More

    ಸರ್ವೇ ಮೊದಲೇ ಮರೀನಾ ಕೈಬಿಡಿ, ಪಡುಕೆರೆ ಸ್ಥಳೀಯರಿಂದ ನಿರ್ಣಯ

    ಉಡುಪಿ : ಜನರಿಗೆ ಇಷ್ಟವಿಲ್ಲದ ಯೋಜನೆ ಬಗ್ಗೆ ಜನಪ್ರತಿನಿಧಿಗಳು ಒತ್ತಾಯ ಮಾಡಕೂಡದು. ಕೂಡಲೇ ಮರೀನಾ ಯೋಜನೆ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಮಲ್ಪೆ-ಪಡುಕೆರೆ ಸ್ಥಳೀಯ ನಿವಾಸಿಗಳು ಶಾಸಕರ ಸಮ್ಮುಖದಲ್ಲಿ ಆಗ್ರಹಿಸಿದ್ದಾರೆ.

    ಮಂಗಳವಾರ ಪಡುಕೆರೆ ಕಡಲತೀರದಲ್ಲಿ ಮರೀನಾ (ಅಂತರಾಷ್ಟ್ರೀಯ ಪ್ರವಾಸಿ ಹಡಗು ತಂಗುದಾಣ) ಯೋಜನೆ ವಿರೋಧಿಸಿ ಸ್ಥಳೀಯರೆಲ್ಲ ಕೈಗೊಂಡ ನಿರ್ಣಯ ಪ್ರತಿಯನ್ನು ಶಾಸಕ ಕೆ.ರಘುಪತಿ ಭಟ್‌ಗೆ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಶಾಸಕರು, ಈ ಯೋಜನೆಯಿಂದ ಮೀನುಗಾರರಿಗೆ, ಸ್ಥಳೀಯರಿಗೆ ಅನನುಕೂಲವಾದರೆ ನಾನೂ ವಿರೋಧಿಸುತ್ತೇನೆ. ಸಾಧಕ- ಬಾಧಕ ತಿಳಿಯಲು ತಜ್ಞರ ವರದಿ ಬಂದ ಬಳಿಕ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ. ಈ ಯೋಜನೆ ಸಾಧಕವಾಗಿದ್ದಲ್ಲಿ ಇಲ್ಲಿ ಹೋಟೆಲ್, ಪಬ್, ಬಾರ್, ಗಾಲ್ಫ್ ಕೋರ್ಟ್‌ಗಳನ್ನು ತೆರೆಯುವುದಿಲ್ಲ. ಸಿಆರ್‌ಝಡ್ ವ್ಯಾಪ್ತಿ ಇರುವುದರಿಂದ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಮೀನುಗಾರಿಕೆಗೆ ಸಮಸ್ಯೆಯಾಗದ ರೀತಿಯಲ್ಲಿ ವರದಿ ಇದ್ದರೆ ಮರೀನಾ ನಿರ್ಮಾಣದಿಂದ ಜಿಲ್ಲೆ ಮತ್ತು ರಾಜ್ಯದ ಆರ್ಥಿಕತೆಗೆ ಅನುಕೂಲವಾಗುತ್ತದೆ. ಸ್ಥಳೀಯ ಸಾಂಸ್ಕೃತಿಕ, ಮೀನುಗಾರಿಕೆಗೆ ಸಮಸ್ಯೆ ಆಗುವುದಿಲ್ಲ ಎಂದರು.

    ಉದ್ಯಾವರ -ಕನಕೋಡ ಹಿರಿಯರಾದ ಶಿವರಾಮ ಪುತ್ರನ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯಿತಿ ಸದಸ್ಯ ರಾಜೇಂದ್ರ ಪಂದುಬೆಟ್ಟು ಇದ್ದರು. ಪ್ರಕಾಶ್ ಮಲ್ಪೆ ನಿರ್ಣಯ ಪ್ರತಿಯನ್ನು ವಾಚಿಸಿದರು.

    ಮೀನುಗಾರಿಕೆ ಬಂದರಿಗೆ ಅಪಾಯ: ಗ್ರಾಮದ ಹಿರಿಯರಾದ ರಾಮ ಕಾಂಚನ್ ಮಾತನಾಡಿ, ಇಲ್ಲಿ ಮರೀನ ಯೋಜನೆ ಜಾರಿಗೆ ಬಂದಲ್ಲಿ ಸ್ಥಳೀಯರಿಗೆ ಪ್ರವೇಶ ನಿರಾಕರಿಸಲಾಗುತ್ತದೆ ಎಂದು ಮಂಗಳೂರು ವಾಣಿಜ್ಯ ಬಂದರಿನ ಸ್ಥಿತಿಯನ್ನು ವಿವರಿಸಿದರು. ಬಂದರುವಿನಿಂದ ನೈಸರ್ಗಿಕ ನೆಲೆಯಲ್ಲಿ ಸಮುದ್ರದ ಅಲೆಗಳಿಗೆ ತಡೆಯಾಗಿ ಮಲ್ಪೆ ಸರ್ವಋತು ಮೀನುಗಾರಿಕೆ ಬಂದರಿಗೆ ಅಪಾಯವಾಗಲಿದೆ. ಪಡುಕೆರೆಯನ್ನು ಮಲ್ಪೆಯಂತೆ ಬೀಚ್ ಆಗಿ ಅಭಿವೃದ್ಧಿಪಡಿಸಿ, ಪ್ರವಾಸಿಗರನ್ನು ಸೆಳೆಯಬಹುದುರಿ, ಮರೀನಾ ಯೋಜನೆ ಮಾತ್ರ ಅಗತ್ಯವಿಲ್ಲ, ನಮ್ಮ ನಿರ್ಣಯವನ್ನು ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿದರು.

    ನಮ್ಮ ಹಿರಿಯರೇ ತಜ್ಞರು: ಸ್ಥಳೀಯರಿಗೆ ಮನಸ್ಸಿಲ್ಲದ ಈ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು. ಯಾವುದೇ ತಜ್ಞರ ಸರ್ವೇ ಅಗತ್ಯವಿಲ್ಲ. ನಮ್ಮ ಊರಿನ ಹಿರಿಯರೇ ತಜ್ಞರು ಎಂದು ಸ್ಥಳೀಯ ಪ್ರಮುಖರಾದ ಭುವನ್ ಕೋಟ್ಯಾನ್ ಶಾಸಕರಲ್ಲಿ ಹೇಳಿದರು. ಈ ಬಗ್ಗೆ ನಾನು ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ, ಜಿಲ್ಲಾಧಿಕಾರಿ ಅಧ್ಯಕ್ಷತೆಯ ಪ್ರವಾಸೋದ್ಯಮ ಸಮಿತಿಯಲ್ಲಿ ನಾವು ಸದಸ್ಯರಾಗಿದ್ದು, ಸಭೆ ನಡೆಸಿ ಸ್ಥಳೀಯರು ಕೈಗೊಂಡ ನಿರ್ಣಯದ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ತಜ್ಞರಿಂದ ಸರ್ವೇ ನಡೆಸಿದ ಬಳಿಕವೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ಶಾಸಕರು ಪಟ್ಟು ಹಿಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts