More

    ಪಡಿತರ ಚೀಟಿಗಾಗಿ ಪರದಾಟ

    ಶಿರಸಿ: ಹೊಸ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆ ಸ್ಥಗಿತಗೊಂಡು ವರ್ಷ ಕಳೆದಿದ್ದು, ಅರ್ಜಿದಾರರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದರಿಂದ ಕರೊನಾ ಕಾಲಘಟ್ಟದಲ್ಲಿ ಸಂಕಷ್ಟಕ್ಕೊಳಗಾದವರಿಗೆ ಸಕಾಲದಲ್ಲಿ ಸರ್ಕಾರದ ವಿವಿಧ ನೆರವು ಸಿಗದಂತಾಗಿದೆ.

    ಜಿಲ್ಲೆಯಲ್ಲಿ 3249 ಕುಟುಂಬಗಳು ಬಿಪಿಎಲ್ ಕಾರ್ಡ್ ಮಾಡಿಸಲು ಹಾಗೂ 1041 ಕುಟುಂಬಗಳು ಎಪಿಎಲ್ ಕಾರ್ಡ್ ಮಾಡಿಸಲು ಅರ್ಜಿ ಸಲ್ಲಿಸಿವೆ. ಆದರೆ, ಹೊಸ ಪಡಿತರ ಚೀಟಿ ನೀಡುವ ಕಾರ್ಯ ಸ್ಥಗಿತಗೊಳಿಸಲಾಗಿದೆ. ಕಾರ್ಡ್ ಪಡೆಯಲು ಅರ್ಜಿದಾರರು ಕಚೇರಿಗೆ ಅಲೆದು, ಸೋತಿದ್ದಾರೆ.

    ಕಾರ್ಡ್ ಇಲ್ಲದಿದ್ದರೆ ಏನೇನು ಸಮಸ್ಯೆ?: ಕರೊನಾ ಸಂದರ್ಭದಲ್ಲಿ ಕೂಲಿಯನ್ನೂ ಮಾಡಲಾಗದೆ, ನಿತ್ಯದ ಊಟಕ್ಕೆ ಪರಿತಪಿಸುವ ಪರಿಸ್ಥಿತಿ ಹಲವು ಕುಟುಂಬಗಳಿಗೆ ಬಂದಿದೆ. ಇಂಥ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವರದಾನವಾಗುತ್ತಿತ್ತು. ಆದರೆ, ರೇಶನ್ ಕಾರ್ಡ್ ಸಿಗದ ಕಾರಣ ಜಿಲ್ಲೆಯ 3200 ಕ್ಕೂ ಅಧಿಕ ಕುಟುಂಬಗಳಿಗೆ ಆಹಾರ ಧಾನ್ಯ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿದೆ. ಕಾರ್ಡ್ ಸಿಗದ ಕಾರಣ ಗಂಭೀರ ಕಾಯಿಲೆ ಇರುವ ಹಲವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೊಸ ಮನೆ ನಿರ್ವಿುಸಿಕೊಳ್ಳಲು ಅನುಮತಿ ಪಡೆಯಲು ಗ್ರಾಮ ಪಂಚಾಯಿತಿಗಳಿಗೆ ರೇಷನ್ ಕಾರ್ಡ್ ಸಲ್ಲಿಸುವುದು ಕಡ್ಡಾಯವಾಗಿದೆ. ಇಷ್ಟೇ ಅಲ್ಲದೆ, ಬಡ ಕುಟುಂಬಗಳು ಸರ್ಕಾರದ ನಾನಾ ಯೋಜನೆಗಳ ಉಪಯೋಗ ಪಡೆಯಲು ಬಿಪಿಎಲ್ ಪಡಿತರ ಕಾರ್ಡ್ ಬೇಕೇಬೇಕು.

    ಹೊಸ ಅರ್ಜಿ ಏಕೆ..?: ರಾಜ್ಯ ಹೊರ ರಾಜ್ಯಗಳಲ್ಲಿ ಉದ್ಯೋಗ, ಕೂಲಿ ಮಾಡಿಕೊಂಡಿದ್ದ ಹಲವರು ಕೋವಿಡ್ ಲಾಕ್​ಡೌನ್​ನಿಂದ ಸಂಕಷ್ಟಕ್ಕೊಳಗಾಗಿ ಊರಿಗೆ ಮರಳಿದ್ದಾರೆ. ಇಲ್ಲಿ ಸರ್ಕಾರದ ಸೌಲಭ್ಯ ಪಡೆಯಲು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ವಿಂಗಡಣೆಯಾದ ಅವಿಭಕ್ತ ಕುಟುಂಬದ ಸದಸ್ಯರು ಪ್ರತ್ಯೇಕ ಪಡಿತರ ಚೀಟಿಗಾಗಿ ಅರ್ಜಿ ಗುಜರಾಯಿಸಿದ್ದಾರೆ.

    ಎಪಿಎಲ್ ಕಾರ್ಡ್​ಗಳಿಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಹೊರ ರಾಜ್ಯದಿಂದ ಬಂದವರಿಗೆ ಬಿಪಿಎಲ್ ಕಾರ್ಡ್​ಗಳನ್ನು ನೀಡಲು ಸರ್ಕಾರ ನಮಗಿನ್ನೂ ಅನುಮತಿ ನೀಡಿಲ್ಲ. ಸರ್ಕಾರದಿಂದ ಅನುಮತಿ ಬಂದ ತಕ್ಷಣ ಪರಿಶೀಲನೆ ನಡೆಸಿ ಶೀಘ್ರ ಕಾರ್ಡ್ ವಿತರಿಸಲಾಗುವುದು.

    ಮಂಜುನಾಥ

    ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts