More

    ಸಮೃದ್ಧ ಕೊಳಕೆ ಭತ್ತ ಬೇಸಾಯ

    ಧನಂಜಯ ಗುರುಪುರ
    ಬಿಸಿಲ ಝಳಕ್ಕೆ ಹಸಿರು ಒಣಗಿ ನಿಂತಿರುವ ಈ ಹೊತ್ತಲ್ಲಿ ಮೂಡುಶೆಡ್ಡೆ ಪ್ರದೇಶದ ಫಲ್ಗುಣಿ ನದಿ ತಟದಲ್ಲಿ ನಳನಳಿಸುತ್ತಿರುವ ಭತ್ತದ ಬೆಳೆ, ಕೃಷಿ ಪ್ರಿಯರ ಮನಸ್ಸು ತಣಿಸುವಂತಿದೆ. ಪ್ರಗತಿಪರ ಕೃಷಿಕ ರಮಾನಾಥ ಅತ್ತರ್(ಚಿತ್ತಣ್ಣ) ಈ ಬಾರಿ ಕೊಳಕೆ ಸೀಸನ್‌ನಲ್ಲಿ ಬಿಳಿ ಜಯ ಭತ್ತದ ಬೆಳೆದು ಸಮೃದ್ಧ ಫಸಲು ನಿರೀಕ್ಷಿಸುತ್ತಿದ್ದಾರೆ.

    ಹಿಂದೆಲ್ಲ ಕೂಲಿಯಾಳುಗಳಿಂದ ಕೃಷಿ ಮಾಡಿಸಿ ಕೈಸೋತು ಹೋಗಿದ್ದ ಚಿತ್ತಣ್ಣ ಈ ಬಾರಿ ಐದು ಎಕರೆ ಗದ್ದೆಯಲ್ಲಿ ಯಾಂತ್ರೀಕೃತ ನಾಟಿಯೊಂದಿಗೆ ಭತ್ತದ ಬೇಸಾಯಕ್ಕೆ ಮುಂದಾಗಿದ್ದಾರೆ. 120ರಿಂದ 125 ದಿನದೊಳಗೆ ಕೊಯ್ಲಿಗೆ ಬರುವ ಈ ಬೆಳೆ ಪರಿಸರದಲ್ಲಿ ಹಸಿರು ತೋಟದಂತೆ ಕಂಗೊಳಿಸುತ್ತಿದೆ. ಮೈಲೊಟ್ಟು ಅತಿಕಾರಿಬೆಟ್ಟುವಿನ ನವೀನ್ ಪ್ರಭು ಎಂಬುವರ ಸಂಸ್ಥೆಯಿಂದ 17 ದಿನ ಬೆಳೆದಿದ್ದ 290 ಟ್ರೇ ನೇಜಿ ಖರೀದಿಸಿ ಯಂತ್ರ ಮುಖೇನ ನಾಟಿ ಮಾಡಲಾಗಿದೆ. ಕೊಯ್ಲಿಗೆ ಸಿದ್ಧಗೊಂಡಿರುವ ಭತ್ತದ ಬೆಳೆ ಮುಂದಿನ 10 ದಿನದಲ್ಲಿ ಕಟಾವಾಗಲಿದೆ. ಏಕಪ್ರಕಾರ ಹಾಗೂ ಅಚ್ಚುಕಟ್ಟಾಗಿ ಬೆಳೆದಿರುವ ಭತ್ತದ ಪೈರು ಚಿತ್ತಣ್ಣರ ಶ್ರಮಕ್ಕೆ ಸಿಕ್ಕ ಫಲದಂತಿದೆ. ಸುರತ್ಕಲ್‌ನ ರೈತ ಸಂಪರ್ಕ ಕೇಂದ್ರದೊಂದಿಗೆ ಸಂಪರ್ಕ ಹೊಂದಿರುವ ಚಿತ್ತಣ್ಣ ಈ ಬಾರಿ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಸಲಹೆ-ಸೂಚನೆಯಂತೆ ಯಾಂತ್ರೀಕೃತ ಬೇಸಾಯಕ್ಕೆ ಮನಸ್ಸು ಮಾಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಡೆ ಸಾಕಷ್ಟು ಕೃಷಿ ಭೂಮಿ ರಿಯಲ್ ಎಸ್ಟೇಟ್ ತೆಕ್ಕೆಗೆ ಬಿದ್ದಿದ್ದರೆ, ಇನ್ನುಳಿದ ಭೂಮಿ ಹಡೀಲು ಬಿದ್ದಿದೆ. ಕರೊನಾ ಪ್ರಕೋಪದ ಬಳಿಕ ಕೆಲವು ಪ್ರದೇಶಗಳಲ್ಲಿ ಯುವಕರು ಹಡೀಲು ಭೂಮಿ ಹದಗೊಳಿಸಿ ಬೇಸಾಯ ಮಾಡಲಾರಂಭಿಸಿದ್ದಾರೆ. ಅವೆಲ್ಲ ತಾತ್ಕಾಲಿಕ ಎಂದು ಹೇಳಬಹುದಾದರೂ, ಕೃಷಿಯಿಂದ ಲಾಭವಿದೆ. ಅದಕ್ಕೆ ಜ್ಞಾನವೂ ಬೇಕು, ವಿಜ್ಞಾನದ ಸಹಾಯವೂ ಬೇಕು ಎಂದು ಹೇಳುವ ಪ್ರಗತಿಪರ ಕೃಷಿಕ ಚಿತ್ತಣ್ಣರಂಥ ರೈತರು, ಯುವ ಜನಾಂಗಕ್ಕೆ ಪ್ರೇರಕ, ಮಾದರಿ.

    ರಮಾನಾಥ ಅತ್ತರ್ ಅವರಿಗೆ ನಾವು ಎಸ್‌ಎಫ್‌ಎಸ್‌ಎಂ ಯೋಜನೆಯಡಿ ಕೀಟನಾಶಕ, ಸಾವಯವ ಗೊಬ್ಬರ, ಎನ್‌ಪಿಕೆ ಕನ್ಸೋರ್ಟಿಯಂ, ಸೂಕ್ಷ್ಮ ಪೋಷಕಾಂಶ ಉಚಿತವಾಗಿ ಒದಗಿಸಿದ್ದೇವೆ. ಉಳಿದೆಲ್ಲ ಕ್ಷೇತ್ರಗಳಂತೆ ಈಗ ಕೃಷಿಯಲ್ಲೂ ಯಂತ್ರ ಹಾಸುಹೊಕ್ಕಾಗಿದೆ. ಕೃಷಿಯಲ್ಲಿ ಸಾಂಪ್ರದಾಯಿಕ ಕೂಲಿಯಾಳುಗಳ ಬಳಕೆ ಕಡಿಮೆಗೊಳಿಸಿ ಹೆಚ್ಚು ಇಳುವರಿ, ಲಾಭ ಗಳಿಸಲಿಚ್ಛಿಸುವವರು ವೈಜ್ಞಾನಿಕ ಕೃಷಿ ಪದ್ಧತಿಯ ಸಹಾಯ ಪಡೆಯಬಹುದು.
    ಅಬ್ದುಲ್ ಬಶೀರ್ ಕೃಷಿ ಅಧಿಕಾರಿ, ಸುರತ್ಕಲ್

    ಐದು ಎಕರೆ ಜಮೀನಿನಲ್ಲಿ ಭತ್ತದ ನೇಜಿ ಸಾಗಾಟ, ಉಳುಮೆ, ನಾಟಿ, ಕೂಲಿಯಾಳುಗಳ ಸಂಬಳ, ಕೀಟನಾಶಕ, ರಸಗೊಬ್ಬರ ಸಹಿತ ಈವರೆಗಿನ ಖರ್ಚು ಸುಮಾರು 61,500 ರೂ. ಇನ್ನುಳಿದಂತೆ ಯಂತ್ರದ ಮೂಲಕ ಕಟಾವಿಗೆ 15 ಸಾವಿರ ರೂ ತಗುಲುತ್ತದೆ. ಇಷ್ಟು ಕಡಿಮೆ ವೆಚ್ಚದಲ್ಲಿ ಕೂಲಿಯಾಳುಗಳಿಂದ ಭತ್ತದ ಕೃಷಿ ಮಾಡಲು ಸಾಧ್ಯವಿಲ್ಲ. ಯಾಂತ್ರಿಕ ಕೃಷಿಯಿಂದ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ಬೈಹುಲ್ಲಿಗೆ ಬೆಲೆ ಇದೆ. ನಷ್ಟ ಎಂದು ಭತ್ತದ ಕೃಷಿ ಬಿಡುವಂತಿಲ್ಲ. ಅಕ್ಕಿಗಾಗಿ ನಾವು ವಿದೇಶವನ್ನು ಅವಲಂಬಿಸಬಾರದು. ಸರ್ಕಾರದ ನೆರವು ಸದ್ಬಳಕೆಯಾಗಬೇಕು.
    ರಮಾನಾಥ ಅತ್ತರ್ ಕೃಷಿಕ ಮೂಡುಶೆಡ್ಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts