More

    ಪಂಚಮಸಾಲಿಗೆ 2‘ಎ’ ಮೀಸಲಾತಿಗೆ ವಿರೋಧ

    ಚಿತ್ರದುರ್ಗ: ಪಂಚಮಸಾಲಿ ಸೇರಿ ಇತರೆ ಬಲಿಷ್ಠ, ಮುಂದುವರೆದ ಸಮುದಾಯಗಳ ಬೇಡಿಕೆಗೆ ಮಣಿದು ಸರ್ಕಾರ 2‘ಎ’ ಮೀಸಲಾತಿ ನೀಡಬಾರದು. ಒಂದು ವೇಳೆ ನೀಡಿದರೆ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧ ಎಂದು ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಎಂ.ಸಿ.ವೇಣುಗೋಪಾಲ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

    ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಸಮುದಾಯಕ್ಕೆ ಮೀಸಲಾತಿ ನೀಡುವ ಮುನ್ನ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ಸ್ಥಿತಿಗತಿ, ರಾಜಕೀಯ ಪ್ರಾತಿನಿಧ್ಯ, ಶಿಕ್ಷಣ ಹಾಗೂ ಆರ್ಥಿಕ ಪರಿಸ್ಥಿತಿ ಕುರಿತು ಅಧ್ಯಯನದ ವರದಿ ಆಧರಿಸಿಯೇ ನೀಡಬೇಕು. ಅಂಬೇಡ್ಕರ್ ಅವರ ಸಂವಿಧಾನದ ಆಶಯ ಮೀರಿ ಮೀಸಲಾತಿ ನೀಡಲು ಮುಂದಾಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

    ಹಾಲಿ ಎಲ್ಲ ಹಿಂದುಳಿದ ವರ್ಗಗಳಿಗೂ ಶೇ.32ರಷ್ಟು ಮೀಸಲಾತಿ ಇದ್ದು, ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಯಾವುದೇ ಮಾನದಂಡ ಕೂಡ ಅನುಸರಿಸದೆ ಸರ್ಕಾರ ನೀಡಿದೆ. ಹೀಗಾಗಿ ಶೇ.90ರಷ್ಟು ಜಾತಿಗಳು ಸೌಲಭ್ಯಗಳಿಂದ ವಂಚಿತವಾಗಿವೆ. ಇದನ್ನು ಮರು ಪರಿಶೀಲಿಸುವ ಮೂಲಕ ಸರಿಪಡಿಸಬೇಕು ಎಂದು ಒತ್ತಾಯಿಸಿದರು.
    ನಮ್ಮಲ್ಲೂ ಬಡವರಿದ್ದಾರೆ ಇದ್ದು, ಪ್ರವರ್ಗ 2 ‘ಎ’ಗೆ ಸೇರಿಸುವಂತೆ ಅನೇಕ ಸಮುದಾಯಗಳು ಒತ್ತಾಯಿಸುತ್ತಿವೆ. ಅವಶ್ಯ ಎನಿಸಿದಲ್ಲಿ ವಿಶೇಷ ಬಡತನ ನಿರ್ಮೂಲನಾ ಕಾರ್ಯಕ್ರಮ ಆಯೋಜಿಸಿ ಸರ್ಕಾರ ಇಂತಹ ವರ್ಗವನ್ನು ಮುಖ್ಯವಾಹಿನಿಗೆ ತರಲಿ ಎಂದರು.

    3 ‘ಎ’, 3 ‘ಬಿ’ ಪಟ್ಟಿಯಲ್ಲಿ ಇದೇ ರೀತಿ ಎರಡು ಬಲಿಷ್ಠ ಸಮುದಾಯಗಳಿದ್ದು, ಅಭಿವೃದ್ಧಿ ನಿಗಮ ಸ್ಥಾಪಿಸಿ ತಲಾ 500 ಕೋಟಿ ರೂ. ಮೀಸಲಿಟ್ಟಿದೆ. ಆದರೆ, ಹಿಂದುಳಿದ ಸಮುದಾಯಕ್ಕೆ ತಾರತಮ್ಯ ಮಾಡುತ್ತಿದೆ ಎಂದು ದೂರಿದರು.

    ಪ್ರಧಾನ ಕಾರ್ಯದರ್ಶಿ ಎಂ.ನಾಗರಾಜ್, ಖಜಾಂಚಿ ಎಲ್.ಎ.ಮಂಜುನಾಥ್, ಜವಳಿ ನಿಗಮದ ಮಾಜಿ ಅಧ್ಯಕ್ಷ ಗೋ.ತಿಪ್ಪೇಶ್, ಕುರುಬ ಸಂಘದ ಜಿಲ್ಲಾಧ್ಯಕ್ಷ ಎಸ್.ಶ್ರೀರಾಮ್, ವಕೀಲ ಸಂಘದ ಜಿಲ್ಲಾಧ್ಯಕ್ಷ ಸಿ.ಶಿವುಯಾದವ್, ಜನಶಕ್ತಿ ಸಂಘಟನೆಯ ಟಿ.ಶಫಿವುಲ್ಲಾ, ಸವಿತಾ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಡಿ.ಕುಮಾರ್, ಮುಖಂಡರಾದ ರುದ್ರಪ್ಪ, ಶ್ರೀನಿವಾಸ್, ಶಿವಶಂಕರ್, ತಿಮ್ಮಯ್ಯ, ಜಗದೀಶ್ ಇತರರಿದ್ದರು.

    *ಕೋಟ್
    ಮೀಸಲಾತಿಗಾಗಿ ಮಠಾಧೀಶರು ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಒಬಿಸಿಗೆ ದೊಡ್ಡ ಪೆಟ್ಟು ಬೀಳಲಿದೆ. ಆದ್ದರಿಂದ ಸಮುದಾಯಗಳ ಮೀಸಲಾತಿ ರಕ್ಷಣೆಗಾಗಿ ಚಿತ್ರದುರ್ಗ ಜಿಲ್ಲೆಯ ಹಿಂದುಳಿದ ವರ್ಗಗಳ ಮಠಾಧೀಶರು ನಮ್ಮ ಹೋರಾಟ ಬೆಂಬಲಿಸಬೇಕು.
    ಎಂ.ಸಿ.ವೇಣುಗೋಪಾಲ್ ವೇದಿಕೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts