More

    2 ಸಾವಿರ ಹೆಕ್ಟೇರ್ ಭತ್ತ ಕೃಷಿ ಹಾನಿ

    ಹರೀಶ್ ಮೋಟುಕಾನ, ಮಂಗಳೂರು
    ಕರಾವಳಿಯಲ್ಲಿ ಪ್ರತಿದಿನ ಸುರಿಯುತ್ತಿರುವ ಬಿರುಸಿನ ಮಳೆಯಿಂದ ಕಟಾವು ಹಂತಕ್ಕೆ ಬಂದಿರುವ ಭತ್ತದ ಬೆಳೆ ನೀರುಪಾಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದ ಭತ್ತದ ಬೆಳೆ ನೆಲ ಕಚ್ಚಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,700 ಹೆಕ್ಟೇರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 350 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನಾಶವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ನಿರಂತರ ಮಳೆಯಿಂದ ರೈತರಿಗೆ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತಮ ಪೈರು ಬಂದಿದ್ದರೂ ಮಳೆಯಿಂದ ನಾಶವಾಗುವ ಭೀತಿ ಎದುರಾಗಿದೆ.

    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10,073 ಹೆಕ್ಟೇರ್ ಹಾಗೂ ಉಡುಪಿ ಜಿಲ್ಲೆಯಲ್ಲಿ 35,726 ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲಾಗಿತ್ತು. ಕಟಾವಿಗೆ ಹಂತಕ್ಕೆ ಬಂದಿರುವ ಬೆಳೆ ಕೊಯ್ಯಲು ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಕಟಾವು ಯಂತ್ರಗಳು ಬಂದಿವೆ. ಮಳೆಯಿಂದ  ಗದ್ದೆಯಲ್ಲಿ ನೀರು ನಿಂತಿದ್ದು, ಕೆಸರು ಮಣ್ಣಿನಿಂದ ಯಂತ್ರಗಳು ಕಟಾವಿಗೆ ಇಳಿಯಲು ಸಾಧ್ಯವಾಗುತ್ತಿಲ್ಲ. ಬಿಸಿಲು ಬಿದ್ದು, ಗದ್ದೆ ಒಣಗಿ ಗಟ್ಟಿಯಾಗಬೇಕು. ಇಲ್ಲದಿದ್ದರೆ ಕಟಾವು ಸಾಧ್ಯವಿಲ್ಲ. ಹೀಗೆಯೇ ಮಳೆ ಮುಂದುವರಿದರೆ ಬೆಳೆ ನಾಶವಾಗುವ ಸಾಧ್ಯತೆ ಇದೆ ಎಂದು ರೈತರು ತಿಳಿಸಿದ್ದಾರೆ.

    ಬಜ್ಪೆ ಅದ್ಯಪಾಡಿ ಪರಿಸರ ಹಾಗೂ ಕಿನ್ನಿಗೋಳಿ ಸಮೀಪದ ತಾಳಿಪಾಡಿ, ಎಳತ್ತೂರು, ಅತ್ತೂರು ಕೆಮ್ರಾಲ್, ಪಂಜ ಬೈಲಗುತ್ತು, ಕೊಯಿಕುಡೆ, ನೀರುಮಾರ್ಗದ ಓಂಟೆಮಾರ್, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಹಲವು ಕಡೆ ಗದ್ದೆಗಳು ಜಲಾವೃತವಾಗಿ ಭತ್ತದ ಪೈರು ನೆಲ ಕಚ್ಚಿ ಅಪಾರ ಹಾನಿ ಉಂಟಾಗಿದೆ.

    ಹಡಿಲು ಗದ್ದೆಯಲ್ಲೂ ಕೃಷಿ: ದಕ್ಷಿಣ ಕನ್ನಡ 500 ಹಾಗೂ ಉಡುಪಿ ಜಿಲ್ಲೆಯಲ್ಲಿ ಸಾವಿರಕ್ಕಿಂತಲೂ ಅಧಿಕ ಹೆಕ್ಟೇರ್ ಹಡಿಲು ಗದ್ದೆಗಳಲ್ಲಿ ಭತ್ತದ ಕೃಷಿ ಮಾಡಲಾಗಿದೆ. ಕೃಷಿ ಇಲಾಖೆ ಉತ್ತೇಜನದೊಂದಿಗೆ ಸಂಘ, ಸಂಸ್ಥೆಗಳು ಈ ಕಾರ್ಯದಲ್ಲಿ ಶ್ರಮಿಸುತ್ತಿವೆ. ಕಳೆದ ವರ್ಷವೂ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೆ ಕೃಷಿಗೆ ಹಾನಿಯಾಗಿತ್ತು. ಆದರೂ ಗುರಿ ಮೀರಿದ ಸಾಧನೆ ದಾಖಲಾಗಿತ್ತು. ಹಲವು ಸಮಸ್ಯೆಗಳ ನಡುವೆಯೂ ಶ್ರಮ ಪಟ್ಟು ಬೆಳೆದ ಬೆಳೆ ನಾಶವಾದಾಗ ಮುಂದಿನ ವರ್ಷ ಬೇಸಾಯ ಮಾಡುವ ಆಸಕ್ತಿಯೂ ಕುಗ್ಗುತ್ತದೆ.

    ನಮ್ಮಲ್ಲಿ ಭತ್ತ ಕಟಾವಿಗೆ ಸಿದ್ಧಗೊಂಡಿದೆ. ಗದ್ದೆಯಲ್ಲಿ ನೀರು ನಿಂತಿದ್ದು, ಕಟಾವು ಸಾಧ್ಯವಾಗುತ್ತಿಲ್ಲ. ಒಂದು ಗದ್ದೆಯಲ್ಲಿ ಪೈರು ಅಡ್ಡ ಬಿದ್ದು ಹಾನಿಯಾಗಿದೆ. ಬಿರುಸಿನ ಮಳೆ ಇನ್ನೂ ಮುಂದುವರಿದರೆ ಪೂರ್ಣ ಪ್ರಮಾಣದಲ್ಲಿ ಬೆಳೆ ನಾಶ ಸಾಧ್ಯತೆ ಇದೆ.  
     ವಾಸಪ್ಪ ವೀರಕಂಬ ಭತ್ತದ ಕೃಷಿಕ

    ಕರಾವಳಿಯಲ್ಲಿ ಮಳೆ ಸುರಿಯುತ್ತಿರುವುದರಿಂದ ಭತ್ತ ಕಟಾವಿಗೆ ಸಮಸ್ಯೆಯಾಗಿದೆ. ಎಂ 4 ತಳಿ ಬಿತ್ತನೆ ಮಾಡಿದವರಿಗೆ ಗದ್ದೆಯಲ್ಲಿ ನೀರು ನಿಂತರೂ ಸಮಸ್ಯೆ ಇಲ್ಲ. ಅದಕ್ಕೆ ನೀರನ್ನು ತಡೆದುಕೊಳ್ಳುವ ಶಕ್ತಿ ಇದೆ. ಎಷ್ಟು ಹೆಕ್ಟೇರ್‌ನಲ್ಲಿ ಹಾನಿ ಉಂಟಾಗಿದೆ ಎಂಬ ಬಗ್ಗೆ ಸಮೀಕ್ಷೆ ನಡೆಸಲಾಗುತ್ತಿದೆ.
     ಡಾ.ಸೀತಾ/ಕೆಂಪೇಗೌಡ ಜಂಟಿ ಕೃಷಿ ನಿರ್ದೇಶಕರು, ದ.ಕ., ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts