More

    ಪಾಕಿಸ್ತಾನದ ಅಬ್ದುಲ್​ ರೆಹಮಾನ್​ ಮಕ್ಕಿ ಇನ್ಮುಂದೆ ಜಾಗತಿಕ ಉಗ್ರ: ಚೀನಾ ಪ್ರಯತ್ನ ವಿಫಲ, ಭಾರತಕ್ಕೆ ಜಯ

    ನ್ಯೂಯಾರ್ಕ್​: ಪಾಕಿಸ್ತಾನ​ ಮೂಲದ ಉಗ್ರ ಅಬ್ದುಲ್​ ರೆಹಮಾನ್​ ಮಕ್ಕಿಯನ್ನು ಐಎಸ್​ಇಎಲ್​ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್) ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿ ಅಡಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಉಗ್ರ ಪಟ್ಟಿಗೆ ಸೇರಿಸಿದೆ.

    ಅಂದಹಾಗೆ ಅಬ್ದುಲ್​ ರೆಹಮಾನ್​ ಲಷ್ಕರ್​ ಎ ತೊಯ್ಬಾ ಸಂಘಟನೆಯ ನಾಯಕ. ಆತನನ್ನು ಜಾಗತಿಕ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಪ್ರಸ್ತಾವನೆಯನ್ನು ಕಳೆದ ವರ್ಷ ಚೀನಾ ತಡೆಹಿಡಿದಿತ್ತು. 2022ರ ಜೂನ್ ತಿಂಗಳಲ್ಲಿ ವಿಶ್ವಸಂಸ್ಥೆಯ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ ಭಯೋತ್ಪಾದಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ತಡೆದ ಬಳಿಕ ಭಾರತವು ಚೀನಾವನ್ನು ತರಾಟೆಗೆ ತೆಗೆದುಕೊಂಡಿತ್ತು.

    2023ರ ಜನವರಿ 16ರಂದು ಭದ್ರತಾ ಮಂಡಳಿ ಸಮಿತಿಯು 1267 (1999), 1989 (2011) ಮತ್ತು 2253 (2015) ನಿರ್ಣಯಗಳ ಅಡಿಯಲ್ಲಿ ಐಎಸ್​ಐಎಲ್​ (ದಾಯಿಶ್​), ಅಲ್​ ಖೈದಾ ಮತ್ತು ಅದರ ಸಂಬಂಧಿತ ವ್ಯಕ್ತಿಗಳು, ಗುಂಪುಗಳು, ಉದ್ಯಮಗಳು ಮತ್ತು ಘಟಕಗಳನ್ನು ಐಎಸ್​ಇಎಲ್​ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್) ಮತ್ತು ಅಲ್ ಖೈದಾ ನಿರ್ಬಂಧಗಳ ಸಮಿತಿ ಅಡಿಯಲ್ಲಿ ಸೇರಿಸಲು ಅನುಮೋದಿಸಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಮಂಡಳಿಯ ನಿರ್ಣಯ 2610 (2021)ರ ಪ್ಯಾರಾಗ್ರಾಫ್ 1 ರಲ್ಲಿ ಉಲ್ಲೇಖಿಸಲಾದ ಮತ್ತು ವಿಶ್ವಸಂಸ್ಥೆಯ ಅಧ್ಯಾಯ VII ಅಡಿಯಲ್ಲಿ ಅಂಗೀಕರಿಸಲ್ಪಟ್ಟಂತೆ ಪಟ್ಟಿಯಲ್ಲಿರುವ ನಿರ್ಬಂಧಕ್ಕೆ ಒಳಪಟ್ಟಿರುವ ವ್ಯಕ್ತಿಗಳು ಮತ್ತು ಘಟಕಗಳ ಸ್ವತ್ತುಗಳ ವಶ, ಪ್ರಯಾಣ ನಿಷೇಧ ಮತ್ತು ಶಸ್ತ್ರಾಸ್ತ್ರ ನಿರ್ಬಂಧವನ್ನು ಹೇರಲಾಗಿದೆ ಎಂದು ವಿಶ್ವಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

    ಭಾರತ ಮತ್ತು ಅಮೆರಿಕ ಈಗಾಗಲೇ ರೆಹಮಾನ್​ ಮಕ್ಕಿಯನ್ನು ತಮ್ಮ ದೇಶಿ ಕಾನೂನಿನ ಅಡಿಯಲ್ಲಿ ಉಗ್ರ ಪಟ್ಟಿಗೆ ಸೇರಿಸಿವೆ. ಈತ ಭಾರತದಲ್ಲಿ ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಯುವಕರನ್ನು ನೇಮಿಸಿಕೊಳ್ಳುವುದು ಮತ್ತು ದಾಳಿಗಳನ್ನು ಯೋಜಿಸುವುದು ಮತ್ತು ನಿಧಿ ಸಂಗ್ರಹಿಸುವಲ್ಲಿ ತೊಡಗಿಸಿಕೊಂಡಿದ್ದಾನೆ.

    ರೆಹಮಾನ್​ ಮಕ್ಕಿ, ಲಷ್ಕರ್ ಎ ತೊಯ್ಬಾದ (ಎಲ್​ಇಟಿ) ಮುಖ್ಯಸ್ಥ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನ ಸೋದರ ಮಾವ. ಅಮೆರಿಕ ಗೊತ್ತುಪಡಿಸಿದ ವಿದೇಶಿ ಭಯೋತ್ಪಾದಕ ಸಂಘಟನೆ ಎಲ್​ಇಟಿಯಲ್ಲಿ ವಿವಿಧ ನಾಯಕತ್ವದ ಪಾತ್ರಗಳನ್ನು ವಹಿಸಿದ್ದಾನೆ. ಎಲ್‌ಇಟಿ ಕಾರ್ಯಾಚರಣೆಗಳಿಗೆ ನಿಧಿ ಸಂಗ್ರಹಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾನೆ.

    2020ರಲ್ಲಿ ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ನ್ಯಾಯಾಲಯವು ರೆಹಮಾನ್​ ಮಕ್ಕಿಯನ್ನು ಭಯೋತ್ಪಾದನೆಗೆ ಹಣಕಾಸು ಒದಗಿಸಿದ ಪ್ರಕರಣವೊಂದರಲ್ಲಿ ದೋಷಿ ಎಂದು ಘೋಷಿಸಿತು ಮತ್ತು ಯುಎಸ್ ಸ್ಟೇಟ್ ಡಿಪಾರ್ಟ್​ಮೆಂಟ್​ ಪ್ರಕಾರ ಜೈಲು ಶಿಕ್ಷೆಯನ್ನು ವಿಧಿಸಿತು. ಹಿಂದಿನಿಂದಲೂ ಭಯೋತ್ಪಾದಕರ ಪಟ್ಟಿಗೆ ಚೀನಾ ಅಡ್ಡಗಾಲು ಹಾಕಿಕೊಂಡು ಬರುತ್ತಿದೆ. ಅದರಲ್ಲೂ ಪಾಕ್​ ಮೂಲದ ಉಗ್ರರ ಮೇಲೆ ಚೀನಾಗೆ ವಿಶೇಷ ಒಲವಿರುವಂತೆ ತೋರುತ್ತಿದೆ. ಹೀಗಾಗಿಯೇ ಪಾಕಿಸ್ತಾನ ಮೂಲದ ಮತ್ತು ಯುಎನ್-ನಿಷೇಧಿತ ಭಯೋತ್ಪಾದಕ ಸಂಸ್ಥೆ ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ಪ್ರಸ್ತಾಪಗಳನ್ನು ಚೀನಾ ಪದೇ ಪದೇ ನಿರ್ಬಂಧಿಸಿತು. (ಏಜೆನ್ಸೀಸ್​)

    ಸಾಗರ ಕ್ಷೇತ್ರದ ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ ವಿಧಿವಶ

    ಮತ್ತೊಮ್ಮೆ ವಿಜಯ್​ ಜೊತೆ ಹಾಟ್​ ಆಗಿ ಕಾಣಿಸಿಕೊಂಡ ತಮನ್ನಾ: ಬೇಸರ ಹೊರಹಾಕಿದ ಅಭಿಮಾನಿಗಳು

    ನೇಪಾಳ ವಿಮಾನ ಪತನ: ಭಾರತೀಯ ಪ್ರಯಾಣಿಕನ ಫೇಸ್​ಬುಕ್​ ಲೈವ್​ನಲ್ಲಿ ಭಯಾನಕ ದೃಶ್ಯ ಸೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts