More

    ಬರಗೇರಮ್ಮ ದೇವಿ ಕೆಂಡೋತ್ಸವ ಸಂಪನ್ನ

    ಬರಗೇರಮ್ಮ ದೇವಿ ಕೆಂಡೋತ್ಸವ ಸಂಪನ್ನಬರಗೇರಮ್ಮ ದೇವಿ ಕೆಂಡೋತ್ಸವ ಸಂಪನ್ನ

    ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆಯಲ್ಲಿ ಇರುವ ನಗರದೇವತೆ ಬರಗೇರಮ್ಮ ದೇಗುಲದಲ್ಲಿ ದೇವಿಯ ಕೆಂಡೋತ್ಸವ ಗುರುವಾರ ರಾತ್ರಿ ವೈಭವೋಪೇತವಾಗಿ ನೆರವೇರುವ ಮೂಲಕ ಸಂಪನ್ನಗೊಂಡಿತು. ಇದಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು.

    ಓಬವ್ವಳ ನಾಡಿನ ನವದುರ್ಗೆಯರಲ್ಲಿ ಬರಗೇರಮ್ಮ ಪ್ರಮುಖ ಶಕ್ತಿದೇವತೆಯಾಗಿದ್ದು, ನವರಾತ್ರಿ ಮಹೋತ್ಸವದಲ್ಲಿ ಒಂಬತ್ತು ದಿನವೂ ದೇವಿಯ ಆರಾಧನೆಯೊಂದಿಗೆ ವಿಶೇಷ ಪೂಜೆಗಳು ಜರುಗಿದವು. ಒಂಬತ್ತು ರಾತ್ರಿ, ಹತ್ತು ಹಗಲು ವಿವಿಧ ಬಗೆಯಲ್ಲಿ ದೇವಿಗೆ ವೈವಿಧ್ಯಮಯ ಅಲಂಕಾರ ಸೇವೆ ಜರುಗಿತು.

    ಪ್ರತಿ ವರ್ಷ ವಿಜಯದಶಮಿ ಹಬ್ಬವಾದ ಮರುದಿನ ಕೆಂಡೋತ್ಸವ ನಡೆಯುವುದು ಪ್ರತೀತಿ. ಕರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕಳೆಗುಂದಿದ್ದ ಉತ್ಸವ ಈ ಬಾರಿ ಪುನಃ ಕಳೆಗಟ್ಟುವ ಮೂಲಕ ಹೆಚ್ಚಿನ ಸಂಖ್ಯೆಯ ಭಕ್ತರನ್ನು ಸೆಳೆಯುವಲ್ಲಿ ಸಫಲವಾಯಿತು. ಬುಡಕಟ್ಟು ಸಂಸ್ಕೃತಿಯ ವಿಧಾನದಂತೆ ಪೂಜಾ ಕೈಂಕರ್ಯ ಮುಂಜಾನೆಯಿಂದಲೇ ನಡೆಯಿತು. ಕೆಂಡೋತ್ಸವಕ್ಕೆ ಬುಧವಾರ ರಾತ್ರಿಯಿಂದಲೇ ಸಿದ್ಧತೆ ಕೈಗೊಳ್ಳಲಾಗಿತ್ತು.

    ಕೆಂಡೋತ್ಸವ ಅಂಗವಾಗಿ ದೇವಿಯ ಉತ್ಸವಮೂರ್ತಿಯೊಂದಿಗೆ ಪಲ್ಲಕ್ಕಿಯನ್ನೂ ವಿವಿಧ ವರ್ಣದ ಪುಷ್ಪಗಳಿಂದ, ಆಕರ್ಷಕ ವಸ್ತುಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿತ್ತು. ಐತಿಹಾಸಿಕ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆ ನೆರವೇರಿದ ಬಳಿಕ ದೇಗುಲದ ಅರ್ಚಕರಾದ ಪೂಜಾರ್ ಮಂಜು, ಪೂಜಾರ್ ರವಿ, ಪೂಜಾರ್ ಶಿವು ಕೆಂಡ ತುಳಿಯುವ ಮೂಲಕ ದೇವಿಗೆ ಕೆಂಡಾರ್ಚನೆ ಪೂಜೆಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದರು. ಈ ವೇಳೆ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನಂತರ ಮಹಾಮಂಗಳಾರತಿ ಸ್ವೀಕರಿಸಿದರು.

    ದೇವಿಯ ಉತ್ಸವಮೂರ್ತಿಯ ಪಲ್ಲಕ್ಕಿ ಮೆರವಣಿಗೆಯೂ ಬುರುಜನಹಟ್ಟಿಯ ಬರಗೇರಮ್ಮ ದೇವಿಯ ಪಾದದ ಗುಡಿಯಿಂದ ಆರಂಭವಾಗಿ ಸಂಗೊಳ್ಳಿರಾಯಣ್ಣ ವೃತ್ತ, ಗೌರಸಂದ್ರ ಮಾರಮ್ಮ ದೇಗುಲ, ರೇಣುಕಾ ಯಲ್ಲಮ್ಮ ದೇಗುಲ, ಹೊಳಲ್ಕೆರೆ ರಸ್ತೆ ಮಾರ್ಗವಾಗಿ ದೇಗುಲದವರೆಗೂ ನೂರಾರು ಭಕ್ತರ ಉಧೋ ಉಧೋ ಎಂಬ ಜಯಘೋಷ, ಮಂಗಳ ವಾದ್ಯಗಳೊಂದಿಗೆ ಸಾಗಿತು. ಕೆಂಡೋತ್ಸವ ಮುಗಿದ ಬಳಿಕ ಪಾದದ ಗುಡಿಯಲ್ಲಿ ಗುಡಿದುಂಬುವ ಕಾರ್ಯಕ್ರಮ ನಡೆಯಿತು.

    ದೇಗುಲದ ಗರ್ಭಗುಡಿಯ ದೇವಿ ಮೂರ್ತಿಯನ್ನೂ ವಿವಿಧ ಬಗೆಯ ಪುಷ್ಪಗಳಿಂದ ಅರ್ಚಕರು ಅಲಂಕರಿಸಿದ್ದರು. ಮುಂಭಾಗದ ಬನ್ನಿ ಮಹಾಕಾಳಮ್ಮ ದೇವಿಗೆ ದೊಡ್ಡ ಭಂಡಾರದ ಪೂಜೆ ನೆರವೇರಿತು. ಒಟ್ಟಾರೆ ಇಡೀ ದೇಗುಲದ ಆವರಣ ವಿದ್ಯುತ್‌ ದೀಪಾಲಂಕಾರ, ಪುಷ್ಪಾಲಂಕಾರದೊಂದಿಗೆ ಕಂಗೊಳಿಸಿತು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts