More

  ಬಿಹಾರ ಚಿತ್ರಣ ಬದಲಿಸಿದ ಪಲ್ಟು ಕುಮಾರ್

  ರಾಘವ ಶರ್ಮ ನಿಡ್ಲೆ, ನವದೆಹಲಿ
  ರಾಜಕೀಯದಲ್ಲಿ ಯಾರೂ ಶತ್ರುವಲ್ಲ, ಯಾರೂ ಮಿತ್ರನಲ್ಲ. ಬಿಹಾರದ ‘ಪಲ್ಟು ಕುಮಾರ್’ ಎಂದೇ (ಕು)ಖ್ಯಾತಿಯಾಗಿರುವ ಸಿಎಂ ನಿತೀಶ್ ಕುಮಾರ್ ರಾಜಕಾರಣವನ್ನು ಗಮನಿಸಿದರಂತೂ ಶತ್ರು-ಮಿತ್ರ ಎಂಬುದು ಅನುಕೂಲಕ್ಕೆ ಮಾತ್ರ ಎಂಬುದು ಸ್ಪಷ್ಟ. ನಿತೀಶ್​ಗೆ ಮೋದಿ ಒಮ್ಮೆ ಕೋಮುವಾದಿಯಾದರೆ, ಮತ್ತೊಮ್ಮೆ ಅಭಿವೃದ್ಧಿಯ ಹರಿಕಾರ. ಒಮ್ಮೆ ಸರ್ವಾಧಿಕಾರಿಯಾದರೆ, ಮಗದೊಮ್ಮೆ ಎಲ್ಲರನ್ನೊಳಗೊಳ್ಳುವ ನಾಯಕ. ಈ ಅಭಿಪ್ರಾಯಗಳು ಸಂದರ್ಭ ಮತ್ತು ಸನ್ನಿವೇಶಗಳಿಗೆ ತಕ್ಕಂತೆ ಬದಲಾಗುತ್ತಿರುತ್ತದೆ. ಬಿಹಾರದಲ್ಲಿ ಬಿಜೆಪಿ, ಆರ್​ಜೆಡಿ ಜತೆ ಸರಸ-ವಿರಸದ ರಾಜಕಾರಣ ಮಾಡುತ್ತಲೇ ಒಂಬತ್ತು ಬಾರಿ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಎನ್​ಡಿಎ ಜತೆ ಮರುಮೈತ್ರಿ ಮಾಡಿಕೊಂಡು ಇಂಡಿಯಾ ಮೈತ್ರಿಕೂಟಕ್ಕೆ ಆಘಾತ ನೀಡಿದ್ದಾರೆ.

  ರಾಜ್ಯದ ಮಾಜಿ ಮುಖ್ಯಮಂತ್ರಿ, ಬಡವರ ಪರ ದನಿ ಎತ್ತುತ್ತಿದ್ದ ಕರ್ಪರಿ ಠಾಕೂರ್​ಗೆ ಕೇಂದ್ರ ಸರ್ಕಾರ ಭಾರತರತ್ನ ಘೋಷಣೆ ಮಾಡಿದ ಬೆನ್ನಲ್ಲೇ, ನಿತೀಶ್ ಇಂಡಿಯಾ ಮೈತ್ರಿಕೂಟ ತೊರೆದು ಎನ್​ಡಿಎ ನಾಯಕರನ್ನು ಅಪ್ಪಿಕೊಂಡರು. ತಾವೇ ಹುಟ್ಟುಹಾಕಿದ ಇಂಡಿಯಾ ಮೈತ್ರಿಕೂಟ ತಮ್ಮನ್ನು ಪಿಎಂ ಅಭ್ಯರ್ಥಿಯನ್ನಾಗಿ ಬಿಂಬಿಸಲಿಲ್ಲ. ಬದಲಿಗೆ ಮಲ್ಲಿಕಾರ್ಜುನ ಖರ್ಗೆಯವರನ್ನು ಆಯ್ಕೆ ಮಾಡಿತು ಎಂಬ ಬೇಸರವೂ ನಿತೀಶ್ ಮನದಲ್ಲಿತ್ತು. ಅದೇನೇ ಇರಲಿ, ಎನ್​ಡಿಎನಲ್ಲಿ ಸದಾ ಹಿರಿಯಣ್ಣನ ಸ್ಥಾನದಲ್ಲಿದ್ದ ನಿತೀಶ್, ಈಗ ಬಿಜೆಪಿ ಮುಂದೆ ಎದೆಯುಬ್ಬಿಸಿ ನಿಲ್ಲುವ ಸ್ಥಿತಿಯಲ್ಲಿಲ್ಲ. ಸಿಎಂ ಸ್ಥಾನ ಸಿಕ್ಕರೂ, ಲೋಕಸಭೆ ಸೀಟು ಹಂಚಿಕೆಗೆ ಸಂಬಂಧಿಸಿ ಬಿಜೆಪಿ ಮಾತನ್ನು ಕೇಳಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ. 40 ಲೋಕಸಭೆ ಕ್ಷೇತ್ರಗಳಿರುವ ಬಿಹಾರದಲ್ಲಿ 2019ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಸಮಾನವಾಗಿ 17 ಸೀಟುಗಳಲ್ಲಿ ಸ್ಪರ್ಧಿಸಿದ್ದವು. ಆದರೆ, ಈ ಬಾರಿ 12 ಅಥವಾ 13 ಸೀಟುಗಳನ್ನಷ್ಟೇ ಜೆಡಿಯುಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ. ಮಾಜಿ ಸಿಎಂ ಜೀತನ್ ರಾಮ್ ಮಾಂಜಿ ನೇತೃತ್ವದ ಹಿಂದುಸ್ಥಾನಿ ಅವಾಮಿ ಮೋರ್ಚಾ ಮತ್ತು ಉಪೇಂದ್ರ ಖುಶ್ವಾಹ ನೇತೃತ್ವದ ರಾಷ್ಟ್ರೀಯ ಲೋಕಸಮತಾ ಪಕ್ಷಕ್ಕೆ 4-5 ಸೀಟು, ರಾಷ್ಟ್ರೀಯ ಲೋಕಜನಶಕ್ತಿ ಪಕ್ಷಕ್ಕೆ 5-6 ಸೀಟುಗಳನ್ನು ಹಂಚಿಕೆಯಾಗಬಹುದು. ಬಾಕಿ ಉಳಿದೆಲ್ಲಾ ಸೀಟುಗಳಲ್ಲಿ ಬಿಜೆಪಿ ಸ್ಪರ್ಧೆ ಬಹುತೇಕ ಖಚಿತ. ನಿತೀಶ್​ರನ್ನು ಖುಷಿಪಡಿಸಲು ಜಾರ್ಖಂಡ್ ಮತ್ತು ಈಶಾನ್ಯ ರಾಜ್ಯಗಳಲ್ಲಿ ಕೊಂಚ ಹೆಚ್ಚು ಸೀಟುಗಳನ್ನು ಜೆಡಿಯುಗೆ ನೀಡುವ ಉದ್ದೇಶ ಬಿಜೆಪಿಯಲ್ಲಿದೆ.

  See also  ಇಂದಿನಿಂದ ಚಿನ್ನಕ್ಕೆ ಹಾಲ್‌ಮಾರ್ಕ್‌ ಕಡ್ಡಾಯ

  38ರಲ್ಲಿ 36 ಸೋತಿದ್ದ ಜೆಡಿಯು: 2014ರ ಚುನಾವಣೆಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿದ ಬಿಜೆಪಿ ತೀರ್ಮಾನದಿಂದ ಆಕ್ರೋಶಗೊಂಡಿದ್ದ ನಿತೀಶ್, ಗುಜರಾತ್ ಗಲಭೆಗೆ ಕಾರಣಕರ್ತರಾದ ವ್ಯಕ್ತಿ ಪ್ರಧಾನಿ ಅಭ್ಯರ್ಥಿಯಾಗುವುದನ್ನು ಒಪ್ಪಲಾರೆ ಎಂದು ಎನ್​ಡಿಎ ಜತೆಗಿನ 20 ವರ್ಷಗಳ ಸಂಬಂಧಕ್ಕೆ ಎಳ್ಳುನೀರು ಬಿಟ್ಟಿದ್ದರು. ಆದರೆ, ಮೋದಿ ಅಲೆಯಲ್ಲಿ ಕೊಚ್ಚಿ ಹೋದ ಜೆಡಿಯು, 38 ಸೀಟುಗಳಲ್ಲಿ 36ರಲ್ಲಿ ಹೀನಾಯ ಸೋಲು ಕಂಡಿತು. ಇದಕ್ಕೆ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಜೀತನ್ ರಾಮ್ ಮಾಂಜಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದರು. 2015ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ಮತ್ತೆ ಸಿಎಂ ಹುದ್ದೆಗೇರಿ, ತಮ್ಮ ನಾಯಕತ್ವದಲ್ಲೇ ಚುನಾವಣೆ ಎದುರಿಸಲು ಮುಂದಾದ ನಿತೀಶ್, ಆರ್​ಜೆಡಿ, ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿ ರಚಿಸಿ, ಚುನಾವಣೆಯನ್ನೂ ಗೆದ್ದರು. ಆರ್​ಜೆಡಿ ಜತೆ ಸರ್ಕಾರ ರಚಿಸಿದರೂ, ಲಾಲು ಪ್ರಸಾದ್ ಹಸ್ತಕ್ಷೇಪಗಳಿಂದ ಹೈರಾಣಾಗಿ, ಮತ್ತೆ ಬಿಜೆಪಿಯ ಹಳೆ ಮಿತ್ರರೊಂದಿಗೆ ಕೈಜೋಡಿಸಿ ಹೊಸ ಸರ್ಕಾರ ರಚಿಸಿದರು. 2019ರ ಲೋಕಸಭೆಯಲ್ಲಿ ಬಿಜೆಪಿ, ಜೆಡಿಯು, ಎಲ್​ಜೆಪಿ ಮೈತ್ರಿಕೂಟ ರಾಜ್ಯದ 39 ಸೀಟುಗಳನ್ನು ಬಾಚಿಕೊಂಡಿತ್ತು.

  ಚಿತ್ರಣ ಬದಲು: 2020ರಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ಗೆದ್ದು ಬಿಜೆಪಿ-ಜೆಡಿಯು ಸರ್ಕಾರ ರಚನೆಯಾದರೂ, 2022ರಲ್ಲಿ ಆರ್​ಜೆಡಿಯ ತೇಜಸ್ವಿ ಯಾದವ್ ಜತೆ ಸ್ನೇಹ ಬೆಳೆಸಿದ ನಿತೀಶ್, 2024ರ ಲೋಕಸಭೆ ಚುನಾವಣೆಗೆಂದೇ ವಿಪಕ್ಷಗಳ ನಾಯಕರೊಂದಿಗೆ ರ್ಚಚಿಸಿ ಇಂಡಿಯಾ ಮೈತ್ರಿಕೂಟ ರಚಿಸಿದರು. ಆದರೆ, ಕರ್ಪರಿ ಠಾಕೂರ್ ಅವರಿಗೆ ಮರಣೋತ್ತರ ಭಾರತರತ್ನ ಘೋಷಿಸಿದ ಪ್ರಧಾನಿ ಮೋದಿ ರಾಜಕೀಯ ರಣತಂತ್ರಕ್ಕೆ ತಲೆಬಾಗಿದ ನಿತೀಶ್, ಮತ್ತೆ ಎನ್​ಡಿಎ ಸೇರಿದರು. ಇದರಿಂದಾಗಿ ಈಗ ಬಿಹಾರ ರಾಜಕೀಯ ಚಿತ್ರಣವೇ ಬದಲಾಗಿದೆ. ಒಂದುವೇಳೆ, ಆರ್​ಜೆಡಿ-ಜೆಡಿಯು-ಕಾಂಗ್ರೆಸ್-ಆರ್​ಎಲ್​ಎಸ್​ಪಿ ಮೈತ್ರಿಕೂಟ ಒಗ್ಗಟ್ಟಾಗಿದ್ದರೆ, ಬಿಜೆಪಿ ಪ್ರಬಲ ಸವಾಲು ಎದುರಿಸುವ ಸಾಧ್ಯತೆಯಿತ್ತು. ಆದರೆ, ನಿತೀಶ್ ‘ಪಲ್ಟಿ’ ಹೊಡೆದ ಪರಿಣಾಮ ಬಹುತೇಕ 2019ರ ಸ್ಥಿತಿ ನಿರ್ವಣವಾಗಿದೆ. ಮೇಲಾಗಿ, ಎನ್​ಡಿಎ ಮೈತ್ರಿಕೂಟಕ್ಕೆ ಮಾಂಜಿ, ಖುಶ್ವಾಹ ಕೂಡ ವಾಪಸ್ ಬಂದಿರುವುದರಿಂದ ಆರ್​ಜೆಡಿ-ಕಾಂಗ್ರೆಸ್ ಮೈತ್ರಿ ದುರ್ಬಲಗೊಂಡಿದೆ. 2020ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅಗತ್ಯಕ್ಕಿಂತ ಹೆಚ್ಚು ಸೀಟುಗಳನ್ನು ಹಂಚಿಕೆ ಮಾಡಿದ್ದ ಪರಿಣಾಮ ಆರ್​ಜೆಡಿ ಮ್ಯಾಜಿಕ್ ನಂಬರ್ ಸನಿಹಕ್ಕೆ ಬಂದು ನಿಂತಿತ್ತು. 70 ಸೀಟುಗಳಲ್ಲಿ ಸ್ಪರ್ಧಿಸಿದಿದ್ದ ಕಾಂಗ್ರೆಸ್ ಬರೀ 19ನ್ನಷ್ಟೇ ಗೆದ್ದಿತ್ತು. ಕಾಂಗ್ರೆಸ್ ಸುಧಾರಿತ ನಿರ್ವಹಣೆ ತೋರಿದ್ದರೆ ಆರ್​ಜೆಡಿ-ಕಾಂಗ್ರೆಸ್ ಸರ್ಕಾರ ರಚನೆಯ ಸಾಧ್ಯತೆಯಿತ್ತು. ಆದರೆ, ಕಾಂಗ್ರೆಸ್ ಮೇಲೆ ಅತಿಯಾದ ವಿಶ್ವಾಸವಿಟ್ಟದ್ದೇ ಆರ್​ಜೆಡಿಗೆ ಮುಳುವಾಗಿತ್ತು.

  See also  23ನೇ ವಯಸ್ಸಿಗೆ ಜೀವನದಲ್ಲಿ ಎಲ್ಲವನ್ನೂ ಅನುಭವಿಸಿದೆ: ಸೋನು ಗೌಡ

  ಆರ್​ಜೆಡಿ ಟಾರ್ಗೆಟ್ ನಿತೀಶ್: ಮಹಾಮೈತ್ರಿ ಸರ್ಕಾರ ಕೊನೆಗೊಳಿಸಿ, ಮತ್ತೆ ಬಿಜೆಪಿ ಜತೆ ಮರು ಮದುವೆಯಾದ ನಿತೀಶ್​ರನ್ನೇ ಗುರಿಯಾಗಿಸಿ ಪ್ರಚಾರಭಿಯಾನ ನಡೆಸಲು ತೇಜಸ್ವಿ ಮುಂದಾಗಿದ್ದಾರೆ. ರಾಜ್ಯದ ರಾಜಕೀಯ ಅನಿಶ್ಚಿತತೆಗೆ ನಿತೀಶರೇ ಕಾರಣ ಎಂದು ಕಿಡಿಕಾರುತ್ತಿದ್ದಾರೆ. ಈ ಮೂಲಕ ತಮ್ಮ ಮತಬ್ಯಾಂಕ್​ಗಳಾದ ಮುಸ್ಲಿಂ, ಯಾದವ್, ದಲಿತ, ಹಿಂದುಳಿದ, ಮಹಾದಲಿತ ಸೇರಿ ಎಲ್ಲರನ್ನೂ ಆರ್​ಜೆಡಿ ಕಡೆ ಸೆಳೆಯಲು ಯತ್ನಿಸಿದ್ದಾರೆ. ಸದ್ಯದ ಮಟ್ಟಿಗೆ ಬಿಜೆಪಿ ಮತಬ್ಯಾಂಕ್​ಗೆ ಯಾವುದೇ ಹಾನಿಯಾಗದಿದ್ದರೂ, ಜೆಡಿಯು ನಾಯಕತ್ವದ ಬಗ್ಗೆ ಮತದಾರರ ಮನಸ್ಸಲ್ಲೇನಿದೆ ಎನ್ನುವುದು ಕುತೂಹಲಕರ. ಆದರೆ, ಇದು ಲೋಕಸಭೆ ಚುನಾವಣೆಯಾಗಿರುವುದರಿಂದ ಕೇಂದ್ರದ ನಾಯಕತ್ವ ಮತ್ತು ಸರ್ಕಾರದ ಕುರಿತ ಜಾಗೃತ ಚಿಂತನೆಯಿಂದ ಮತ ಬಿದ್ದರೆ ಎನ್​ಡಿಎಗೆ ಹೆಚ್ಚು ಲಾಭವಾಗಬಹುದು. ಆದರೂ, ತೇಜಸ್ವಿ ರಾಜ್ಯದ ಪ್ರಬಲ ವಿಪಕ್ಷ ನಾಯಕನಾಗಿ ಹೊರಹೊಮ್ಮಿರುವುದರಿಂದ ಮೋದಿ-ನಿತೀಶ್ ಮುಂದೆ ಕಠಿಣ ಹಾದಿಯಿರುವುದು ಸುಳ್ಳಲ್ಲ.

  ಮೋದಿಯ ಹನುಮಾನ್ ಚಿರಾಗ್!: ಎಲ್​ಜೆಪಿ ಮಾಜಿ ಅಧ್ಯಕ್ಷ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಪುತ್ರ ಚಿರಾಗ್ ಪಾಸ್ವಾನ್ ಮತ್ತು ನಿತೀಶ್ ಸಂಬಂಧ ಅಷ್ಟಕ್ಕಷ್ಟೇ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಸೀಟುಗಳು ಗಣನೀಯವಾಗಿ ಕುಸಿಯಲು ಕಾರಣಕರ್ತರಾಗಿದ್ದ ಚಿರಾಗ್, ಜೆಡಿಯು ಸ್ಪರ್ಧಿಸಿದ್ದ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಜೆಡಿಯು ಮತಗಳನ್ನು ವಿಭಜಿಸಲು ಯಶಸ್ವಿಯಾಗಿದ್ದರು. ಇದರಿಂದಾಗಿ ಜೆಡಿಯು ಸಂಖ್ಯೆ 44ಕ್ಕೆ ಇಳಿದಿತ್ತು. ‘ನಾನು ಪ್ರಧಾನಿ ಮೋದಿಯವರ ಹನುಮಂತನಾಗಿ ರಾಜ್ಯದಲ್ಲಿ ಪ್ರಚಾರ ಮಾಡುತ್ತಿದ್ದೇನೆ’ ಎಂದಿದ್ದ ಚಿರಾಗ್, ಪರೋಕ್ಷವಾಗಿ ನಿತೀಶ್​ರ ವರ್ಚಸ್ಸು ತಗ್ಗಿಸಿ, ಎನ್​ಡಿಎ ಮೈತ್ರಿಕೂಟದೊಳಗೆ ಬಿಜೆಪಿ ಪ್ರಾಬಲ್ಯಕ್ಕೆ ನೆರವಾಗಿದ್ದರು. ಈ ಬಾರಿ ಅವರು ಸ್ವಕ್ಷೇತ್ರ ಜಮುಯ್ಯಿಂದ ಸ್ಪರ್ಧಿಸುವ ಸ್ಪಷ್ಟತೆ ಇನ್ನೂ ನೀಡಿಲ್ಲ. ಏತನ್ಮಧ್ಯೆ, ರಾಮ್ ವಿಲಾಸ್ ಸೋದರ ಪಶುಪತಿ ಕುಮಾರ್ ಪರಸ್ ಮತ್ತು ಚಿರಾಗ್ ಸಂಬಂಧ ಕೆಟ್ಟಿದ್ದು, ಎಲ್​ಜೆಪಿ ತನಗೆ ಸೇರಿದ್ದು ಎಂದು ವಾದಿಸುತ್ತಿದ್ದಾರೆ. ತಾನು ಎಲ್​ಜೆಪಿಯಿಂದ ಹಾಜಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಚಿರಾಗ್ ತಮ್ಮ ತಾಯಿಗೆ ಅಲ್ಲಿ ಹೇಗೆ ಟಿಕೆಟ್ ನೀಡುತ್ತಾರೆ ಎಂದು ನಾನೂ ನೋಡುತ್ತೇನೆ ಎಂದು ಸವಾಲು ಹಾಕಿದ್ದಾರೆ. ರಾಜಕಾರಣದ ಹವಾಮಾನ ತಜ್ಞ ಎಂದೇ ಕರೆಸಿಕೊಂಡಿದ್ದ ರಾಮ್ ವಿಲಾಸ್, ಕೇಂದ್ರದಲ್ಲಿ ಯಾರು ಅಧಿಕಾರದಲ್ಲಿರುತ್ತಾರೋ ಅವರೊಂದಿಗಿರುತ್ತಿದ್ದರು. ಗುಜರಾತ್ ಗಲಭೆ ವಿಚಾರದಲ್ಲಿ ಮೋದಿಯವರನ್ನು ಕೋಮುವಾದಿ ಎಂದು ಜರೆದಿದ್ದ ರಾಮ್ ವಿಲಾಸ್​ಗೆ, ನಂತರದಲ್ಲಿ ಮೋದಿ ದೇಶದ ಅತ್ಯುನ್ನತ ನಾಯಕ ಎಂದು ಕಂಡಿದ್ದುಂಟು. ರಾಮ್ ವಿಲಾಸ್ ನಿಧನದ ನಂತರ, ಪುತ್ರ ಚಿರಾಗ್, ಜೆಡಿಯು ಅಥವಾ ಆರ್​ಜೆಡಿ ಜತೆ ಸಖ್ಯ ಬೆಳೆಸಿಲ್ಲ. ಎನ್​ಡಿಎಗೆ 400 ಸೀಟು ಗೆಲ್ಲಿಸುವುದೇ ಗುರಿ ಎಂದು ಅಖಾಡಕ್ಕೆ ಧುಮುಕಿದ್ದಾರೆ.

  See also  ಅಧಿಕಾರಕ್ಕಾಗಿ ಮೋದಿ ಹಿಂದೂಗಳಲ್ಲಿ ಭಯವನ್ನು ಸೃಷ್ಟಿಸುತ್ತಿದ್ದಾರೆ: ಫಾರೂಕ್​ ಅಬ್ದುಲ್ಲಾ

  ಕನ್ನಡಿಗರಿಗೆ ನೆಲೆ ನೀಡಿದ ರಾಜ್ಯ: ಬಿಹಾರವು ಕರಾವಳಿ ಕರ್ನಾಟಕದ ಇಬ್ಬರಿಗೆ ರಾಜಕೀಯ ನೆಲೆ ನೀಡಿದ್ದು ಉಲ್ಲೇಖಾರ್ಹ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ, ಬರೋಡಾ ಡೈನಮೈಟ್ ಕೇಸ್​ನಲ್ಲಿ ಜೈಲು ಸೇರಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್, 1977ರಲ್ಲಿ ಬಿಹಾರದ ಮುಜಫರ್​ಪುರ್ ಕ್ಷೇತ್ರದಿಂದ ಜನತಾಪಾರ್ಟಿ ಅಭ್ಯರ್ಥಿಯಾಗಿ ಜೈಲಿನಿಂದಲೇ ಸ್ಪರ್ಧಿಸಿದ್ದರು. ಚುನಾವಣಾ ಪ್ರಚಾರವಿಲ್ಲದೆ, ಸುಮಾರು 3 ಲಕ್ಷ ಮತಗಳಿಂದ ಗೆದ್ದಿದ್ದ ಜಾರ್ಜ್, ಜನತಾ ಪಾರ್ಟಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿದ್ದರು. ಬಿಹಾರ ಹಾಗೂ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಂದ ಗಮನಸೆಳೆದಿದ್ದ ಜಾರ್ಜ್​ರನ್ನು ಈಗಲೂ ಮುಜಫರಪುರ ನಿವಾಸಿಗರು ನೆನೆಸಿಕೊಳ್ಳುತ್ತಾರೆ. 1980ರಲ್ಲಿ ಕೂಡ ಜನತಾಪಾರ್ಟಿ ಸೆಕ್ಯುಲರ್ ಪಕ್ಷದಿಂದ ಮುಜಫರ್​ಪುರದಲ್ಲಿ ಸ್ಪರ್ಧಿಸಿ ಜಾರ್ಜ್ ಗೆದ್ದಿದ್ದರು. ಅವರ ಒಡನಾಡಿಯಾಗಿದ್ದ ಮಂಗಳೂರು ಮೂಲದ ಅನಿಲ್ ಹೆಗ್ಡೆಯವರನ್ನು ಜಾರ್ಜ್ ನಿಧನದ ನಂತರ, ನಿತೀಶ್ ಕುಮಾರ್ ತಮ್ಮ ಆಪ್ತ ಬಳಗದಲ್ಲಿ ಸೇರಿಸಿಕೊಂಡರು. ಮೃದುಭಾಷಿ, ಸಜ್ಜನ ಎಂದೇ ಗುರುತಿಸಿಕೊಂಡಿರುವ ಅನಿಲ್ ಹೆಗ್ಡೆ, ಜೆಡಿಯು ಪರ ತೆರೆಮರೆಯಲ್ಲೇ ತಂತ್ರಗಾರಿಕೆ ರೂಪಿಸುತ್ತಾ ಪಕ್ಷದ ಏಳಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಸೇವೆ ಪರಿಗಣಿಸಿಯೇ ನಿತೀಶ್, ಅನಿಲ್ ಹೆಗ್ಡೆಯವರನ್ನು ರಾಜ್ಯಸಭೆ ಸದಸ್ಯರನ್ನಾಗಿ ದೆಹಲಿಗೆ ಕಳುಹಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts