More

    ಕ್ಯಾತಪ್ಪನ ಪರಿಷೆಗೆ ಸಂಭ್ರಮದ ತೆರೆ

    ಪರಶುರಾಮಪುರ: ಸಮೀಪದ ಪುರ‌್ಲೆಹಳ್ಳಿಯ ವಸಲುದಿನ್ನೆಯಲ್ಲಿ ಹಲವು ದಿನಗಳಿಂದ ನಡೆಯುತ್ತಿದ್ದ ಕ್ಯಾತಪ್ಪನ ಜಾತ್ರೆಗೆ ಸೋಮವಾರ ಕಳ್ಳೆ ಗುಡಿ ಮೇಲಿನ ಪಂಚ ಕಳಸ ಕೀಳುವ ಶಾಸ್ತ್ರದೊಂದಿಗೆ ತೆರೆ ಬಿದ್ದಿತು.

    ನೆರೆದಿದ್ದ ಭಕ್ತರು ಕಳ್ಳೆ ಗುಡಿಯಲ್ಲಿ ಪ್ರತಿಷ್ಠಾಪಿಸಿದ್ದ ಕ್ಯಾತಪ್ಪನ ಸಮೂಹ ದೇವರುಗಳಾದ ವೀರಣ್ಣ, ಬತವಿನದೇವರು, ತಾಳಿದೇವರು, ಈರಣ್ಣ, ಸಿರಿಯಣ್ಣ ಹಾಗೂ ಕರಿಯಣ್ಣ ದೇವರುಗಳ ಮೂರ್ತಿಗಳಿಗೆ ನಮಿಸಿ, ತೀರ್ಥ ಪ್ರಸಾದ ಸ್ವೀಕರಿಸಿದ ಬಳಿಕ ಜಾತ್ರೆಯ ಖರ್ಚು-ವೆಚ್ಚಕ್ಕೆ ಪ್ರತಿ ಮನೆಗೆ ವಿಧಿಸಿದ್ದ ಕರವನ್ನು ತಮ್ಮ ಗುಡಿಕಟ್ಟೆಯ ಗೌಡ-ಯಜಮಾನರಿಗೆ ನೀಡಿ ಲೆಕ್ಕ ಬರೆಸಿದರು.

    ಗುಡಿಕಟ್ಟೆಯ ಅಣ್ಣ-ತಮ್ಮಂದಿರ ತೀರ್ಮಾನದಂತೆ ಐವರು ವೀರಗಾರರನ್ನು ಪೊಲೀಸರ ಸರ್ಪಗಾವಲಿನಲ್ಲಿ ಗುಡಿಯ ಕೂಗಳತೆ ದೂರದಲ್ಲಿನ ಅಕ್ಕಮ್ಮನ ಮಜ್ಜನಬಾವಿಯ ಬಳಿಗೆ ಕರೆದೊಯ್ದು ಮೈಗೆ ನೀರೆರೆದರು. ಬಳಿಕ ಹನ್ನೆರೆಡು ಕೈವಾಡಸ್ಥರಿಂದ ವಿವಿಧ ಧಾರ್ಮಿಕ ವಿಧಿಗಳು ನೆರವೇರಿದವು.

    ಬಳಿಕ ಐವರು ವೀರಗಾರರನ್ನು ಮೆರವಣಿಗೆ ಮೂಲಕ ಕಳ್ಳೆ ಗುಡಿ ಬಳಿ ಕರೆತಂದು ಗುಡಿಯೊಳಗಿನ ಉತ್ಸವ ಮೂರ್ತಿಗಳನ್ನು ಹೊರ ತೆಗೆದ ಬಳಿಕ ಕಳಶ ಕೀಳುವ ಸ್ಪರ್ಧೆಗೆ ಪೊಲೀಸರು ಗುಡಿಕಟ್ಡೆಯ ಹಿರಿಯರ ಅಪ್ಪಣೆ ಪಡೆದು ಚಾಲನೆ ಕೊಟ್ಟರು. ಐವರೂ ವೀರಗಾರರು ತಾ ಮುಂದು ನಾ ಮುಂದು ಎಂದು ಪೈಪೋಟಿಯಲ್ಲಿ ಕಳ್ಳೆ ಗುಡಿ ಏರಿದರು.

    ಈ ದೃಶ್ಯ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ನೆರೆದಿದ್ದರು. ಅಂತಿಮವಾಗಿ ಚೌಳೂರಿನ ಕೇಶವಮೂರ್ತಿ ಮೊದಲು ಪಂಚಕಳಶ ಕಿತ್ತು ವೀರಗಾರ ಪಟ್ಟ ಪಡೆದನು.

    ಕಳ್ಳೆ ಕೀಳುವ ಕಾರ್ಯದಲ್ಲಿ ವಿಜೇತರನ್ನು ಹೊರತುಪಡಿಸಿ ಈಶ್ವರಗೆರೆಯ ಶಿವಲಿಂಗಪ್ಪ, ಕೊರ‌್ಲಕುಂಟೆ ಹರೀಶ, ದ್ವಾರನಕುಂಟೆ ರಾಘವೇಂದ್ರ, ಕೆಟಿಹಳ್ಳಿ ಶ್ರೀಧರ ಪಾಲ್ಗೊಂಡಿದ್ದರು.

    ಕಳ್ಳೇಗುಡಿಯನ್ನು ವೀರಗಾರರು ಏರಿ ಕಳಶ ಕಿತ್ತ ಕ್ಷಣಾರ್ಧದಲ್ಲೇ ಪೂಜಾರಿಗಳು ದೇವರ ಮೂರ್ತಿಗಳನ್ನು ಹೊತ್ತು ತಮ್ಮ ತಮ್ಮ ಊರಿನತ್ತ ಹೆಜ್ಜೆ ಹಾಕಿದರು. ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

    ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಶಾಸಕರಾದ ಟಿ.ರಘುಮೂರ್ತಿ, ಪೂರ್ಣಿಮಾ ಶ್ರೀನಿವಾಸ, ಜಿಪಂ ಸದಸ್ಯೆ ಚಂದ್ರಿಕಾ ಶ್ರೀನಿವಾಸ , ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ, ಬಿಜೆಪಿ ತಾಲೂಕು ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ, ಸಿಪಿಐ ಆನಂದ, ಪಿಎಸ್‌ಐ ಡಿ.ಶಿವಕುಮಾರ, ಸತೀಶನಾಯ್ಕ, ಗುಡಿಕಟ್ಟೆಯ ಹಿರಿಯರಾದ ಲಿಂಗಣ್ಣ, ಚಿಕ್ಕಣ್ಣ, ಕ್ಯಾತಪ್ಪ, ರಂಗಣ್ಣ, ಕುಮಾರ, ವೀರಣ್ಣ, ಚಿಕ್ಕಣ್ಣ, ಚಂದ್ರಣ್ಣ, ವೀರಣ್ಣ. ಚಿತ್ರಲಿಂಗಪ್ಪ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts