More

    ಟೀಮ್​ ಇಂಡಿಯಾದ ಮಾರಕ ಬೌಲಿಂಗ್​ ದಾಳಿ ಹಿಂದಿರುವ ಮಾಂತ್ರಿಕ ಇವರೇ ನೋಡಿ…

    ಬೆಂಗಳೂರು: ನ. 12ರಂದು ನೆದರ್ಲೆಂಡ್ಸ್​ ವಿರುದ್ಧ ನಡೆದ ವಿಶ್ವಕಪ್​ ಲೀಗ್​ ಪಂದ್ಯದಲ್ಲಿ ಭಾರತ ತಂಡ 160 ರನ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಬ್ಯಾಟಿಂಗ್​ಗಿಂತ ಬೌಲಿಂಗ್​ ಹೆಚ್ಚು ಗಮನ ಸೆಳೆಯಿತು. ಏಕೆಂದರೆ, ಕೆ.ಎಲ್​. ರಾಹುಲ್​ ಮತ್ತು ಶ್ರೇಯಸ್​ ಅಯ್ಯರ್​ ಹೊರತುಪಡಿಸಿ ಉಳಿದ ಎಲ್ಲರು ಬೌಲಿಂಗ್​ ಮಾಡಿದರು. ಗಮನಾರ್ಹ ಸಂಗತಿ ಏನೆಂದರೆ, ನಾಯಕ ರೋಹಿತ್​ ಶರ್ಮ ಮತ್ತು ವಿರಾಟ್​ ಕೊಹ್ಲಿ ಸಹ ತಲಾ ಒಂದು ವಿಕೆಟ್​ ಪಡೆದರು. ಇಡೀ ಟೂರ್ನಿಯಲ್ಲಿ ಭಾರತದ ಬೌಲಿಂಗ್ ಒಂದು ಸಂಚಲನ ಮೂಡಿಸಿದ್ದು,​ ಇದಕ್ಕೆ ಬೌಲಿಂಗ್​ ಕೋಚ್ ಪರಸ್ ಮಾಂಬ್ರೆ​ ಕಾರಣ ಎಂಬುದು ಎಷ್ಟೋ ಮಂದಿಗೆ ಗೊತ್ತಿಲ್ಲ ಮತ್ತು ನಾವದನ್ನು ಮರೆಯುವಂತಿಲ್ಲ.

    ಪ್ರಸಕ್ತ ಟೂರ್ನಿಯಲ್ಲಿ ಭಾರತ ಬೌಲಿಂಗ್​ ಸಾಮರ್ಥ್ಯ ಕ್ರೀಡಾ ಜಗತ್ತನ್ನು ಬೆರಗುಗೊಳಿಸಿದೆ. ಶ್ರೀಲಂಕಾ ಕೇವಲ 55 ರನ್​ಗೆ ಆಲೌಟ್​ ಮಾಡಿದ ಭಾರತ, ಬಲಿಷ್ಟ ದಕ್ಷಿಣ ಆಫ್ರಿಕಾ ತಂಡವನ್ನೇ 83 ರನ್​ಗೆ ಕಟ್ಟಿಹಾಕಿದ್ದು ಇದಕ್ಕೆ ಸ್ಪಷ್ಟ ಉದಾಹರಣೆ. 50 ವರ್ಷದ ಇತಿಹಾಸದಲ್ಲೇ ಇದು ಬೆಸ್ಟ್​ ಬೌಲಿಂಗ್​ ದಾಳಿ ಎಂದು ಟೀಮ್​ ಇಂಡಿಯಾ ಮಾಜಿ ಕೋಚ್​ ರವಿಶಾಸ್ತ್ರಿ ಕೊಂಡಾಡಿರುವುದನ್ನು ಇಲ್ಲಿ ಮರೆಯೋ ಆಗಿಲ್ಲ. ರವಿಶಾಸ್ತ್ರಿ ಮಾತ್ರವಲ್ಲದೆ, ಸುರೇಶ್​ ರೈನಾ, ಶ್ರೀಲಂಕಾ ಕ್ರಿಕೆಟ್​ನ ಮುಖ್ಯ ಕೋಚ್​ ಕ್ರಿಸ್​ ಸಿಲ್ವರ್​ವುಡ್​ ಸೇರಿದಂತೆ ಸಾಕಷ್ಟು ದಿಗ್ಗಜರು ಭಾರತದ ಬೌಲಿಂಗ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜಸ್​ಪ್ರಿತ್​ ಬೂಮ್ರಾ, ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​, ರವೀಂದ್ರ ಜಡೇಜಾ ಮತ್ತು ಕುಲದೀಪ್​ ಯಾದವ್​ ಬೌಲಿಂಗ್​ ಭಾರತಕ್ಕೆ ಬಹುದೊಡ್ಡ ಶಕ್ತಿಯಾಗಿದೆ. ಇಂತಹ ಬೌಲಿಂಗ್​ ಶಕ್ತಿಯನ್ನು ಸೃಷ್ಟಿಸಿದ ಕೀರ್ತಿ ಟೀಮ್​ ಇಂಡಿಯಾದ ಬೌಲಿಂಗ್​ ಕೋಚ್ ಪರಸ್ ಮಾಂಬ್ರೆ​ಗೆ ಸಲ್ಲುತ್ತದೆ. ಮಾಂಬ್ರೆ ಅವರು ಅಂಡರ್​ 19 ಮತ್ತು ಭಾರತ ಎ ತಂಡದೊಂದಿಗೆ ರಾಹುಲ್ ದ್ರಾವಿಡ್ ಅವರೊಂದಿಗೆ ದೀರ್ಘಕಾಲದಿಂದ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ.​

    ವೇಗಕ್ಕೆ ನಿಖರತೆ ಕೊಟ್ಟ ಮಾಂಬ್ರೆ
    ಹೆಚ್ಚಿನ ವೇಗ ಮತ್ತು ನಿಖರವಾಗಿ ಬೌಲಿಂಗ್ ಮಾಡುವ ಯುವ ಭಾರತೀಯ ವೇಗದ ಬೌಲರ್‌ಗಳ ಬಳಗನ್ನು ಅಭಿವೃದ್ಧಿಪಡಿಸಿದ್ದಾರೆ. ಮೊಹಮ್ಮದ್​ ಸಿರಾಜ್​, ಶಾರ್ದುಲ್​ ಠಾಕೂರ್​, ಅವೇಶ್​ ಖಾನ್​ ಮತ್ತು ಪ್ರಸಿದ್ಧ ಕೃಷ್ಣ ಅವರು ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಮಾಂಬ್ರೆ ನೆರವು ಪಡೆದಿದ್ದಾರೆ. ಭರತ್ ಅರುಣ್ ಅವರ ನಿರ್ಗಮನದ ಬಳಿಕ 2021ರಲ್ಲಿ ಮಾಂಬ್ರೆ ಅವರನ್ನು ಬೌಲಿಂಗ್​ ಕೋಚ್​ ಆಗಿ ನೇಮಿಸಲಾಯಿತು. ಬೌಲಿಂಗ್ ವಿಭಾಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಎಲ್ಲಾ ಅರ್ಹತೆಗಳನ್ನು ಮಾಂಬ್ರೆ ಅವರು ಹೊಂದಿದ್ದು, ಅದರ ಫಲಿತಾಂಶ ಪ್ರಸಕ್ತ ವಿಶ್ವಕಪ್​ ಟೂರ್ನಿಯಲ್ಲಿ ಕಾಣುತ್ತಿದೆ.

    ಮುಂಬೈ ಮೂಲದ ಬಲಗೈ ಮಧ್ಯಮ ವೇಗಿ ಪರಾಸ್ ಮಾಂಬ್ರೆ ಅವರು 1996ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪ್ರವೇಶವನ್ನು ಮಾಡಿದರು. ಅದೇ ಪ್ರವಾಸದಲ್ಲಿ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಮತ್ತು ವೆಂಕಟೇಶ್ ಪ್ರಸಾದ್ ಅವರು ತಮ್ಮ ಮೊದಲ ಟೆಸ್ಟ್ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ಆದಾಗ್ಯೂ ಮಾಂಬ್ರೆ ಅವರು ಮೂವರಿಗಿಂತ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್​ ಪ್ರವಾಸದಲ್ಲಿ ಎರಡು ಟೆಸ್ಟ್‌ಗಳು ಮತ್ತು ಎರಡು ಏಕದಿನ ಪಂದ್ಯಗಳನ್ನು ಆಡಿದರು. 1998 ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕೈಕ ಏಕದಿನ ಪಂದ್ಯವನ್ನು ಪ್ರತಿನಿಧಿಸಿದರು. ಟೆಸ್ಟ್​ನಲ್ಲಿ 2 ವಿಕೆಟ್​ ಪಡೆದರೆ, ಏಕದಿನ ಕ್ರಿಕೆಟ್​ನಲ್ಲಿ 3 ವಿಕೆಟ್​ ಗಳಿಸಿದರು.

    ಮಾಂಬ್ರೆ ಅವರ ದೇಶೀಯ ಪಂದ್ಯಗಳ ದಾಖಲೆಯು ಅಂತಾರಾಷ್ಟ್ರೀಯ ಪಂದ್ಯಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ. 1993-94 ಋತುವಿನಲ್ಲಿ, ಮಾಂಬ್ರೆ ಎಂಟು ಪಂದ್ಯಗಳಲ್ಲಿ 23.73 ಸರಾಸರಿಯಲ್ಲಿ 30 ವಿಕೆಟ್‌ಗಳನ್ನು ಕಬಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಆ ಋತುವಿನಲ್ಲಿ ಮಹಾರಾಷ್ಟ್ರದ ವಿರುದ್ಧ ತಮ್ಮ ಅತ್ಯುತ್ತಮ ಬೌಲಿಂಗ್​ನಿಂದಾಗಿ 35 ರನ್​ಗೆ 5 ವಿಕೆಟ್​ ಪಡೆದು ಮಹಾರಾಷ್ಟ್ರವನ್ನು ಕೇವಲ 75 ರನ್‌ಗಳಿಗೆ ಔಟ್ ಮಾಡಿದರು. ಪರಿಣಾಮ ಬಾಂಬೆ (ಈಗ ಮುಂಬೈ) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಮಾಂಬ್ರೆ ಅವರ ವೃತ್ತಿಜೀವನದಲ್ಲಿ ಗೆದ್ದ ಐದು ರಣಜಿ ಪ್ರಶಸ್ತಿಗಳಲ್ಲಿ ಮೊದಲನೆಯದು.

    ಅವರು ತಮ್ಮ ಮುಂದಿನ ಋತುವಿನಲ್ಲಿ 54 ವಿಕೆಟ್‌ಗಳನ್ನು ಪಡೆದರು ಮತ್ತು 1995ರಲ್ಲಿ ಭಾರತ A ಗಾಗಿ ಆಡಲು ಆಯ್ಕೆಯಾದರು. ಆ ನಿರ್ದಿಷ್ಟ ಋತುವಿನಲ್ಲಿ ಮಾಂಬ್ರೆ ಇರಾನಿ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ 20 ರನ್​ಗೆ 5 ವಿಕೆಟ್​ ಗಳಿಸಿದರು.

    ಮಾಂಬ್ರೆ ಭಾರತ ಎ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರು ಮತ್ತು 1996ರ ವಿಶ್ವಕಪ್‌ಗೆ ಮೊದಲು ಪೂರ್ವಸಿದ್ಧತಾ ಶಿಬಿರಕ್ಕೆ ಆಯ್ಕೆಯಾದ ಐದು ವೇಗದ ಬೌಲರ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ, ವೆಂಕಟೇಶ್‌ ಪ್ರಸಾದ್‌, ಜಾವಗಲ್‌ ಶ್ರೀನಾಥ್‌, ಮನೋಜ್‌ ಪ್ರಭಾಕರ್‌ ಮತ್ತು ಸಲೀಲ್‌ ಅಂಕೋಲಾರನ್ನು ಅವರಿಗಿಂತ ಮೊದಲು ಆಯ್ಕೆ ಮಾಡಲಾಯಿತು. 1996ರಲ್ಲಿ ಭಾರತದ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದಾಗ ಅವರು ಅಂತಿಮವಾಗಿ ಭಾರತಕ್ಕಾಗಿ ಆಡುವ ಅವಕಾಶವನ್ನು ಪಡೆದರು. ಓವಲ್‌ ಕ್ರೀಡಾಂಗಣದಲ್ಲಿ ತಮ್ಮ ಚೊಚ್ಚಲ ಏಕದರಿನ ಪಂದ್ಯವನ್ನು ಆಡಿದರು. (ಏಜೆನ್ಸೀಸ್​)

    ಲ್ಯುಕೇಮಿಯಾ ರೋಗಕ್ಕೆ ರಕ್ತ ಕಾಂಡಕೋಶ ದಾನ: ಕ್ಯಾನ್ಸರ್​ನಿಂದ ಬಳಲುತ್ತಿರುವ ವೈದ್ಯೆ ಮನವಿ

    ಸೆಮಿಫಿನಾಲೆಯಲ್ಲೂ ಬೌಲಿಂಗ್​ ಮಾಡಲಿದ್ದಾರ ಕಿಂಗ್​ ಕೊಹ್ಲಿ; ಬೌಲಿಂಗ್ ಕೋಚ್​ ಹೇಳಿದ್ದಿಷ್ಟು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts