More

    ಮತ್ತೆ ಭಾರತದತ್ತ ಸಹಾಯಹಸ್ತ ಚಾಚಿದ ಪಾಕಿಸ್ತಾನ

    ಇಸ್ಲಾಮಾಬಾದ್: ಗಡಿಯಲ್ಲಿ ಪರಸ್ಪರ ಗುಂಡಿನ ದಾಳಿಯನ್ನು ಸಂಪೂರ್ಣವಾಗಿ ನಿಲ್ಲಿಸಲು ಕೆಲ ದಿನಗಳ ಹಿಂದೆ ಭಾರತದ ಜತೆ ಒಪ್ಪಂದ ಮಾಡಿಕೊಂಡು ಅಚ್ಚರಿ ಮೂಡಿಸಿದ್ದ ಪಾಕಿಸ್ತಾನ ಈಗ ಮತ್ತೊಮ್ಮೆ ಸ್ನೇಹಹಸ್ತ ಚಾಚಿದೆ. ‘ಹಳೇ ಘಟನೆಗಳನ್ನು ಮರೆತು ಎರಡೂ ರಾಷ್ಟ್ರಗಳು ಭವಿಷ್ಯದಲ್ಲಿ ಮುನ್ನಡೆಯಬೇಕಿದೆ’ ಎಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ ಗುರುವಾರ ಹೇಳಿಕೆ ನೀಡಿದ್ದಾರೆ. ‘ಇಸ್ಲಾಮಾಬಾದ್ ಸೆಕ್ಯುರಿಟಿ ಡೈಲಾಗ್’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಕಾಶ್ಮೀರ ವಿಚಾರ ಎರಡೂ ದೇಶಗಳ ನಡುವಿನ ವಿವಾದದ ಕೇಂದ್ರವಾಗಿದೆ. ಇದನ್ನು ಶಾಂತಿಯುತವಾಗಿ ಪರಿಹರಿಸಿದ ಹೊರತೂ ವಿವಾದ ಬಗೆಹರಿಯುವುದಿಲ್ಲ. ರಾಜಕೀಯ ಪ್ರೇರಿತವಾಗಿ ಸಂಘರ್ಷ ನಡೆಸಿದರೆ ಎರಡೂ ದೇಶಗಳ ನಡುವಿನ ಸಂಬಂಧ ಹಳಿ ತಪು್ಪವ ಸಾಧ್ಯತೆ ಹೆಚ್ಚಿರುತ್ತದೆ. ಮುಖ್ಯವಾಗಿ ಪಾಕ್ ಆಕ್ರಮಿತ ಕಾಶ್ಮೀರ ವಿಚಾರ ಪರಿಹರಿಸಲು ಭಾರತ ಉತ್ತಮ ವಾತಾವರಣ ನಿರ್ವಿುಸಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತ-ಪಾಕ್ ನಡುವಿನ ಶೀತಲಯುದ್ಧ ಕುರಿತು ಉಲ್ಲೇಖಿಸಿದ ಬಾಜ್ವಾ, ಶಕ್ತಿ ಕೇಂದ್ರಗಳ ನಡುವಿನ ಸಮರ ಮತ್ತೊಂದು ಸುತ್ತಿನ ಶೀತಲಯುದ್ಧಕ್ಕೆ ಕಾರಣವಾಗುತ್ತದೆ. ಇದರಿಂದ ದಕ್ಷಿಣ ಏಷ್ಯಾ ದೇಶಗಳ ನಡುವಿನ ವಿವಾದಗಳು ಬಗೆಹರಿಯುವುದಿಲ್ಲ. ದೇಶ ಅಭಿವೃದ್ಧಿಯಿಂದ ವಂಚಿತವಾಗಿ ಬಡತನದಲ್ಲೇ ಮುಂದುವರಿಯಬೇಕಾಗುತ್ತದೆ ಎಂದಿದ್ದಾರೆ.

    ಭಾರತದ ನಿಲುವೇನು?: ಭಯೋತ್ಪಾದನೆ ಹಾಗೂ ಗಡಿಯಲ್ಲಿ ಉಗ್ರರ ಒಳನುಸುಳುವಿಕೆ ಸಂಪೂರ್ಣವಾಗಿ ಸ್ಥಗಿತವಾಗುವವರೆಗೂ ಪಾಕಿಸ್ತಾನದ ಜತೆ ಯಾವುದೇ ಶಾಂತಿ ಮಾತುಕತೆ ಸಾಧ್ಯವಿಲ್ಲ ಎಂದು ಭಾರತ ಹಲವು ಬಾರಿ ಸ್ಪಷ್ಟಪಡಿಸಿದೆ. ವಿಶ್ವಸಂಸ್ಥೆ ಸಹಿತ ಹಲವು ಜಾಗತಿಕ ವೇದಿಕೆಯಲ್ಲೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

    ಇಮ್ರಾನ್ ಶಾಂತಿಮಂತ್ರ: ‘ಇಸ್ಲಾಮಾಬಾದ್ ಸೆಕ್ಯುರಿಟಿ ಡೈಲಾಗ್’ ಉದ್ಘಾಟಿಸಿದ್ದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಭಾರತದ ಜತೆ ಉತ್ತಮ ಸಂಬಂಧ ಹೊಂದುವ ಇಚ್ಛೆ ವ್ಯಕ್ತಪಡಿಸಿದ್ದರು. ‘ಪಾಕಿಸ್ತಾನ ನೆರೆಯ ದೇಶದ ಜತೆ ಸೌಹಾರ್ದ ಸಂಬಂಧ ಹೊಂದಲು ತಯಾರಿದೆ. ಆದರೆ ಭಾರತ ಮೊದಲ ಹೆಜ್ಜೆ ಇಡಬೇಕು. ಪಾಕಿಸ್ತಾನ ಜತೆ ಉತ್ತಮ ಸಂಬಂಧ ಹೊಂದಿದರೆ ಮಧ್ಯಪ್ರಾಚ್ಯ ದೇಶಗಳ ಜತೆ ಭಾರತದ ಸಂಪರ್ಕ ಸುಲಭವಾಗಲಿದೆ’ ಎಂದು ಅವರು ಹೇಳಿದ್ದರು.

    ಹದಗೆಟ್ಟ ಸಂಬಂಧ: 2016ರಲ್ಲಿ ಪಠಾನ್​ಕೋಟ್ ಹಾಗೂ ಉರಿ ಸೇನಾನೆಲೆ ಮೇಲೆ ನಡೆದ ಉಗ್ರ ದಾಳಿ, 2019ರ ಪುಲ್ವಾಮಾ ಭಯೋತ್ಪಾ ದಕ ದಾಳಿಯ ಬಳಿಕ ಭಾರತ – ಪಾಕ್ ನಡುವಿನ ಸಂಬಂಧ ತೀವ್ರ ಹದಗೆಟ್ಟಿತ್ತು. ಭಾರತ ಸರ್ಜಿಕಲ್ ದಾಳಿ ಹಾಗೂ ವೈಮಾನಿಕ ದಾಳಿ ನಡೆಸಿದ ಬಳಿಕ ಸಂಬಂಧ ಮತ್ತಷ್ಟು ಹಳಸಿ, ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಬಹುತೇಕ ಸ್ಥಗಿತವಾಗಿತ್ತು. ಪಾಕಿಸ್ತಾನ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಒತ್ತಡ ಹೆಚ್ಚಾಗಿತ್ತು. ಆರ್ಥಿಕವಾಗಿಯೂ ಭಾರಿ ಹಿನ್ನಡೆ ಅನುಭವಿಸುತ್ತಿರುವ ಪಾಕಿಸ್ತಾನ ಈಗ ಭಾರತದ ಜತೆ ಉತ್ತಮ ಸಂಬಂಧ ಹೊಂದಲು ಮುಂದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts