More

    ಹಡಿಲು ಗದ್ದೆಯೀಗ ಹಸಿರುಮಯ: 4 ಎಕರೆ ಭೂಮಿಯಲ್ಲಿ ಭತ್ತ ಕೃಷಿ ಮಾಡಿದ ಕಿಲಿಂಜಾರು ಯುವಕ 

    ಮಂಗಳೂರು: ಹಲವು ವರ್ಷಗಳಿಂದ ಹಡಿಲು ಬಿದ್ದಿದ್ದ ಕುಪ್ಪೆಪದವು ಕಿಲಿಂಜಾರುವಿನ 4 ಎಕರೆ ಗದ್ದೆ ಈಗ ವೈವಿಧ್ಯಮಯ ಭತ್ತದ ತಳಿಗಳಿಂದ ಕಂಗೊಳಿಸುತ್ತಿದೆ. ಬಳಕೆಯಲ್ಲಿಲ್ಲದ ಭೂಮಿಯಲ್ಲಿ ಮರುಹಸಿರು ತುಂಬಿದವರು ಮುಂಗ್ಲಿಜಾರುವಿನ ದಾಮೋದರ ಶೆಟ್ಟಿ.
    ದಾಮೋದರ್ ಅವರು 35 ವರ್ಷಗಳಿಂದ ಗುಜರಾತ್‌ನಲ್ಲಿ ಹೊಟೇಲ್‌ನಲ್ಲಿ ಉದ್ಯೋಗದಲ್ಲಿದ್ದವರು. ಎರಡೆರಡು ಸಲ ಕೋವಿಡ್ ಲಾಕ್‌ಡೌನ್‌ನಿಂದ ಹೊಟೇಲ್ ಬಾಗಿಲು ಹಾಕಿದಾಗ ಕಂಗೆಟ್ಟು ಊರಿಗೆ ಬಂದು ಹಲವು ವರ್ಷಗಳಿಂದ ಹಡಿಲು ಬಿದ್ದಿದ್ದ ನಾಲ್ಕು ಎಕರೆ ಗದ್ದೆಯನ್ನು ಏಕಾಂಗಿಯಾಗಿ ಪುನಶ್ಚೇತನಗೊಳಿಸಿದ್ದಾರೆ. ಇನ್ಯಾರದ್ದೋ ಕೈಕೆಳಗೆ ದುಡಿಯುವ ಬದಲು ಮನೆಯ ಭೂಮಿಯಲ್ಲಿ ಫಸಲು ತೆಗೆಯಲು ಪಟ್ಟು ಹಿಡಿದಿರುವ ಸಾಧಕ ಇವರು.
    ಮೊದಲ ಪ್ರಯತ್ನದಲ್ಲಿ ಕೇರಳ ಕುಟ್ಟಿ, ಭದ್ರ, ಎಂಒ 30 ಹೀಗೆ 3 ಬಗೆಯ ತಳಿಗಳನ್ನು ಬೆಳೆದಿದ್ದಾರೆ. ಕೃಷಿಯ ಬಗ್ಗೆ ಆಸಕ್ತಿ ಇದ್ದರೂ ಅನುಭವ ಇರಲಿಲ್ಲ. ಇಂಥ ಸಂದಿಗ್ಧ ಸಂದರ್ಭದಲ್ಲಿ ಪ್ರೋತ್ಸಾಹ ನೀಡಿದವರು ರೈತಸಂಘ ಹಸಿರು ಸೇನೆಯ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮತ್ತು ಸ್ಥಳೀಯ ಭತ್ತ ಕೃಷಿಕರು.
    ಹಡಿಲು ಬಿದ್ದಿದ್ದ ಗದ್ದೆಯನ್ನು ಪುನಶ್ಚೇತನಗೊಳಿಸುವುದು ಸುಲಭದ ಕೆಲಸವಾಗಿರಲಿಲ್ಲ. ಹಠಹಿಡಿದು ಬೆಳಗ್ಗೆ 6ರಿಂದ ಸಾಯಂಕಾಲ 6ರವರೆಗೆ ಏಕಾಂಗಿಯಾಗಿ ತಿಂಗಳ ಕಾಲ ದುಡಿಮೆ ಮಾಡಿದರು. ಟ್ರಾಕ್ಟರ್ ಸಹಾಯದಿಂದ ಹದಗೊಳಿಸಿ, ಕೃಷಿ ಕಾರ್ಮಿಕರಿಂದ ನೇಜಿ ನಾಟಿ ಮಾಡಿದ್ದಾರೆ.
    ಗದ್ದೆಗೆ ಯಾವುದೇ ರಾಸಾಯನಿಕ ಮತ್ತು ಹಟ್ಟಿಗೊಬ್ಬರ ಹಾಕಿಲ್ಲ. ಗುಡ್ಡದಿಂದ ಹಸಿರೆಲೆ ಹೊತ್ತುತಂದು ಮಣ್ಣಿಗೆ ಸೇರಿಸಲಾಗಿದೆ. ನೇಜಿ ಹುಟ್ಟುವುದೇ ಕಷ್ಟ ಎಂದುಕೊಂಡಿದ್ದ ಸ್ಥಳೀಯರು ಈಗ ಸಮೃದ್ಧ ಸಸಿಯನ್ನು ಕಂಡು ಆಶ್ಚರ್ಯಪಟ್ಟಿದ್ದಾರೆ. ಅನುಭವವೇ ಇಲ್ಲದ ಯುವಕನ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
    4 ಎಕರೆ ಗದ್ದೆಯನ್ನು ಪುನಶ್ಚೇತನಗೊಳಿಸಲು ಈವರೆಗೆ  ರೂ.50 ಸಾವಿರ ಖರ್ಚು ಆಗಿದೆ. ಖರ್ಚು ವೆಚ್ಚ ಸಮದೂಗಿಸಲು ನಾಟಿಯ ಬಳಿಕದ ದಿನಗಳಲ್ಲಿ ಬೇರೆ ಕಡೆ ಕೆಲಸಕ್ಕೆ ಹೋಗುತ್ತಿದ್ದೇನೆ. ಮುಂಜಾನೆ ಮತ್ತು ಸಾಯಂಕಾಲ ಗದ್ದೆಗೆ ಬಂದು ನೀರು ಕಟ್ಟುವ, ಕಳೆ ತೆಗೆಯುವ ಕಾರ್ಯ ಮಾಡುತ್ತಿದ್ದೇನೆ ಎನ್ನುತ್ತಾರೆ ದಾಮೋದರ ಶೆಟ್ಟಿ.
    ಆಸಕ್ತ ಯುವಕರಿಗೆ ಸೂಕ್ತ ಮಾರ್ಗದರ್ಶನ, ಪ್ರೋತ್ಸಾಹ ಸಿಕ್ಕರೆ ಕೃಷಿಯೆಡೆಗೆ ಮರಳುತ್ತಾರೆ ಎನ್ನುವುದಕ್ಕೆ ದಾಮೋದರ ಶೆಟ್ಟಿ ಮಾದರಿ. ಯುವ ಕೃಷಿಕರಿಗೆ ಸರ್ಕಾರಿ ಸೌಲಭ್ಯಗಳ ಮಾಹಿತಿ ಸೇರಿದಂತೆ ಇತರ ಮಾರ್ಗದರ್ಶನ ನೀಡಲು ನಾನು ಎಂದಿಗೂ ಸಿದ್ಧ.
     ಮನೋಹರ ಶೆಟ್ಟಿ ನಡಿಕಂಬಳಗುತ್ತು.
    ಕೃಷಿಯ ಬಗ್ಗೆ ಆಸಕ್ತಿ ಇತ್ತು. ಆದರೆ ಅನುಭವ ಇರಲಿಲ್ಲ. ಹಿರಿಯ ಕೃಷಿಕರ, ಇಲಾಖೆಯ ಮಾರ್ಗದರ್ಶನದಂತೆ ಹಡಿಲು ಬಿದ್ದಿದ್ದ ಗದ್ದೆಯಲ್ಲಿ ನೇಜಿ ಹಾಕಿದ್ದೇನೆ. ಬೇರೆಯವರ ಬಳಿ ದುಡಿಯುವುದಕ್ಕಿಂತ ಸ್ವಂತ ಜಮೀನಲ್ಲಿ ದುಡಿಯುವ ಖುಷಿ ಬೇರೆಯೆ. ಮುಂದೆ ಗೊಬ್ಬರಕ್ಕಾಗಿ ದನ ಸಾಕುವ ಯೋಚನೆ ಇದೆ.
     ದಾಮೋದರ ಶೆಟ್ಟಿ, ಹಡಿಲು ಗದ್ದೆಯಲ್ಲಿ ಕೃಷಿ ಮಾಡಿದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts