಬೀಜಕ್ಕೆ ಲೇಪಿಸಿ ಬಿತ್ತನೆ ಮಾಡಬೇಕು.
    ಡಾ.ವಿರೂಪಾಕ್ಷಪ್ಪ, ಹಿ.ಸ.ನಿರ್ದೇಶಕ
    ತೋಟಗಾರಿಕಾ ಇಲಾಖೆ, ಚಳ್ಳಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts