More

    ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಸೇತುವೆ ಕಾಮಗಾರಿ ಪುನರಾರಂಭ

    ಬಂಟ್ವಾಳ: ಬಿ.ಸಿ.ರೋಡು- ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ-75 ಅಭಿವೃದ್ಧಿ ಭಾಗವಾಗಿ ಸ್ಥಗಿತಗೊಂಡಿದ್ದ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ನೂತನ ಸೇತುವೆ ರಚನೆ ಕಾಮಗಾರಿ ಪುನರಾರಂಭಗೊಂಡಿದೆ. ಎರಡು ವರ್ಷಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ 386 ಮೀ. ಉದ್ದದ ಹೊಸ ಸೇತುವೆಯೂ ಸಂಚಾರಕ್ಕೆ ತೆರೆದುಕೊಳ್ಳಲಿದೆ.


    ಹಲವು ವರ್ಷಗಳಿಂದ ಅರ್ಧಕ್ಕೆ ನಿಂತಿದ್ದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೆಲವು ತಿಂಗಳ ಹಿಂದೆ ಆರಂಭಗೊಂಡಿದ್ದು, ಕಾಮಗಾರಿಗಳನ್ನು ಎರಡು ವಿಭಾಗಗಳನ್ನಾಗಿ ಮಾಡಿ ಪ್ರತ್ಯೇಕ ಕಂಪನಿಗಳಿಗೆ ಗುತ್ತಿಗೆ ನೀಡಲಾಗಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ 15 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಯನ್ನು 317 ಕೋಟಿ ರೂ. ಮಹಾರಾಷ್ಟ್ರ ಪುಣೆ ಮೂಲದ ಶ್ರೀ.ಎಸ್.ಎಂ.ಔತಾಡೆ ಪ್ರೈವೆಟ್ ಲಿ. ಕಂಪನಿ ನಿರ್ವಹಿಸುತ್ತಿದೆ. ಪೆರಿಯಶಾಂತಿಯಿಂದ ಬಿ.ಸಿ.ರೋಡು ತನಕ 49 ಕಿ.ಮೀ. ರಸ್ತೆ ಕಾಮಗಾರಿಯನ್ನು ಸುಮಾರು 1600 ಕೋಟಿ ರೂ.ಗಳಲ್ಲಿ ಹೈದರಾಬಾದ್ ಮೂಲದ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಲಿಮಿಟೆಡ್ ಸಂಸ್ಥೆ ನಿರ್ವಹಿಸುತ್ತದೆ.

    ಸೇತುವೆಯ ಎರಡೂ ಬದಿಗಳಲ್ಲಿ ಅಬಾರ್ಡ್ಮೆಂಟ್‌ಗಳಿದ್ದು, ಸರಾಸರಿ 38 ಮೀ. ಅಂತರದಲ್ಲಿ 11 ಪಿಲ್ಲರ್‌ಗಳು ನಿರ್ಮಾಣಗೊಳ್ಳಲಿದೆ. ಈಗಾಗಲೇ ಪಾಣೆಮಂಗಳೂರು ಭಾಗದಿಂದ ಪಿಲ್ಲರ್‌ಗಳಿಗೆ ಬೆಡ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ತುಂಬೆ ಡ್ಯಾಂನ ಹಿನ್ನೀರಿನಿಂದ ನದಿಯಲ್ಲಿ ನೀರು ತುಂಬಿರುವುದರಿಂದ ಮಣ್ಣು ಹಾಕಿ ಕಾಮಗಾರಿ ಮುಂದುವರಿಸಲಾಗುತ್ತಿದೆ.

    ಹಾಲಿ ಕಾಮಗಾರಿಯಲ್ಲಿ ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಹೊಸ ಸೇತುವೆ ನಿರ್ಮಾಣಗೊಂಡರೆ, ಉಪ್ಪಿನಂಗಡಿಯಲ್ಲಿ ಕುಮಾರಧಾರಾ ನದಿಗೆ ಸೇತುವೆಯೊಂದು ನಿರ್ಮಾಣವಾಗಲಿದೆ. ಸದ್ಯಕ್ಕೆ ಪಾಣೆಮಂಗಳೂರಿನಲ್ಲಿ ನಿರ್ಮಾಣಗೊಳ್ಳುವ ಸೇತುವೆ 3ನೇ ಸೇತುವೆಯಾಗಿದ್ದು, ಪ್ರಾರಂಭದ ಸೇತುವೆಯು ಉಕ್ಕಿನ ಸೇತುವೆಯಾಗಿದೆ. ಜತೆಗೆ ಒಂದು ರೈಲ್ವೆ ಹಳಿಯ ಸೇತುವೆಯೂ ಇಲ್ಲಿದೆ.

    6 ಲೇನ್ ಫ್ಲೈಓವರ್: ಕಲ್ಲಡ್ಕದಲ್ಲಿ 6 ಲೇನ್ ಫ್ಲೈಓವರ್ ಸೇರಿದಂತೆ ಸರ್ವೀಸ್ ರಸ್ತೆಗಳು, ಅಂಡರ್‌ಪಾಸ್ ರಸ್ತೆ, ಓವರ್‌ಪಾಸ್ ರಸ್ತೆ, 2 ಬೃಹತ್ ಸೇತುವೆಗಳು ಸೇರಿದಂತೆ ಒಟ್ಟು 49 ಕಿ.ಮೀ. ಉದ್ದದ ಹೆದ್ದಾರಿ ಪೂರ್ಣ ಕಾಮಗಾರಿಯನ್ನು ಮುಗಿಸುವುದಕ್ಕೆ ಕೆಎನ್‌ಆರ್ ಕನ್‌ಸ್ಟ್ರಕ್ಷನ್ ಸಂಸ್ಥೆಗೆ 2023ರ ನವೆಂಬರ್ 22ಕ್ಕೆ ಗಡುವು ನೀಡಲಾಗಿದೆ. ಹಾಲಿ ನಡೆಯುವ ರೀತಿಯಲ್ಲಿ ವೇಗವಾಗಿ ಕಾಮಗಾರಿ ನಡೆದರೆ ಅದಕ್ಕಿಂತ ಮುಂಚಿತವಾಗಿಯೇ ಕಾಮಗಾರಿಯನ್ನು ಬಿಟ್ಟು ಕೊಡಲಿದ್ದೇವೆ ಎಂದು ಸಂಸ್ಥೆಯ ಹಿರಿಯ ಅಧಿಕಾರಿಗಳು ವಿವರಿಸುತ್ತಾರೆ.

    ಹಾಲಿ ಸೇತುವೆಗಿಂತಲೂ ವಿಸ್ತಾರ: ಪಾಣೆಮಂಗಳೂರಿನಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ನೂತನ ಸೇತುವೆ ಹಾಲಿ ಇರುವ ಸೇತುವೆಗಿಂತಲೂ ವಿಸ್ತಾರವಾಗಿದ್ದು, ಹಿಂದಿನ ಸೇತುವೆ 10.4 ಮೀ. ಅಗಲವನ್ನು ಹೊಂದಿದ್ದರೆ, ನೂತನ ಸೇತುವೆ 13.5 ಮೀ. ಅಗಲವಾಗಿರುತ್ತದೆ. ನದಿಯಿಂದ ಸುಮಾರು 16 ಮೀ. ಎತ್ತರದಲ್ಲಿ ನಿರ್ಮಾಣವಾಗಲಿರುವ 386 ಮೀ. ಉದ್ದ ಹೊಂದಿದೆ.

    ಪ್ರಸ್ತುತ ನಮ್ಮ ಸಂಸ್ಥೆಗೆ ಪೂರ್ತಿ ಹೆದ್ದಾರಿ ಕಾಮಗಾರಿಗೆ 2 ವರ್ಷಗಳ ಅವಧಿಯನ್ನು ನೀಡಲಾಗಿದ್ದು, ಅವಧಿಗೆ ಮುಂಚಿತವಾಗಿಯೇ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ. ಪಾಣೆಮಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚು ಅಗಲವಾದ 386 ಮೀ. ಉದ್ದದ ಸೇತುವೆ ನಿರ್ಮಾಣವಾಗಲಿದೆ.
    -ಮಹೇಂದ್ರ ಸಿಂಗ್ ಪ್ರಾಜೆಕ್ಟ್ ಮ್ಯಾನೇಜರ್, ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts