More

    ಕೊರೊನಾ ಕಷ್ಟದಲ್ಲಿ ಚೀನಾದ ಕೈಬಿಡೋದಿಲ್ಲ, ವುಹಾನ್​ನಲ್ಲಿರುವ ನಮ್ಮ ದೇಶದವರನ್ನು ಸ್ಥಳಾಂತರಿಸುವ ಬೇಜವಾಬ್ದಾರಿ ಕೆಲಸ ಮಾಡೋದಿಲ್ಲ: ಪಾಕಿಸ್ತಾನ ಸರ್ಕಾರ

    ಇಸ್ಲಮಾಬಾದ್​: ಪಾಕಿಸ್ತಾನ ಮತ್ತು ಚೀನಾ ದೇಶಗಳು ತಾವು ಸಾರ್ವಕಾಲಿಕ ಮಿತ್ರರು ಎಂಬುದನ್ನು ಈಗಾಗಲೇ ಹಲವು ಬಾರಿ ಸಾಬೀತು ಮಾಡಿವೆ. ಈಗ ಮಾರಣಾಂತಿಕ ‘ಕೊರೊನಾ ವೈರಸ್’​ ವಿಚಾರದಲ್ಲೂ ಪಾಕಿಸ್ತಾನ ತನ್ನ ದೇಶದ ಜನರ ಸುರಕ್ಷತೆಗಿಂತ ಚೀನಾದೊಂದಿಗಿನ ಸ್ನೇಹವೇ ಮುಖ್ಯ ಎನ್ನುತ್ತಿದೆ!

    ಚೀನಾದಲ್ಲಿ ಡೆಡ್ಲಿ ಕೊರೊನಾ ವೈರಸ್​ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಹುಬೈ ಪ್ರಾಂತ್ಯದ ವುಹಾನ್​ ಸೇರಿ ಸುಮಾರು 17 ನಗರಗಳಲ್ಲಿ ಕೊರೊನಾ ವೈರಸ್​ ವೇಗವಾಗಿ ಹಬ್ಬುತ್ತಿದೆ. ಅಲ್ಲದೆ ಈ ಸಿಟಿಗಳನ್ನು ಬಂದ್ ಮಾಡಲಾಗಿದೆ. ಅಲ್ಲಿರುವ ಬೇರೆ ದೇಶದ ಜನರನ್ನು ಸ್ಥಳಾಂತರ ಮಾಡಲು ಆಯಾ ದೇಶಗಳ ಸರ್ಕಾರಗಳು ಕ್ರಮ ಕೈಗೊಂಡಿವೆ. ಅದಕ್ಕೆ ಭಾರತವೂ ಹೊರತಾಗಿಲ್ಲ.

    ವುಹಾನ್​ ಸೇರಿ ಕೊರೊನಾ ಪೀಡಿತ ನಗರಗಳಲ್ಲಿನ ಭಾರತೀಯರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ ಎಂದು ಕಳೆದ ಎರಡು ದಿನಗಳ ಹಿಂದೆಯೇ ಭಾರತ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ಜಪಾನ್​ ಸೇರಿ ಮತ್ತೆ ಹಲವು ದೇಶಗಳೂ ಇದೇ ಕ್ರಮ ಅನುಸರಿಸಿವೆ.

    ಆದರೆ ಪಾಕಿಸ್ತಾನ ಸರ್ಕಾರ ಮಾತ್ರ ಇದನ್ನು ಮಾಡಿಲ್ಲ. ಚೀನಾದೊಂದಿಗೆ ನಾವಿದ್ದೇವೆ ಎಂಬ ಏಕತೆ ಸಾರುವ ದೃಷ್ಟಿಯಿಂದ ವುಹಾನ್​ ಸೇರಿ ಚೀನಾದ ಯಾವುದೇ ಭಾಗದಲ್ಲಿರುವ ನಮ್ಮ ದೇಶದ ಪ್ರಜೆಗಳನ್ನು ಸ್ಥಳಾಂತರ ಮಾಡುವುದಿಲ್ಲ ಎಂದು ಪಾಕ್​ ಪ್ರಧಾನಿಯ ವಿಶೇಷ ಸಹಾಯಕರಾದ ಡಾ. ಜಾಫರ್​ ಮಿರ್ಜಾ ತಿಳಿಸಿದ್ದಾರೆ.

    ಚೀನಾದಲ್ಲಿ ವುಹಾನ್​ ಸೇರಿ ಹಲವು ನಗರಗಳಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿದೆ. ಈಗ ನಾವೇನಾದರೂ ಅಲ್ಲಿರುವ ನಮ್ಮ ದೇಶದ ಪ್ರಜೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡುವುದು ಅಥವಾ ನಮ್ಮ ದೇಶಕ್ಕೆ ವಾಪಸ್​ ಕರೆಸಿಕೊಳ್ಳುವುದು ಮಾಡುವುದು ಸರಿಯಲ್ಲ. ಹೀಗೆ ಸ್ಥಳಾಂತರ ಮಾಡಿದ ಯಾರಲ್ಲಾದರೂ ವೈರಸ್​ ಸೋಂಕು ಇದ್ದರೆ ಅದು ಬೇರೆಕಡೆಗಳಲ್ಲಿರುವ ಮತ್ತಷ್ಟು ಜನರಿಗೆ ತಗುಲುವ ಸಾಧ್ಯತೆ ಇದೆ. ಅಲ್ಲದೆ ಚೀನಾದಲ್ಲಿರುವ ನಮ್ಮ ಪ್ರೀತಿಪಾತ್ರರ, ದೇಶದ, ವಿಶ್ವದ ಜನರ ಹಿತಾದೃಷ್ಟಿಯಿಂದ ಯಾರನ್ನೂ ಸ್ಥಳಾಂತರ ಮಾಡುತ್ತಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ. ಹಾಗೇ ಚೀನಾದೊಂದಿಗೆ ಒಗ್ಗಟ್ಟು ಸಾರುವ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

    ಚೀನಾದ ವುಹಾನ್​ನಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಒಟ್ಟು 800 ಪಾಕಿಸ್ತಾನಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ನಾಲ್ವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಆದರೆ ಸೋಂಕಿತರ ಸಂಖ್ಯೆ ಹೆಚ್ಚಾಗಲಿಲ್ಲ ಎಂದು ಮಿರ್ಜಾ ತಿಳಿಸಿದ್ದಾರೆ.

    ನಾವು ನಮ್ಮ ದೇಶದ ಪ್ರಜೆಗಳನ್ನು ವುಹಾನ್​ನಿಂದ ಸ್ಥಳಾಂತರ ಮಾಡುವುದಿಲ್ಲ ಎಂದರೆ ಅವರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದರ್ಥವಲ್ಲ. ಚೀನಾದಲ್ಲಿರುವ ಪಾಕ್​ನ ರಾಯಭಾರಿ ಅಲ್ಲಿನ ಪಾಕ್​ ವಿದ್ಯಾರ್ಥಿಗಳು, ಪ್ರಜೆಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಚೀನಾ ಆಡಳಿತದೊಂದಿಗೆ ಸೇರಿ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತೇವೆ. ಆದರೆ ಸ್ಥಳಾಂತರಿಸುವ ಬೇಜವಬ್ದಾರಿಯುತ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

    ಆದರೆ ವುಹಾನ್​ನಲ್ಲಿರುವ ಕೆಲವು ಪಾಕಿಸ್ತಾನಿ ವಿದ್ಯಾರ್ಥಿಗಳು ತಮ್ಮನ್ನು ಚೀನಾದ ಆಡಳಿತ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ದೂರಿದ್ದಾಗಿ ವರದಿಯಾಗಿದೆ.

    ಚೀನಾದಲ್ಲಿ ಕೊರೊನಾಗೆ ಮೃತಪಟ್ಟವರ ಸಂಖ್ಯೆ 170ಕ್ಕೆ ಏರಿದೆ. ಸುಮಾರು 8000 ಜನರಲ್ಲಿ ಸೋಂಕು ಪತ್ತೆಯಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts