More

    ಶ್ರೀ ರಾಮಕೃಷ್ಣ ಪರಮಹಂಸರ ಪ್ರಕಾರ ಈ ಜಗತ್ತಿನಲ್ಲಿರುವುದು ಮೂರು ಬಗೆಯ ಮನುಜರು- ಯಾರವರು?!

    ಶ್ರೀ ರಾಮಕೃಷ್ಣ ಪರಮಹಂಸರ ಪ್ರಕಾರ ಈ ಜಗತ್ತಿನಲ್ಲಿರುವುದು ಮೂರು ಬಗೆಯ ಮನುಜರು- ಯಾರವರು?!ಶ್ರೀ ರಾಮಕೃಷ್ಣ ಪರಮಹಂಸರು ಈ ಜಗತ್ತಿನ ಮನುಷ್ಯರನ್ನು ಮೂರು ವಿಧವಾಗಿ ವಿಭಜಿಸಿ ತಮ್ಮದೇ ಆದ ರೀತಿಯಲ್ಲಿ ವಿವರಿಸುತ್ತಾರೆ. ಸಾಮಾನ್ಯವಾಗಿ ನಾವು ಈ ಪ್ರಪಂಚದಲ್ಲಿ ಕಾಣುವುದೇನೆಂದರೆ ಜನರು ಒಂದಲ್ಲ ಒಂದು ರೀತಿಯಲ್ಲಿ ಸಾಧನೆಯಲ್ಲಿ ತೊಡಗಿರುತ್ತಾರೆ. ಮತ್ತೆ ಕೆಲವರು ಸಮಯ ಬಂದಾಗ, ಮನಸ್ಸು ಸ್ವಲ್ಪ ಜಝುರಿತವಾದಾಗ ದೇವರು, ಸತ್ಸಂಗ, ಸಾಧನೆ, ಭಜನೆ, ಧ್ಯಾನ ಜಪಾದಿಗಳಲ್ಲಿ ತಮ್ಮನ್ನೇ ತಾವು ತೊಡಗಿಸಿಕೊಂಡು ಭಗವತ್ ಸಾಕ್ಷಾತ್ಕಾರದತ್ತ ಮನಸ್ಸು ಕೇಂದ್ರೀಕರಿಸುವ ಪ್ರಯತ್ನದಲ್ಲಿರುತ್ತಾರೆ. ಈ ರೀತಿಯಲ್ಲಿ ಆಸ್ತಿಕ ಮಹಾಶಯರು ಜೀವನದ ಸಾಫಲ್ಯದತ್ತ ಸಾಗುತ್ತಿದ್ದರೆ ಮತ್ತೆ ಕೆಲವರು ಅಪ್ಪಿತಪ್ಪಿಯೂ ಸಾತ್ವಿಕತೆಯ ಹಾದಿಯಲ್ಲಿ ಪಥಿಸಲು ಪ್ರಯತ್ನವೇ ಪಡುವುದಿಲ್ಲ. ಬದಲಾಗಿ ಜಗತ್ತಿನಲ್ಲಿ ದೊರೆಯುವ ಕ್ಷಣಿಕ ಆಸೆ ಲಾಲಸೆಗಳತ್ತ ಮುಖ ಮಾಡಿ ಸದಾ ತಮ್ಮ ಇಷ್ಟಕಾಮ್ಯಗಳನ್ನು ಪಡೆಯಲು ಶ್ರಮಿಸುತ್ತಾರೆ. ಈ ವರ್ಗದ ಜನರಿಗೆ ಸತ್ಸಂಗ, ಭಗವಂತನ ಸಾಕ್ಷಾತ್ಕಾರ, ಸನ್ಮಾರ್ಗದಲ್ಲಿ ಪಥಿಸುವುದು ಇತ್ಯಾದಿ ಮನಸ್ಸಿಗೆ ಹೊಳೆಯುವುದೇ ಇಲ್ಲ.

    ಬಹುಶಃ ಈ ಆಧುನಿಕ ಪ್ರಪಂಚದಲ್ಲಿ ಈ ತೆರನಾದ ವರ್ಗದವರೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಾರೆ.

    ರಾಮಕೃಷ್ಣರು ಈ ರೀತಿಯಲ್ಲಿ ತಿಳಿಸುತ್ತಾರೆ; ‘ಮೂರು ತರಹದ ಗೊಂಬೆಗಳಿವೆ. ಒಂದನೆಯದು ಉಪ್ಪಿನಿಂದ ಮಾಡಿದ್ದು, ಎರಡನೆಯದು ಬಟ್ಟೆಯಿಂದ ಮಾಡಿದ್ದು, ಮೂರನೆಯದು ಕಲ್ಲಿನಿಂದ ಮಾಡಿದ್ದು. ಇವನ್ನು ನೀರಿನಲ್ಲಿ ಮುಳುಗಿಸಿದರೆ ಉಪ್ಪಿನಗೊಂಬೆ ಕರಗಿ ಹೋಗಿ ತನ್ನ ಆಕಾರವನ್ನು ಕಳೆದುಕೊಳ್ಳುತ್ತದೆ. ಬಟ್ಟೆಯ ಗೊಂಬೆ ಬೇಕಾದಷ್ಟು ನೀರನ್ನು ಹೀರಿಕೊಂಡರೂ ತನ್ನ ಆಕಾರವನ್ನು ಇಟ್ಟುಕೊಂಡಿರುವುದು. ಕಲ್ಲಿನ ಗೊಂಬೆ ತನ್ನಲ್ಲಿ ನೀರು ಇಳಿಯುವುದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಉಪ್ಪಿನಗೊಂಬೆ ಸರ್ವವ್ಯಾಪಿಯಾದ ಪರಮಾತ್ಮನಲ್ಲಿ ಐಕ್ಯವಾದ ಜೀವಾತ್ಮನನ್ನು ಹೋಲುತ್ತದೆ. ಬಟ್ಟೆಯ ಗೊಂಬೆ ಭಕ್ತ ಅಥವಾ ನಿಜವಾಗಿ ದೇವರನ್ನು ಪ್ರೀತಿಸುವವನು. ಅವನು ಪರಮಾನಂದ ಮತ್ತು ಜ್ಞಾನದಿಂದ ಪೂರಿತನಾಗಿರುವನು. ಕಲ್ಲಿನ ಗೊಂಬೆಯೇ ಒಂದು ಸ್ವಲ್ಪ ಜ್ಞಾನವಾದರೂ ತನ್ನ ಮನಸ್ಸನ್ನು ಪ್ರವೇಶಿಸದಂತೆ ನೋಡಿಕೊಳ್ಳುವ ಪ್ರಾಪಂಚಿಕ.’

    ನಿಜ! ಕೆಲವರು ಉಪ್ಪಿನ ಬೊಂಬೆಯ ರೀತಿಯಲ್ಲಿ ಭಗವತ್ ಚಿಂತನೆ, ಸದ್ಗುರುವಿನ ಕೃಪೆ, ಹಾಗೂ ಸಾತ್ವಿಕತೆಯ ಪ್ರಭಾವದಿಂದ ಆ ಬ್ರಹ್ಮಾನಂದಾಮೃತದಲ್ಲಿಯೇ ಕರಗಿ ಹೋಗುತ್ತಾರೆ. ಉದಾಹರಣೆಗೆ ಶುಕಮುನಿ, ಶ್ರೀ ರಾಮಕೃಷ್ಣ ಪರಮಹಂಸರು, ರಮಣ ಮಹರ್ಷಿಗಳು ಇತ್ಯಾದಿ. ಇವರು ನಿತ್ಯ ಸಿದ್ಧರು. ಕೇವಲ ಭಗವದ್ವಾಣಿಯನ್ನು ಶ್ರವಣ ಮಾಡಿದಾಕ್ಷಣ ಆ ಆನಂದಸಾಗರಕ್ಕೆ ತಮ್ಮ ಮನಸ್ಸನ್ನು ಕೂಡಿಸಿಕೊಂಡು ಅದರಲ್ಲಿಯೇ ಲೀನವಾಗಿಬಿಡುತ್ತಾರೆ. ಒಮ್ಮೆ ಗುರುವಾಕ್ಯವನ್ನು ಕೇಳಿದಾಕ್ಷಣ ಬ್ರಹ್ಮಸ್ಥರಾಗಿ ತಮ್ಮನ್ನು ತಾವೇ ಮರೆತು ಆ ಬ್ರಹ್ಮಾನಂದದಲ್ಲಿ ಮುಳುಗಿಬಿಡುತ್ತಾರೆ.

    ಇನ್ನು ಎರಡನೇ ವರ್ಗದ ಜನರು ಬಟ್ಟೆಯ ಬೊಂಬೆಯಂತೆ! ಪವಿತ್ರ ಚಿಂತನೆಗಳಲ್ಲಿ ಮುಳುಗಿ ಹೇಗೆ ಬಟ್ಟೆಯ ಬೊಂಬೆ ನೀರಿನಲ್ಲಿ ನೆನೆದು ಮೆತ್ತಗಾಗಿ ಆ ತೇವವನ್ನು ಹೀರುತ್ತದೆಯೋ ಹಾಗೆಯೇ ಸತ್ಸಂಗ, ನಾಮಜಪಾದಿ, ದೈವೀಸಂಪನ್ನರಾಗಿ ಕಿವಿಯಲ್ಲಿ ಶ್ರವಣ ಮಾಡಿದ ಕ್ಷಣದಿಂದ ಸಾಧನೆಯ ಪಥದಲ್ಲಿ ಧುಮುಕಿ ಸದಾ ಮೋಕ್ಷ ಪ್ರಾಪ್ತಿಗಾಗಿ, ಭಗವತ್ ಸಾಕ್ಷಾತ್ಕಾರಕ್ಕಾಗಿ ಹಾತೊರೆಯುತ್ತಿರುತ್ತಾರೆ. ಈ ತೆರನಾದವರು ಸತ್ಸಂಗಾದಿಗಳಿಗೆ, ಭಗವತ್ ಚಿಂತನೆ, ವಿಚಾರಗಳಲ್ಲಿ ತಮ್ಮ ತನುಮನವನ್ನು ಪೂರ್ಣವಾಗಿ ಅರ್ಪಿಸಿ ಆ ದಿವ್ಯವಾಣಿಯ ರಸಾಮೃತದಲ್ಲಿ ನೆನೆದು ಸಾಧನೆಯ ಸುಪಥದಲ್ಲಿ ಸಾಗುತ್ತಾರೆ. ಇವರೇ ನಿಜವಾದ ಸಾಧಕರು, ಸಜ್ಜನರು, ಭಗವತ್ ಭಕ್ತರು ಎನಿಸುತ್ತಾರೆ.

    ಇನ್ನು ಕೊನೆಯ ವರ್ಗದವರು ಕಲ್ಲಿನಂತೆ ಯಾವ ರೀತಿಯಲ್ಲೂ ಮನಸ್ಸನ್ನು ಕರಗಿಸದೆ, ತೊಡಗಿಸದೆ, ಏನೇ ಆದರೂ ಯಾವ ಸತ್​ಚಿಂತನೆಗಳು ಒಳಬರದಂತೆ ತಡೆದು ತಮ್ಮ ತಾಮಸಿಕ ವಿಚಾರವೇ ಸರ್ವಸ್ವ ಎಂದು ಬಗೆದು ತಮ್ಮ ಅಮೂಲ್ಯ ಜನ್ಮವನ್ನು ಹಾನಿ ಮಾಡಿಕೊಂಡು ಸದಾ ಸುಖ, ಆಸೆ, ಲಾಲಸೆ, ಭೋಗವಸ್ತುಗಳ ಹಿಂದೆ ಬೀಳುತ್ತಾರೆ. ಅಪ್ಪಿತಪ್ಪಿಯೂ ಪವಿತ್ರ ಚಿಂತನೆಗಳಿಗೆ, ಸತ್ಸಂಗಾದಿಗಳಿಗೆ, ದೈವೀಕತೆಯ ಗೋಜಿಗೆ ಹೋಗದೆ ಕೇವಲ ಮೃಗೀಯ ರೀತಿಯ ಸಾಮಾನ್ಯ ಜೀವನವನ್ನು ನಡೆಸಿಕೊಂಡು ಜೀವಿಸುತ್ತಾರೆ. ಈ ವರ್ಗದವರನ್ನೇ ರಾಮಕೃಷ್ಣರು ಕಲ್ಲಿನ ಬೊಂಬೆಗೆ ಹೋಲಿಸುತ್ತಾರೆ.

    ಶ್ರೀ ರಾಮಕೃಷ್ಣ ಪರಮಹಂಸರ ಅಮೃತವಾಣಿಯ ‘ವಚನವೇದ’ ಸಂಪುಟದ ಮುನ್ನುಡಿಯಲ್ಲಿ ಕುವೆಂಪು ಹೀಗೆ ಬರೆದಿರುವರು. ‘ಇಲ್ಲಿ ವೇದ ವೇದಾಂತ ದರ್ಶನಾದಿ ಸರ್ವಸಾರವಿದೆ. ಓದು ಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಅವಶ್ಯಕತೆಯಿಲ್ಲ; ಯಾವ ವಿದ್ವತ್ಪೂರ್ಣವಾದ ತತ್ತ್ವಜ್ಞಾನಿಗೂ ಕೀಳೆಂದು ನಾಚಬೇಕಾಗಿಲ್ಲ. ಅದಕ್ಕೆ ಬದಲು ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂದರಿತು ನಿರ್ಮಮನಾಗುತ್ತಾನೆ, ಶಾಂತನಾಗುತ್ತಾನೆ, ಪೂರ್ಣನಾಗುತ್ತಾನೆ. ಆತನಿಗೆ ಗಗನದ ವೈಶಾಲ್ಯ, ಹೈಮಾಚಲದ ಔನ್ನತ್ಯ, ಅಂಬುಧಿಯ ಗಂಭೀರ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತವೆ. ಇಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ, ಇಷ್ಟು ಸರ್ವಸುಲಭ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್​ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ.’

    ಈ ಕಾರಣದಿಂದಲೇ ಶ್ರೀ ರಾಮಕೃಷ್ಣ ವಚನವೇದ ಈ ಯುಗದ ಸಾಧಕರಿಗೆ ಸಾಕ್ಷಾತ್ಕಾರದ ಕೈಪಿಡಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts