More

    ಕಾರ್ಮಿಕರು ಸಿಗದೆ ಕಬ್ಬು ನಾಶಪಡಿಸಿದ ರೈತ

    ಪಾಂಡವಪುರ: ಕಬ್ಬು ಕಟಾವು ಮಾಡಲು ಕೂಲಿ ಕಾರ್ಮಿಕರು ಸಿಗಲಿಲ್ಲ ಎಂಬ ಕಾರಣಕ್ಕಾಗಿ ಮನನೊಂದ ರೈತನೊಬ್ಬ ಕಟಾವು ಹಂತ ತಲುಪಿದ್ದ ಕಬ್ಬನ್ನು ಟಿಲ್ಲರ್ ಹೊಡೆಯುವ ಮೂಲಕ ನಾಶಪಡಿಸಿದ್ದಾನೆ.

    ತಾಲೂಕಿನ ಚಿಕ್ಕಬ್ಯಾಡರಳ್ಳಿ ಗ್ರಾಮದ ರೈತ ಚಂದನ್ ತಾವು ಬೆಳೆದಿದ್ದ ಕಬ್ಬನ್ನು ಟ್ರ್ಯಾಕ್ಟರ್‌ಗೆ ಟಿಲ್ಲರ್ ಅಳವಡಿಸಿ ನಾಶಪಡಿಸಿದ್ದಾರೆ. ಇವರು ತಮ್ಮ 1.10 ಎಕರೆ ಜಮೀನಿನಲ್ಲಿ ಅಂದಾಜು 50 ಟನ್ ಕಬ್ಬು ಬೆಳೆದಿದ್ದರು. ಲಾಕ್‌ಡೌನ್ ಪರಿಣಾಮ ಕಬ್ಬು ಕಟಾವು ಮಾಡಲು ಕಾರ್ಮಿಕರು ಸಿಗದಿದ್ದ ಹಿನ್ನೆಲೆಯಲ್ಲಿ ಬೇಸರಗೊಂಡು ಕಬ್ಬು ನಾಶ ಮಾಡಿದರು.

    ಕಬ್ಬಿಗೆ ಈಗಾಗಲೇ 20 ತಿಂಗಳು ಕಳೆದಿದ್ದು, ಕೃಷಿ ಕಾರ್ಮಿಕರ ಸಮಸ್ಯೆ ಜತೆಗೆ ಆಲೆಮನೆ ಮಾಲೀಕರು ಕಬ್ಬು ಖರೀದಿಗೆ ಮುಂದಾಗದ ಹಿನ್ನೆಲೆಯಲ್ಲಿ ಇನ್ನೂ ಹೆಚ್ಚಿನ ದಿನಗಳು ಕಳೆದರೆ ಕಬ್ಬು ಅನುಪಯುಕ್ತವಾಗುತ್ತದೆ ಎಂಬ ಆತಂಕದಿಂದ ಕಬ್ಬನ್ನು ನಾಶ ಮಾಡಲು ತೀರ್ಮಾನಿಸಿದರು.

    ಕಬ್ಬಿಗೆ ಬೇಡಿಕೆ ಇದೆ : ತಾಲೂಕಿನಲ್ಲಿ ಕಬ್ಬಿಗೆ ಭಾರಿ ಬೇಡಿಕೆ ಇದ್ದು, ಆಲೆಮನೆ ಮಾಲೀಕರು ಹಾಸನ, ಹೊಳೆನರಸೀಪುರ ಮುಂತಾದ ಭಾಗಗಳಿಂದ ಟನ್ ಕಬ್ಬಿಗೆ 1800 ರಿಂದ 1900 ರೂ. ನೀಡಿ ಖರೀದಿಸುತ್ತಿದ್ದಾರೆ. ಸ್ಥಳಕ್ಕೆ ಕಬ್ಬು ಸರಬರಾಜು ಮಾಡಿದರೆ 2700 ರೂ. ನೀಡಲಾಗುತ್ತಿದೆ. ಬೆಳೆ ನಾಶ ಮಾಡಿರುವ ರೈತ ಸರಿಯಾದ ಕ್ರಮದಲ್ಲಿ ಕಬ್ಬು ಬೆಳೆಯದ ಕಾರಣ ಕಬ್ಬು ನಾಶ ಮಾಡುವ ತೀರ್ಮಾನ ಮಾಡಿದ್ದಾರೆ.

    ಕಬ್ಬು ನಾಶ ಮಾಡಿರುವ ರೈತನಿಗೆ ಸ್ವತಃ ಆಲೆಮನೆ ಇದ್ದು, ಇತರರಿಂದ ಕಬ್ಬು ಖರೀದಿಸುತ್ತಿದ್ದಾರೆ. ಆಲೆಮನೆ ಮಾಲೀಕರ ಮೇಲೆ ಕೆಟ್ಟ ಹೆಸರು ತರಲು ಈ ರೀತಿ ಮಾಡಿದ್ದಾರೆ ಎಂದು ಆಲೆಮನೆ ಮಾಲೀಕರು ಆರೋಪಿಸಿದ್ದಾರೆ.

    ಸರಿ ಕ್ರಮದಲ್ಲಿ ಬೆಳೆದಿಲ್ಲ: ಕಬ್ಬಿಗೆ ಸರಿಯಾಗಿ ಫೋಷಣೆ ಮಾಡದೆ ತರಗು ಬಿಟ್ಟು ಸರಿಯಾದ ಕ್ರಮದಲ್ಲಿ ಬೆಳೆದಿಲ್ಲ. ಜಮೀನಿನ ಒಂದು ಭಾಗದಲ್ಲಷ್ಟೇ ಕಬ್ಬು ನಾಶ ಪಡಿಸಿದ್ದಾರೆ. ಸ್ವಂತ ಆಲೆಮನೆ ಹೊಂದಿರುವ ಅವರು ಯಾವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ತಿಳಿಯುತ್ತಿಲ್ಲ. ಕೃಷಿ ಇಲಾಖೆಯಿಂದ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಪ್ರಿಯದರ್ಶಿನಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts