More

    ಪಪಂಗೂ ಇಲ್ಲ, ಇತ್ತ ಗ್ರಾಪಂ ಅಲ್ಲ

    ಕಬ್ಬೂರ: ರಾಜ್ಯಾದ್ಯಂತ ಗ್ರಾಪಂ ಚುನಾವಣೆ ರಂಗೇರಿದೆ. ಹಳ್ಳಿಗಳು ರಾಜಕೀಯ ಪಟ್ಟುಗಳ ತಾಲೀಮು ತಾಣಗಳಂತಾಗಿದ್ದು, ದಿನದಿಂದ ದಿನಕ್ಕೆ ತಂತ್ರ-ಪ್ರತಿ ತಂತ್ರಗಾರಿಕೆ ಹೆಚ್ಚತೊಡಗಿದೆ. ಇಂಥ ಚಟುವಟಿಕೆಗಳ ಮಧ್ಯೆ ಕೆಲ ಗ್ರಾಮಗಳು ತ್ರಿಶಂಕು ಸ್ಥಿತಿ ಅನುಭವಿಸುತ್ತಿವೆ. ಗ್ರಾಪಂಗಳು ಪಪಂ ಆಗಿ ಮೇಲ್ದರ್ಜೆಗೇರಿದ ಬಳಿಕ ಉಂಟಾದ ಗೊಂದಲದಿಂದ ಈ ಸಮಸ್ಯೆ ಎದುರಾಗಿದೆ. ಹುಕ್ಕೇರಿ ತಾಲೂಕಿನ ನಾಲ್ಕು ಗ್ರಾಮಗಳು ಹತ್ತು ವರ್ಷಗಳಿಂದ ಚುನಾವಣೆಯಿಂದ ದೂರು ಉಳಿದಿವೆ.

    ಕಬ್ಬೂರ ಪಪಂ ವ್ಯಾಪ್ತಿಯಲ್ಲಿರುವ ಜೋಡಟ್ಟಿ, ಮೀರಾಪುರಹಟ್ಟಿ, ಚಿಕ್ಕೋಡಿ ರಸ್ತೆ ಹಾಗೂ ಕೆಂಚನಟ್ಟಿ ಗ್ರಾಮಗಳು ಕಳೆದ ಎರಡು ಅವಧಿಯಿಂದ ಚುನಾವಣೆಯಿಂದ ದೂರ ಉಳಿದಿವೆ. ಈ ಮೊದಲು ಗ್ರಾಪಂ ಆಗಿದ್ದ ಕಬ್ಬೂರನ್ನು ರಾಜ್ಯ ಸರ್ಕಾರದ ಆದೇಶದ ಮೇರೆಗೆ ಮೇಲ್ದರ್ಜೆಗೇರಿಸಲಾಗಿದೆ. ಈಗಾಗಲೇ ಕಬ್ಬೂರ ಪಪಂಗೆ ಸೇರಿರುವ ಈ ಗ್ರಾಮಗಳು ಪಟ್ಟಣದಿಂದ ಸುಮಾರು ಏಳು ಕಿ.ಮೀ ದೂರದಲ್ಲಿವೆ. ಹಾಗಾಗಿ, ನಮ್ಮನ್ನು ಪಪಂ ವ್ಯಾಪ್ತಿಗೆ ಸೇರಿಸಬಾರದು.

    ನಾಲ್ಕೂ ಗ್ರಾಮಗಳನ್ನು ಸೇರಿಸಿ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚಿಸಬೇಕು ಎನ್ನುವುದು ಸ್ಥಳೀಯರ ಆಗ್ರಹ. ಅದೇ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಈ ಗ್ರಾಮಸ್ಥರು ಹತ್ತು ವರ್ಷಗಳಿಂದ ಮತದಾನವನ್ನೇ ಮಾಡಿಲ್ಲ. ಕಬ್ಬೂರ ಪಪಂಗೆ ಗ್ರಾಮಗಳನ್ನು ಸೇರಿಸಲು ಈ ಗ್ರಾಮಸ್ಥರು ಒಪ್ಪಿಗೆಯನ್ನೂ ನೀಡಿಲ್ಲ. ನಾಲ್ಕು ಗ್ರಾಮಗಳು ಸೇರಿ ಒಟ್ಟು 4 ಸಾವಿರಕ್ಕಿಂತ ಅಧಿಕ ಜನಸಂಖ್ಯೆ ಹೊಂದಿವೆ.

    ಈ ಗ್ರಾಮಗಳನ್ನು ಸೇರಿಸಿ ನೂತನ ಗ್ರಾಪಂ ರಚಿಸಬೇಕೆಂದು ಗ್ರಾಮಸ್ಥರು ನ್ಯಾಯಾಲಯದ ಮೊರೆ ಹೋದರು. ಹೀಗಾಗಿ ಕಬ್ಬೂರ ಪಟ್ಟಣ ಸೇರಿ ಇತರ ನಾಲ್ಕು ಗ್ರಾಮಗಳು ಸ್ಥಳೀಯ ಚುನಾವಣೆಯಿಂದ ದೂರ ಉಳಿದಿವೆ. ಈ ವ್ಯಾಜ್ಯದಿಂದ ಕಬ್ಬೂರ ಪಪಂಗೂ ಚುನಾವಣೆ ನಡೆದಿಲ್ಲ.
    ಈಗ ಆಡಳಿತಾಧಿಕಾರಿ ಮೂಲಕ ಆಡಳಿತ ನಡೆಯುತ್ತಿದೆ.

    ಸರ್ವೇ ನಡೆಸಲು ಸೂಚನೆ: ಪಟ್ಟಣ ಪಂಚಾಯಿತಿ ಬೇಡವೆಂದು ಪಟ್ಟು ಹಿಡಿದು ನ್ಯಾಯಾಲಯದ ಮೋರೆ ಹೋದ ಪ್ರಕರಣದ ಕುರಿತು ಜನರ ಅಭಿಪ್ರಾಯ ತಿಳಿಸಿ ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಸೂಚಿಸಿತ್ತು. ಆ ಬಳಿಕ ಜಿಲ್ಲಾಧಿಕಾರಿಗಳ ತಂಡ ನಾಲ್ಕು ಗ್ರಾಮಗಳ ಜನರ ಅಭಿಪ್ರಾಯ ಪಡೆದು ಕಬ್ಬೂರ ಮಜರೆ ಹೊರತುಪಡಿಸಿ, ಕಂದಾಯ ಗ್ರಾಮ ಎಂದು ಘೋಷಣೆ ಮಾಡಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

    ಕಬ್ಬೂರ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರಿಸುವುದಕ್ಕೆ ನಾಲ್ಕೂ ಗ್ರಾಮಸ್ಥರ ಒಪ್ಪಿಗೆ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ತಕ್ಷಣ ಸರ್ವೇ ನಡೆಸಬೇಕು. ಹತ್ತು ವರ್ಷಗಳಿಂದ ಗ್ರಾಮಸ್ಥರು ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ದೂರ ಉಳಿದುಕೊಂಡಿದ್ದಾರೆ.
    |ಕಲ್ಲಪ್ಪ ಕರಗಾಂವೆ ಸ್ಥಳೀಯ ನಿವಾಸಿ

    ನಾಲ್ಕು ಗ್ರಾಮಗಳಲ್ಲಿ ಸರ್ವೇ ನಡೆಸುವಂತೆ ಜಿಲ್ಲಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ. ಸರ್ವೇ ನಡೆಸಿ, ಕಂದಾಯ ಗ್ರಾಮಗಳಾಗಿ ಘೋಷಿಸಿದರೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು.
    |ದುರ್ಯೋಧನ ಐಹೊಳೆ ಶಾಸಕ

    | ಮಹಾಂತೇಶ ಮಠಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts