More

  ಒಂಬತ್ತು ವಿಷಯಗಳನ್ನು ಸಕಲ ಮಾನವರು ವೈಯಕ್ತಿಕವಾಗಿಯೂ, ಸಾರ್ವತ್ರಿಕವಾಗಿಯೂ – ಪಾಲಿಸಬೇಕಾದುದು ಸನಾತನಧರ್ಮದ ಶಾಸನವಾಗಿದೆ- ಅವು ಯಾವುವು?!

  ಯುಧಿಷ್ಠಿರನು ಪ್ರಶ್ನಿಸುತ್ತಿರುವುದನ್ನು ಅನುಸರಿಸಿ – ಈ ಪೃಥ್ವಿಯಲ್ಲಿಯ ಮಾನವ ಜನಾಂಗವು ಪಾಲಿಸಬೇಕಾಗಿರುವಂತಹ ನಾಲ್ಕು ವರ್ಣ ಮತ್ತು ನಾಲ್ಕು ಆಶ್ರಮಗಳಿಗೆ ಹೇಳಲ್ಪಟ್ಟಿರುವ ಧರ್ವಚರಣೆಗಳು ಹಾಗೂ ಸನಾತನ ಶಾಸ್ತ್ರಗಳ ಕುರಿತು ಭೀಷ್ಮನು ಸಂಕ್ಷಿಪ್ತವಾಗಿ ತಿಳಿಸತೊಡಗಿದನು.

  ‘ಮಹಾರಾಜ ಯುಧಿಷ್ಠಿರ! ಯಾರೊಬ್ಬರಿಗೂ ದ್ರೋಹ ವಂಚನೆ ಗೈಯದಿರುವುದು, ಸದಾ ಸತ್ಯವನ್ನೇ ನುಡಿಯುವುದು, ಧನ-ದ್ರವ್ಯಸಂಪತ್ತುಗಳನ್ನು ಹಂಚಿಕೊಂಡು ಅನುಭವಿಸುವುದು, ಸಮಭಾವವನ್ನು ಹೊಂದಿರುವುದು, ತನ್ನದೇ ಪತ್ನಿಯಿಂದ ಮಾತ್ರವೇ ಸಂತಾನೋತ್ಪತ್ತಿಯನ್ನು ಹೊಂದುವುದು (ಅನ್ಯ ಸ್ತ್ರೀ ಸಂಗ ಮಾಡದಿರುವುದು), ಅಂತರಂಗ-ಬಹಿರಂಗ ಶುದ್ಧಿಯನ್ನು ಕಾಯ್ದುಕೊಳ್ಳುವುದು, ಯಾರ ಮೇಲೆಯೂ ಕ್ರೋಧವನ್ನು ಹೊಂದದಿರುವುದು, ಸರಳ ಸಭ್ಯ ಸ್ವಭಾವವನ್ನು ಹೊಂದಿರುವುದು, ದೀನರ ಪಾಲನೆ-ಪೋಷಣೆಗಾಗಿ ಎಲ್ಲ ಬಗೆಯ ನೆರವನ್ನು ನೀಡುವುದು – ಹೀಗೆ ಒಂಬತ್ತು ವಿಷಯಗಳನ್ನು ಸಕಲ ಮಾನವರು ಕೂಡ – ವೈಯಕ್ತಿಕವಾಗಿಯೂ, ಸಾರ್ವತ್ರಿಕವಾಗಿಯೂ – ಪಾಲಿಸಬೇಕಾದುದು ಸನಾತನಧರ್ಮದ ಶಾಸನವಾಗಿದೆ. ಇದರ ಹೊರತಾಗಿ ಕೇವಲ ವಿಪ್ರ ವರ್ಣದವರು ಪಾಲಿಸಬೇಕಾದ ಧರ್ಮದ ನಡೆಯ ಕುರಿತು ಬ್ರಹ್ಮ ವಿರಚಿತ ನೀತಿಶಾಸ್ತ್ರದಲ್ಲಿ ಹೇಳಲ್ಪಟ್ಟಿರುವುದನ್ನು ನಿನಗೆ ತಿಳಿಸುತ್ತೇನೆ.

  ಮಹಾರಾಜ! ವಿಪ್ರರಿಗೆ ಇಂದ್ರಿಯನಿಗ್ರಹವು ಸನಾತನ ಕಟ್ಟಳೆಯಾಗಿದೆ. ಅವರು ಸದಾ ವೇದಗಳ ಸ್ವಾಧ್ಯಾಯದಲ್ಲಿ ನಿರತರಾಗಿರಬೇಕು.ಅದರಿಂದಲೇ ಅವರ ಎಲ್ಲ ಕರ್ಮಗಳ ಪಾಲನೆಗೆ ಪೂರ್ತಿ ಫಲವು ಲಭಿಸುತ್ತದೆ. ವಿಪ್ರನಾಗಿರುವವನು ಅನುಸರಿಸಿರುವ ವರ್ಣೋಚಿತವಾದ ಧರ್ಮಾಚರಣೆಯಲ್ಲಿಯೇ ಸ್ಥಿತನಾಗಿದ್ದುಕೊಂಡು ಶಾಂತಮನಸ್ಕನಾಗಿ ಮತ್ತು ಜ್ಞಾನ-ವಿಜ್ಞಾನದಿಂದಲೇ ತೃಪ್ತಿಯನ್ನು ಹೊಂದುತ್ತಿರಬೇಕು. ಆ ರೀತಿಯಾಗಿ ಜೀವಿಸುತ್ತ ಯಾವುದೇ ಬಗೆಯ ದುಷ್ಕರ್ಮಗಳನ್ನು ಕೂಡ ಎಸಗದೆ ತನ್ನಲ್ಲಿ ಧನ ಸಂಚಯವಾದರೆ ಆ ಧನದಿಂದ ವಿವಾಹಿತನಾಗಿ ಗ್ರಹಸ್ಥಾಶ್ರಮವನ್ನು ಧರ್ಮವನ್ನು ಪರಿಪಾಲಿಸುತ್ತ ಸಂತಾನವನ್ನು ಪಡೆಯಬಹುದು. ಹಾಗಿಲ್ಲದಿದ್ದಲ್ಲಿ ಗಳಿಕೆಯ ಧನವನ್ನು ದಾನ ಮತ್ತು ಯಜ್ಞಾದಿ ಧರ್ಮಕಾರ್ಯಗಳಲ್ಲಿ ವ್ಯಯಿಸಬೇಕು. ಪ್ರಾಪ್ತವಾದ ಧನವನ್ನು ಹಂಚಿಕೊಂಡೇ ಅನುಭವಿಸತಕ್ಕದ್ದು ಎಂದು ಕೂಡ ನೀತಿಶಾಸ್ತ್ರವು ಕಟ್ಟಳೆಯನ್ನು ವಿಧಿಸಿದೆ. ವಿಪ್ರನಾಗಿದ್ದವನು ಇತರ ಯುಕ್ತ ಕರ್ಮಗಳನ್ನು ಆಚರಿಸುತ್ತಿರಲಿ ಅಥವಾ ಆಚರಿಸದಿರಲಿ, ಆದರೆ ಎಲ್ಲ ಪ್ರಾಣಿಗಳ-ಜೀವಿಗಳ ಕುರಿತಾಗಿಯೂ ಮೈತ್ರೀಭಾವವನ್ನು ಇರಿಸಿಕೊಳ್ಳತಕ್ಕದ್ದು. ಆ ಕಾರಣದಿಂದಲೇ ಅವನು ಮೈತ್ರ ಎಂದು ಕೂಡ ಕರೆಯಲ್ಪಡುತ್ತಾನೆ.

  ಪರಿಪಾಲಿಸಬೇಕಾಗಿರುವ ಅಗತ್ಯ ಧರ್ಮಕರ್ಮಗಳನ್ನು ವಿಪ್ರನಿಗೆ ನೀತಿಶಾಸ್ತ್ರವು ನಿರ್ದೇಶಿಸಿರುವಂತೆಯೇ ಕ್ಷತ್ರಿಯವರ್ಣದವರಿಗೆ ಕೂಡ ನಿರ್ದಿಷ್ಟಪಡಿಸಿರುವ ಧರ್ಮಕರ್ಮಗಳಿವೆ. ಅವುಗಳು ಯಾವ್ಯಾವು ಎಂದರೆ – ಕ್ಷತ್ರಿಯನು ದಾನ ಗೈಯ್ಯಬೇಕು. ಆದರೆ ಯಾರಿಂದಲೂ ಕೈಯೊಡ್ಡಿ ದಾನವನ್ನು ಯಾಚಿಸಕೂಡದು. ಕ್ಷತ್ರಿಯನು ಸ್ವಯಂ ಯಜ್ಞವನ್ನು ನಡೆಸಬಹುದು. ಆದರೆ ಮತ್ತೊಬ್ಬರ ಯಜ್ಞವನ್ನು ಮಾಡಿಸುವ ಯಾಜ್ಞಿಕ ವಿಪ್ರನಂತೆ ವರ್ತಿಸತಕ್ಕದ್ದಲ್ಲ. ಕ್ಷತ್ರಿಯನು ತಾನೇ ಅಧ್ಯಯನಗೈಯಬಹುದಾದರೂ ಅಧ್ಯಾಪನಕರ್ಮವನ್ನು ಕೈಗೊಳ್ಳಬಾರದು. ಕ್ಷತ್ರಿಯನಿಗೆ ಅನುಸರಿಸಬೇಕಾಗಿರುವ ಪ್ರಧಾನ ಧರ್ಮವೆಂದರೆ ಪ್ರಜಾಪರಿಪಾಲನೆಯೇ ಆಗಿದೆ. ಪ್ರಜಾಜನರ ಸುಲಿಗೆ ಮಾಡುವವರನ್ನು ವಧಿಸಲು ಕ್ಷತ್ರಿಯರು ಸದಾ ಸಿದ್ಧರಾಗಿರಬೇಕು. ಯುದ್ಧರಂಗಕ್ಕೆ ಇಳಿದಾಗ ಮನಃಪೂರ್ತಿಯಾಗಿ ಪರಾಕ್ರಮವನ್ನು ಪ್ರದರ್ಶಿಸಬೇಕು. ಕ್ಷತ್ರಿಯನು ತನ್ನ ದೇಹಕ್ಕೆ ಅಪಾಯಕಾರಿಯಾಗಿ ಘಾಸಿಯುಂಟಾದ ಸನ್ನಿವೇಶದ ಹೊರತಾಗಿ ಇತರ ಯಾವುದೇ ಕಾರಣಕ್ಕಾಗಿಯೂ ರಣಭೂಮಿಯನ್ನು ತೊರೆದು ಮರಳಿ ಓಡಿಬರಕೂಡದು. ಹಾಗೆ ಬಂದನಾದರೆ ಅವನು ಧರ್ಮಚ್ಯುತನೂ ನಿಂದನೀಯನೂ ಆಗುತ್ತಾನೆ. ಯುದ್ಧಕರ್ಮವೇ ಕ್ಷತ್ರಿಯನ ಪ್ರಧಾನ ಧರ್ಮವಾಗಿದೆ. ಆದರೂ ರಾಜ್ಯದ ಸಂಪತ್ತನ್ನು ಹಾಗೂ ಪ್ರಜೆಗಳನ್ನು ಯಾರು ಸುಲಿಗೆ ಮಾಡುತ್ತಾರೋ ಅವರನ್ನು ಸಂಹರಿಸುವುದು ಇನ್ನೂ ಹೆಚ್ಚಿನ ಶ್ರೇಷ್ಠವಾದ ಧರ್ಮವಾಗಿದೆ.

  ರಾಜನು ಸ್ವತಃ ದಾನ-ಅಧ್ಯಯನ-ಯಜ್ಞ ಮುಂತಾದ ಉತ್ತಮ ಕರ್ಮಗಳನ್ನು ಆಚರಿಸುತ್ತಿದ್ದರೂ ಅವುಗಳಿಗಿಂತ ಮಿಗಿಲಾದ ಧರ್ಮವೆಂದರೆ ಶತ್ರುಗಳ ಹನನ ಮತ್ತು ಪ್ರಜಾಪರಿಪಾಲನೆಯಾಗಿದೆ. ಸಮಸ್ತ ಪ್ರಜೆಗಳು ಕೂಡ ತಮ್ಮ ತಮ್ಮ ಕರ್ಮಧರ್ಮಗಳಲ್ಲಿ ನಿರತರಾಗಿರುವಂತೆ ರಾಜನಾದವನು ಶಾಸನವನ್ನು ಮಾಡಬೇಕು. ಆ ಮೂಲಕ ಶಾಂತಿಯನ್ನು ಸ್ಥಾಪಿಸಬೇಕು. ಒಂದುವೇಳೆ ಯುಕ್ತವಾದ ಎಲ್ಲ ಧರ್ಮ-ಕರ್ಮಗಳ ಆಚರಣೆ ಮಾಡಲಿ ಅಥವಾ ಮಾಡದಿರಲಿ, ರಾಜನಾದವನು ಕೇವಲ ಪ್ರಜಾಹಿತ ರಕ್ಷಣೆಯ ಮಾತ್ರದಿಂದಲೇ ಕೃತಕೃತ್ಯ ಎನಿಸುವನು.

  ಯುಧಿಷ್ಠಿರ! ನೀತಿಶಾಸ್ತ್ರದಲ್ಲಿ ವಿಪ್ರ ಹಾಗೂ ಕ್ಷತ್ರಿಯರಿಗೆ ಯುಕ್ತವಾಗಿರುವಂತಹ ಧರ್ಮನೀತಿಯನ್ನು ನಿರ್ದೇಶಿಸಿರುವ ಹಾಗೆಯೇ ವೈಶ್ಯವರ್ಣದವರಿಗೂ ಧರ್ಮಶೀಲ ಹಾಗೂ ಕರ್ಮನೀತಿಯನ್ನು ನಿಯುಕ್ತಿಗೊಳಿಸಲಾಗಿದೆ. ಆ ಸನಾತನಧರ್ಮದ ಕುರಿತಾಗಿಯೂ ಒಂದಿಷ್ಟು ವಿಚಾರವನ್ನು ನಿನಗೆ ತಿಳಿಸುವೆನು’ ಎನ್ನುತ್ತ ಭೀಷ್ಮನು ನಿಮಿಷಕಾಲ ಉಸಿರೆಳೆದುಕೊಂಡನು.

  (ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ)

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts