ಪರಶುರಾಮಪುರ: ಹೋಬಳಿ ಮಟ್ಟದಲ್ಲಿ 8 ಎಕರೆಯಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ಗ್ರಾಮದ ಸರ್ಕಾರಿ ಪದವಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪರಶುರಾಮಪುರ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ವಲಯ 1ರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಹಳ್ಳಿಗಾಡಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸ್ಪರ್ಧಾತ್ಮಕವಾಗಿ ಭಾಗವಹಿಸಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಬಿಇಒ ಕೆ.ಎಸ್.ಸುರೇಶ ಪ್ರಾಸ್ತಾವಿಕ ಮಾತನಾಡಿ, ಪ್ರಾಥಮಿಕ-ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕರು, ದೈಹಿಕ ವಿಷಯ ಶಿಕ್ಷಕರು ವೈಯಕ್ತಿಕ ಮತ್ತು ಗುಂಪು ಆಟಗಳನ್ನು ಆಯೋಜಿಸಿ ಕ್ರೀಡೆಯಲ್ಲಿ ಸಾಧನೆ ತೋರಲು ಅನುವು ಮಾಡಿಕೊಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಅನಿತಾ ವೆಂಕಟೇಶ ಮಾತನಾಡಿ, ಟಿ.ಎನ್.ಕೋಟೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕ್ರೀಡೆಗಳಿಗೆ ಬೇಕಾದ ಪರಿಕರಗಳನ್ನು ನೀಡಲು ಯೋಜನೆಯೊಂದನ್ನು ರೂಪಿಸಿ ಅನುಕೂಲ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ಗ್ರಾಮದ ವಿವಿಧ ಯುವಕ ಸಂಘದವರು, ಗ್ರಾಪಂ ಮತ್ತು ಸ್ಥಳೀಯ ದಾನಿಗಳು ಮಕ್ಕಳಿಗೆ ಬಹುಮಾನ, ಸೌಕರ್ಯಗಳನ್ನು ಒದಗಿಸಿಕೊಟ್ಟರು.
ಗ್ರಾಪಂ ಅಧ್ಯಕ್ಷೆ ಅನಿತಾ ವೆಂಕಟೇಶ, ಉಪಾಧ್ಯಕ್ಷ ಜಗಳೂರಪ್ಪ, ಎಪಿಎಂಸಿ ಮಾಜಿ ಸದಸ್ಯ ಎಸ್.ಚನ್ನಕೇಶವ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಮೂರ್ತಿ, ಅಕ್ಷರ ದಾಸೋಹ ಅಧಿಕಾರಿ ತಿಪ್ಪೇಸ್ವಾಮಿ, ಇಸಿಒ ರವಿಶಂಕರ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಮಾರುತೇಶ, ತಾಲೂಕು ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ಪ್ರಾಚಾರ್ಯ ಧನಂಜಯ, ತುಂಗಭದ್ರಪ್ಪ, ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಭೂತಮ್ಮ, ಶಿಕ್ಷಕರಾದ ಚಿಕ್ಕಣ್ಣ, ನಾಗರಾಜು, ಮಲ್ಲಿಕಾರ್ಜುನ, ಭೂತಮ್ಮ ಇತರರಿದ್ದರು.