More

    ಅವಳಿ ಸಹೋದರರಿಂದ ಗದ್ದೆ ಕೃಷಿ

    ಪ್ರವೀಣ್‌ರಾಜ್ ಕೊಯಿಲ ಕಡಬ

    ನಾವು ತಿನ್ನುವ ಅಕ್ಕಿಯ ಮೂಲ ಭತ್ತ ಗಿಡದಲ್ಲ್ಲಿ ಅಥವಾ ಮರದಲ್ಲಿ ಆಗೋದಾ ಎನ್ನುವ ಬಗ್ಗೆ ಪ್ರಸ್ತುತ ಮಕ್ಕಳಿಗೆ ಗೊಂದಲವಿದೆ. ಇಂಥಹುದೇ ಗೊಂದಲವಿದ್ದ ತಮ್ಮ ತಂಗಿಗೆ ಭತ್ತದ ಕೃಷಿಯನ್ನು ಅಂಗಳದಲ್ಲೇ ಮಾಡಿ ತೋರಿಸಿದ್ದಾರೆ ಬೆಳಂದೂರು ಗ್ರಾಮದ ಅಮೈ ಎಂಬಲ್ಲಿನ ಅವಳಿ ಸಹೋದರರು. ಆನ್‌ಲೈನ್ ತರಗತಿಯ ನಡುವೆಯೇ ಬಿಡುವು ಮಾಡಿಕೊಂಡು ಈ ಸಹೋದರರು ಕೃಷಿ ಮಾಡಿದ್ದು, ಕಟಾವಿಗೆ ಸಿದ್ಧಗೊಂಡಿದೆ.

    ಬೆಳಂದೂರು ಗ್ರಾಮದ ಅಮೈ ಕೇಶವ ಗೌಡ ಮತ್ತು ನಿರ್ಮಲ ದಂಪತಿಯ ಮಕ್ಕಳಾದ ಭುವನ್ ಮತ್ತು ಭವನ್ ಎನ್ನುವ ಸಹೋದರರು ಭತ್ತ ಬೆಳೆದವರು. ದ.ಕ ಜಿಲ್ಲೆಯ ಹೊಸ ತಲೆಮಾರಿಗೆ ಭತ್ತದ ಕೃಷಿ ಬಗ್ಗೆ ಅರಿವೇ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇಂಥಹುದೇ ಒಂದು ರೀತಿಯ ಪ್ರಶ್ನೆಯನ್ನು ಸಹೋದರಿ ಶ್ರೀಯಜ್ಞ ಸಹೋದರರಿಗೆ ಕೇಳಿದ್ದಳು. ತಿನ್ನುವ ಅಕ್ಕಿ ಎಲ್ಲಿ ಸಿಗುತ್ತೆ, ಹೇಗೆ ಸಿಗುತ್ತೆ ಎನ್ನುವ ತಂಗಿಯ ಪ್ರಶ್ನೆಗೆ ಇವರು ಪ್ರಾಯೋಗಿಕವಾಗಿ ಉತ್ತರ ನೀಡಿದ್ದಾರೆ.

    ಭತ್ತ ಕೃಷಿಯ ಮಹತ್ವ ತಿಳಿದಿತ್ತು. ಈ ಕಾರಣಕ್ಕಾಗಿ ಮನೆಯ ಅಂಗಳದಲ್ಲೇ ಭತ್ತವನ್ನು ಭಿತ್ತಿ ಭತ್ತದ ಕೃಷಿಗೆ ಮುಂದಾದ ಈ ವಿದ್ಯಾರ್ಥಿಗಳು ಭತ್ತದ ಕೃಷಿಯ ಮಹತ್ವ ತಿಳಿಸಲು ಮುಂದಾಗಿದ್ದಾರೆ. ಅಂಗಳವನ್ನು ಮಣ್ಣು ಹಾಕಿ ಹದ ಮಾಡಿ, ಮಣ್ಣು ಸವೆದು ಹೋಗದಂತೆ ಸುತ್ತ ಕಟ್ಟೆ ಕಟ್ಟಿ ನೀರಿನ ಒರತೆಯಿರುವಂತೆ ನೋಡಿಕೊಂಡಿದ್ದಾರೆ. ಭತ್ತದ ಗಿಡಗಳ ಮಧ್ಯೆ ಹುಲ್ಲು ಬೆಳೆಯದಿರಲಿ ಎನ್ನುವ ಕಾರಣಕ್ಕೆ ತೆಂಗಿನ ಮರದ ಗರಿ ಹಾಗೂ ಒಣ ಅಡಕೆ ಸಿಪ್ಪೆಗಳನ್ನು ಹರಡಲಾಗಿದೆ. ಗದ್ದೆಯ ಸುತ್ತ ನೆಟ್ ಅಳವಡಿಸಿ ಪ್ರಾಣಿ ಪಕ್ಷಿಗಳಿಂದ ರಕ್ಷಿಸಲಾಗಿದೆ. ಈಗ ಉತ್ತಮ ಫಸಲು ಬೆಳೆದು ನಿಂತಿದೆ.

    ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ವರ್ಷದ ಬಿಎಸ್ಸಿ ವಿದ್ಯಾಭ್ಯಾಸ ಮಾಡಿಕೊಂಡಿರುವ ಈ ಅವಳಿ ಸಹೋದರರು ಕರೊನಾ ಕಾರಣದಿಂದ ಮನೆಯಲ್ಲೇ ಉಳಿದುಕೊಂಡಿದ್ದರು. ಇದೇ ಸಮಯವನ್ನು ಸದುಪಯೋಗಪಡಿಸಿಕೊಂಡ ಈ ವಿದ್ಯಾರ್ಥಿಗಳು ಮನೆಯ ಮುಂದಿನ 6 ಸೆಂಟ್ಸ್ ವಿಸ್ತಾರವಿರುವ ಅಂಗಳದಲ್ಲಿ ಭತ್ತ ಬೆಳೆಯುವ ಯೋಜನೆ ಹಾಕಿ ಅದರಲ್ಲಿ ಸಫಲತೆ ಪಡೆದುಕೊಂಡಿದ್ದಾರೆ.

    ಮನೆ ಮಂದಿಯ ಸಹಕಾರ
    ಮೂರು ವರ್ಷದ ಹಿಂದೆ ಅಂಗಳದಲ್ಲೇ ಭತ್ತ ಬೆಳೆಯುವುದನ್ನು ಆರಂಭಿಸಿದ್ದ ಈ ವಿದ್ಯಾರ್ಥಿಗಳು ಈ ಬಾರಿ ಕೊನೆಯ ಪರೀಕ್ಷೆಯನ್ನು ಎದುರಿಸುತ್ತಿರುವ ಕಾರಣಕ್ಕಾಗಿ ಕೊಂಚ ಕಡಿಮೆ ಸ್ಥಳದಲ್ಲಿ ಭತ್ತದ ನಾಟಿ ಮಾಡಿದ್ದಾರೆ. ಭತ್ತದ ಕೃಷಿಗೆ ಬೇಕಾದ ಎಲ್ಲ ಸಿದ್ಧತೆಗಳನ್ನೂ ಈ ಇಬ್ಬರೇ ಮಾಡಿಕೊಂಡಿದ್ದು, ಮನೆ ಮಂದಿಯೂ ಇವರಿಗೆ ಬೇಕಾದ ಸಹಕಾರ ನೀಡಿದ್ದಾರೆ.

    ಬೇಸಾಯ ಪದ್ಧತಿ ಹಳ್ಳಿಗಳಲ್ಲಿ ಮರೆಯಾಗುತ್ತಿದ್ದು, ಇಂತಹ ಕಾಲಘಟ್ಟದಲ್ಲಿ ಸಹೋದರರು ಗದ್ದೆ ಕೃಷಿಯಲ್ಲಿ ತೊಡಗಿಸಿಕೊಂಡು ಇನ್ನು ಜೀವಂತವಾಗಿಸಿಕೊಂಡಿರುವುದು ಶ್ಲಾಘನೀಯ. ಶಿಕ್ಷಣ ಪಡೆದು ಪೇಟೆಗಳತ್ತ ಮುಖ ಮಾಡುವ ಬದಲು ಈ ರೀತಿ ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು.
    ರಾಮಕೃಷ್ಣ ಪ್ರಭು, ಸವಣೂರು, ಸಾಮಾಜಿಕ ಮುಂದಾಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts