More

    ಪಾದರಾಯನಪುರ ಗಲಭೆ ಪ್ರಕರಣ: 186 ಪೊಲೀಸರಿಗೆ ಹೋಂ ಕ್ವಾರಂಟೈನ್

    ಬೆಂಗಳೂರು: ಕರೊನಾ ಸೋಂಕು ಹರಡದಂತೆ ನಿಯಂತ್ರಿಸುವಲ್ಲಿ ತಂಡದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಪೊಲೀಸರಿಗೆ ಸುರಕ್ಷತೆ ಇಲ್ಲದಂತಾಗಿದೆ. ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಬಂಧಿತ ಐವರಿಗೆ ಸೋಂಕು ದೃಢವಾಗಿರುವ ಬೆನ್ನಲ್ಲೇ 186 ಪೊಲೀಸರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಇದು ಈಗ ಬೆಂಗಳೂರಿನ ಅರ್ಧ ಪೊಲೀಸರಿಗೆ ಆತಂಕ ತಂದಿದೆ.

    ಪಾದರಾಯನ ಪುರದಲ್ಲಿ ಕರೊನಾ ವಾರಿಯರ್ಸ್ ಕೊಲೆಗೆ ಯತ್ನಿಸಿ ಸೀಲ್​ಡೌನ್ ಬ್ಯಾರಿಕೇಡ್ ಕಿತ್ತು ಹಾಕಿದ್ದ ಪುಂಡರನ್ನು ರಾತ್ರೋರಾತ್ರಿ ಪೊಲೀಸರು ಬಂಧಿಸಿದ್ದರು. ಬಂಧಿತರ ಪೈಕಿ ಐವರಿಗೆ ಕರೊನಾ ಸೋಂಕು ಇರುವ ಕಾರಣಕ್ಕೆ ಸರ್ಕಾರಕ್ಕೆ ಭಯ ಶುರುವಾಗಿದೆ. ಶುಕ್ರವಾರ ಮೈಸೂರು ರಸ್ತೆ ಸಿಎಆರ್ ಮೈದಾನದಲ್ಲಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಶ್ಚಿಮ, ಉತ್ತರ, ಕೇಂದ್ರ ವಲಯ ಮತ್ತು ಸಿಸಿಬಿ ಪೊಲೀಸರಿಗೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿದೆ. ಶನಿವಾರ ಮತ್ತು ಭಾನುವಾರವೂ ಪೊಲೀಸರ ಗಂಟಲಿನಿಂದ ದ್ರವ ಪಡೆಯಲಾಗುತ್ತದೆ. ಅಗತ್ಯ ಇದ್ದರೆ ಕುಟುಂಬ ಸದಸ್ಯರಿಗೂ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸರ್ಕಾರ ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಪರಿಕರಗಳನ್ನು ಸರಿಯಾಗಿ ಒದಗಿಸಿರಲಿಲ್ಲ. ಸಮಾಜಘಾತಕ ಶಕ್ತಿಗಳ ವಿರುದ್ಧ ಕಾರ್ಯಾಚರಣೆಗಾಗಿ ಪ್ರತ್ಯೇಕ ತಂಡ ರಚನೆ ಮಾಡಿ ಪಿಪಿ ಕಿಟ್ ಕೊಟ್ಟು ಕೋವಿಡ್ ವೈದ್ಯರಿಂದ ಅರಿವು ಮೂಡಿಸಬೇಕಿತ್ತು. ಕೇವಲ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.

    ರಾತ್ರೋರಾತ್ರಿ ಪುಂಡರನ್ನು ಹಿಡಿಯುವಂತೆ ಸೂಚನೆ ನೀಡಲಾಗಿತ್ತು. ಪಶ್ಚಿಮ, ಉತ್ತರ, ಕೇಂದ್ರ ಮತ್ತು ಸಿಸಿಬಿ ಸಿಬ್ಬಂದಿ ಹಾಟ್​ಸ್ಪಾಟ್ ಪಾದರಾಯನಪುರದ ಗಲ್ಲಿಗಲ್ಲಿಗೆ ನುಗ್ಗಿ ಆರೋಪಿಗಳನ್ನು ಎಳೆದುತಂದಿದ್ದರು. ಆರೋಪಿಗಳನ್ನು ಸಿಎಆರ್ ಮೈದಾನದ ಮಂಗಳ ಕಲ್ಯಾಣ ಮಂಟಪದಲ್ಲಿ ಕೂಡಿಡಲಾಗಿತ್ತು. ಸಿಸಿಬಿ ಪೊಲೀಸರು 83 ಮಂದಿಯನ್ನು ವಶಕ್ಕೆ ಪಡೆದು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ 2 ತಾಸು ವಿಚಾರಣೆ ನಡೆಸಿದ್ದಾರೆ. ಆ ನಂತರ ಕಲ್ಯಾಣ ಮಂಟಪಕ್ಕೆ ಕರೆತರಲಾಗಿತ್ತು. ಆರೋಪಿಗಳ ಕತ್ತಿನ ಪಟ್ಟಿ ಹಿಡಿದು ಜೀಪಿನಲ್ಲಿ ಕೂರಿಸಿ ಕರೆತಂದಿದ್ದರು. ಇಷ್ಟೆಲ್ಲ ಮಾಡುವರಿಗೆ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೋವಿಡ್ ಪರೀಕ್ಷೆಗೆ ಮುಂದಾಗಿದ್ದಾರೆ. ನಮ್ಮ ಕುಟುಂಬದ ಪರಿಸ್ಥಿತಿ ಏನಾಗಬೇಕೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮುನ್ನೆಚ್ಚರಿಕೆ ಕ್ರಮ ವಹಿಸಿರಲಿಲ್ಲ

    ದೆಹಲಿ ಧಾರ್ವಿುಕ ಸಭೆಯಲ್ಲಿ ಭಾಗವಹಿಸಿದ್ದ ತಬ್ಲಿಘಿಗಳನ್ನು ಅವರ ಮೊಬೈಲ್ ನಂಬರ್ ಜಾಡು ಹಿಡಿದು ಮನೆ ಮನೆಗೆ ಹೋಗಿ ಕರೆತರಲಾಗಿತ್ತು. ಆಗಲೂ ಮೇಲಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ಕೇವಲ ಎಚ್ಚರದಿಂದ ಇರುವಂತೆ ಮಾರ್ಗದರ್ಶನ ಕೊಡುತ್ತಿದ್ದರು. ಅದಕ್ಕೆ ಬೇಕಾದ ಸೌಕರ್ಯ ಒದಗಿಸದೆ ಇದೀಗ ಪರಿತಪಿಸುವಂತೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಇಂದಿನಿಂದ ರಾಜ್ಯಾದ್ಯಂತ ರಂಜಾನ್; ಸಂಕಷ್ಟ ದೂರವಾಗಲಿ ಸೌಹಾರ್ದ ಬೆಸೆಯಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts