More

    ಪಡುಶೆಡ್ಡೆ ಕುದ್ರುಗೆ ರಸ್ತೆ ಸಂಪರ್ಕ, 2.68 ಅಂದಾಜು ವೆಚ್ಚದ ಯೋಜನೆ

    ಭರತ್ ಶೆಟ್ಟಿಗಾರ್ ಮಂಗಳೂರು

    ಮಂಗಳೂರು ನಗರದಿಂದ ಕೆಲವೇ ಕಿ.ಮೀ. ದೂರದಲ್ಲಿರುವ ಮೂಡುಶೆಡ್ಡೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡುಶೆಡ್ಡೆ ಕುದ್ರು ಸುಂದರ ಹಳ್ಳಿ. ಒಂದೆಡೆ ಹರಿಯುವ ಫಲ್ಗುಣಿ ನದಿ, ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿನ ಹಿನ್ನೀರು, ಇನ್ನೊಂದೆಡೆ ತೆಂಗು, ಕಂಗು, ಬಾಳೆ, ಭತ್ತ, ಕಬ್ಬು, ತರಕಾರಿ ಮೊದಲಾದ ಕೃಷಿ ಉತ್ಪನ್ನಗಳನ್ನು ಬೆಳೆಯುವ ಗ್ರಾಮೀಣ ಪ್ರದೇಶ.

    ಇಲ್ಲಿಗೆ ಸರಿಯಾದ ಸಂಪರ್ಕ ರಸ್ತೆ ಇಲ್ಲದೆ ಗ್ರಾಮಸ್ಥರು ನಗರಕ್ಕೆ ಬರಬೇಕಾದರೆ ಹಲವು ಕಿ.ಮೀ. ಸುತ್ತಿ ಬಳಸಿ ಬರಬೇಕು. ಮರವೂರು, ಮರಕಡ ಪ್ರದೇಶ ಹತ್ತಿರವಾದರೂ ವಾಹನ ತರಲು ರಸ್ತೆಯಿಲ್ಲ. ಕಿಂಡಿ ಅಣೆಕಟ್ಟಿನ ಮೂಲಕ ನಡೆದುಕೊಂಡು ಹೋಗಬೇಕಷ್ಟೇ.

    ಮಳೆಗಾಲದಲ್ಲಿ ಅದೂ ಕಷ್ಟ. ಅಣೆಕಟ್ಟಿನ ಮೇಲ್ಭಾಗದಲ್ಲೇ ನೀರು ಹರಿದು ಹೋಗುವುದು, ಜೋರು ಮಳೆಗೆ ಗ್ರಾಮದಲ್ಲಿ ನೆರೆ ಆವರಿಸುವುದರಿಂದ ಗ್ರಾಮಸ್ಥರು ಸಂಕಷ್ಟ ಪಡಬೇಕಿತ್ತು. ಸ್ಥಳೀಯವರ ಹಲವು ವರ್ಷಗಳ ಬೇಡಿಕೆ ಪ್ರಸಕ್ತ ನೆರವೇರುತ್ತಿದ್ದು, ಗ್ರಾಮದಿಂದ ಮರಕಡಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ರಸ್ತೆ ಸಂಪೂರ್ಣವಾದರೆ ವಾಮಂಜೂರು, ನೀರುಮಾರ್ಗ, ಕುಡುಪು ಭಾಗದ ಜನರಿಗೆ ವಿಮಾನ ನಿಲ್ದಾಣ, ಕಟೀಲು, ಕಿನ್ನಿಗೋಳಿ ಕಡೆಗೆ ತೆರಳಲು ಉತ್ತಮ ಒಳರಸ್ತೆಯಾಗಲಿದೆ.

    ಡಾಂಬರು-ಕಾಂಕ್ರೀಟ್ ರಸ್ತೆ: ಮರಕಡದ ಪಾಂಜ ಭಾಗದಿಂದ ಪಡುಶೆಡ್ಡೆ ಕುದ್ರುವರೆಗೆ ಸುಮಾರು 1.5 ಕಿ.ಮೀ. ರಸ್ತೆ ನಿರ್ಮಾಣವಾಗಲಿದೆ. ಇದರಲ್ಲಿ 700 ಮೀ. ಕಾಂಕ್ರೀಟ್, ಉಳಿದ 700 ಮೀ. ಡಾಂಬರು ರಸ್ತೆ. ಒಂದು ದೊಡ್ಡ ಸೇತುವೆ, ಹಾಗೂ 3 ಮೋರಿಗಳೂ ಸೇರಿವೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಸೇತುವೆ ಕೆಲಸವೂ ಸಾಗಿದೆ. ಮೋರಿ ನಿರ್ಮಾಣವೂ ಪ್ರಗತಿಯಲ್ಲಿದೆ. ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ 3 ಮೀ. ಅಗಲದ ರಸ್ತೆ ನಿರ್ಮಾಣವಾಗಲಿದೆ.

    2.68 ಕೋಟಿ ವೆಚ್ಚ: ರಸ್ತೆ ನಿರ್ಮಾಣ ಯೋಜನೆ ಅಂದಾಜು ವೆಚ್ಚ 2.68 ಕೋಟಿ ರೂ. ಇದರಲ್ಲಿ 2.19 ಕೋಟಿ ರೂ. ರಸ್ತೆ ನಿರ್ಮಾಣಕ್ಕಾದರೆ, 12.45 ಲಕ್ಷ ರೂ. ಮುಂದಿನ ಐದು ವರ್ಷ ರಸ್ತೆ ನಿರ್ವಹಣೆಗೆ. 35.45 ಲಕ್ಷ ರೂ. ಇತರ ವೆಚ್ಚ. ಕಳೆದ ವರ್ಷ ಮಾರ್ಚ್‌ನಲ್ಲಿ ಕಾಮಗಾರಿ ಆರಂಭವಾಗಬೇಕಿತ್ತಾದರೂ ಕರೊನಾ ಕಾರಣದಿಂದ ತಡವಾಗಿದ್ದು, ಸದ್ಯ ಒಂದು ತಿಂಗಳಿಂದ ಕಾಮಗಾರಿ ನಡೆಯುತ್ತಿದೆ. ಶೀಘ್ರ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ನೆರೆ ಹಾವಳಿ ಪ್ರದೇಶ: ಪಡುಶೆಡ್ಡೆ ಕುದ್ರು ನೆರೆ ಹಾವಳಿ ಪ್ರದೇಶ. ಪ್ರತಿವರ್ಷ ಮಳೆಗಾಲದಲ್ಲಿ ಇಲ್ಲಿ ನೆರೆ ಬರುವುದು ಸಾಮಾನ್ಯವಾಗಿದ್ದು, ಹಲವು ಮನೆಗಳು ಮುಳುಗಡೆಯಾಗುತ್ತವೆ. ಫಲ್ಗುಣಿ ನದಿಗೆ ಅಣೆಕಟ್ಟು ಕಟ್ಟಿದ ಬಳಿಕ ನೆರೆ ಹೆಚ್ಚಾಗಿದೆ. ಇಲ್ಲಿ 30-40ರಷ್ಟು ಮನೆಗಳಿದ್ದು, 200ಕ್ಕೂ ಅಧಿಕ ಜನ ವಾಸವಾಗಿದ್ದಾರೆ. ವಾಹನ ಹೊಂದಿರುವವರು ಸುಮಾರು 3 ಕಿ.ಮೀ. ಸುತ್ತು ಹಾಕಿ ಬೋಂದೆಲ್ ಮೂಲಕ ನಗರಕ್ಕೆ ಬರಬೇಕು. ರಸ್ತೆ ನಿರ್ಮಾಣವಾಗುತ್ತಿರುವುದರಿಂದ ತುರ್ತು ಸಂದರ್ಭ ಶೀಘ್ರ ನಗರಕ್ಕೆ ತಲುಪಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು.

    ಜನರ ಬಹುಕಾಲದ ಬೇಡಿಕೆ ಈಡೇರುತ್ತಿದ್ದು, 4-5 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ರಸ್ತೆ ಸ್ಥಳೀಯರಿಗೆ ಮಾತ್ರವಲ್ಲದೆ, ವಾಮಂಜೂರು, ನೀರುಮಾರ್ಗ ಭಾಗದಿಂದ ವಿಮಾನ ನಿಲ್ದಾಣಕ್ಕೆ ಹೋಗುವವರಿಗೂ ಬೇಗನೆ ತಲುಪಲು ಅನುಕೂಲವಾಗಲಿದೆ. ಕಳೆದ ಬಾರಿ ಅಭಿವೃದ್ಧಿ ಪಡಿಸಲಾದ ಬೋಂದೆಲ್-ಮೂಡುಶೆಡ್ಡೆ ರಸ್ತೆಗೆ ಇದು ಜೋಡಣೆಯಾಗಲಿದೆ.

    ಉಮಾನಾಥ ಕೋಟ್ಯಾನ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts