More

    ಹಚ್ಚ ಹಸಿರಿನ ತಾಣವಾಗಲಿದೆ ಪಚ್ಚನಾಡಿ

    ಪಿ.ಬಿ ಹರೀಶ್ ರೈ ಮಂಗಳೂರು
    ಎಲ್ಲೂ ದುರ್ನಾತವಿಲ್ಲ. ಒಳ ಪ್ರವೇಶಿಸಿದರೆ ಅಸಹ್ಯ ಪಡುವ ಪರಿಸ್ಥಿತಿ ಇಲ್ಲ. ಸುತ್ತ ಹಚ್ಚ ಹಸಿರಿನ ಸುಂದರ ತಾಣ, ಜತೆಗೆ ಸುಸಜ್ಜಿತ ಕ್ರೀಡಾಂಗಣ, ತ್ಯಾಜ್ಯ ಸಂಸ್ಕರಣೆಯ ಪ್ರದೇಶದಲ್ಲಿ ಇಂಥ ವ್ಯವಸ್ಥೆ ಕಾಣಲು ಸಾಧ್ಯವೇ..?
    ಗುಜರಾತ್ ಮೂಲದ ಅಬೆಲಾನ್ ಸಂಸ್ಥೆ ಮಂಗಳೂರಿನ ಪಚ್ಚನಾಡಿಯಲ್ಲಿ ಇಂಥ ಅತ್ಯಾಧುನಿಕ ಮಾದರಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲು ಆಸಕ್ತವಾಗಿದೆ. 

    ಪಚ್ಚನಾಡಿಗೆ ಭೇಟಿ ನೀಡಿರುವ ಸಂಸ್ಥೆ ತಜ್ಞರು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಮಂಗಳೂರು ಪಾಲಿಕೆಗೆ ಹಸ್ತಾಂತರಿಸಿದ್ದಾರೆ. ಈ ಕುರಿತಂತೆ ಪಾಲಿಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ. ಗುಜರಾತ್‌ನ ಜಾಮ್‌ನಗರ, ರಾಜ್‌ಕೋಟ್, ಅಹಮದಾಬಾದ್, ವಡೋದರ ಸಹಿತ ಹಲವೆಡೆ ಅಬೆಲಾನ್ ಇಂತಹ ಅತ್ಯಾಧುನಿಕ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸುತ್ತಿದೆ.

    ತ್ಯಾಜ್ಯದಿಂದ ವಿದ್ಯುತ್: ಅಬೆಲಾನ್ ಪಚ್ಚನಾಡಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಘಟಕ (ವೇಸ್ಟ್ ಟು ಎನರ್ಜಿ ಪವರ್ ಪ್ಲಾಂಟ್) ನಿರ್ಮಿಸಲಿದೆ. ಪ್ರತಿದಿನ ಗೊಬ್ಬರ ತಯಾರಿ ಹಾಗೂ ವಿದ್ಯುತ್ ಉತ್ಪಾದನೆ ಮೂಲಕ 700 ಟನ್ ತ್ಯಾಜ್ಯ ವಿಲೇವಾರಿ ಮಾಡುವುದಾಗಿ ತನ್ನ ಪ್ರಸ್ತಾವನೆಯಲ್ಲಿ ತಿಳಿಸಿದೆ. ಇದಕ್ಕಾಗಿ 15 ಎಕರೆ ಭೂಮಿಯನ್ನು 25 ವರ್ಷ ಅವಧಿಗೆ ಗುತ್ತಿಗೆ ನೀಡುವಂತೆ ಕೋರಿದೆ. ಆರಂಭದ ಎರಡು ವರ್ಷ ತ್ಯಾಜ್ಯ ಸಂಸ್ಕರಣೆ ವೆಚ್ಚವನ್ನು ಮನಪಾ ಭರಿಸಬೇಕು. ಬಳಿಕ ಉತ್ಪಾದನೆಯಾಗುವ ವಿದ್ಯುತ್ ಮೆಸ್ಕಾಂಗೆ ಮಾರಾಟ ಮಾಡಿ ಬಂದ ಆದಾಯದಿಂದ ಅಬೆಲಾನ್ ಉಚಿತವಾಗಿ ತ್ಯಾಜ್ಯ ಸಂಸ್ಕರಣೆ ಮಾಡಲಿದೆ.

    10 ಲಕ್ಷ ಟನ್ ತ್ಯಾಜ್ಯ ರಾಶಿ: ಪಚ್ಚನಾಡಿ ಯಾರ್ಡ್‌ಗೆ ಪ್ರತಿದಿನ ಬಂದು ಬೀಳುವ ತ್ಯಾಜ್ಯದ ಪ್ರಮಾಣ 350 ಟನ್. ಇದರಲ್ಲಿ ಸಂಸ್ಕರಣೆಗೊಳ್ಳುವುದು ಅತ್ಯಲ್ಪ ಪ್ರಮಾಣದ ತ್ಯಾಜ್ಯ ಮಾತ್ರ. ಹೀಗೆ ಯಾರ್ಡ್‌ನಲ್ಲಿ ಉಂಟಾದ ದೊಡ್ಡ ಪ್ರಮಾಣದ ತ್ಯಾಜ್ಯ ಸಂಗ್ರಹದಿಂದ ಕಳೆದ ವರ್ಷ ಭಾರಿ ದುರಂತ ಸಂಭವಿಸಿತ್ತು. 10 ಲಕ್ಷ ಟನ್‌ಗೂ ಅಧಿಕ ತ್ಯಾಜ್ಯ ಈಗ ಪಚ್ಚನಾಡಿಯಲ್ಲಿ ಗುಡ್ಡೆಯಾಗಿದ್ದು, ಅದನ್ನು ಶೀಘ್ರ ತೆರವುಗೊಳಿಸುವಂತೆ ಕೇಂದ್ರ ಪರಿಸರ ಮಂಡಳಿಯೂ ಸೂಚನೆ ನೀಡಿದೆ.
    ಕಳೆದ ಆರು ವರ್ಷದಿಂದ ಪಚ್ಚನಾಡಿಯಲ್ಲಿ ತ್ಯಾಜ್ಯ ಸಂಸ್ಕರಣೆ ಗುತ್ತಿಗೆ ವಹಿಸಿದ್ದ, ದಿಲ್ಲಿ ಮೂಲದ ಯುನಿಕ್ ವೇಸ್ಟ್ ಪ್ರೊಸೆಸಿಂಗ್‌ನ ಗುತ್ತಿಗೆ ಅವಧಿ ಮುಗಿದಿದೆ. ಹಾಗಾಗಿ ಸದ್ಯ ಪಾಲಿಕೆ ವತಿಯಿಂದಲೇ ನಿರ್ವಹಣೆ ನಡೆಯುತ್ತಿದೆ.

    ಅತ್ಯಾಧುನಿಕ ಮಾದರಿ: ಅಬೆಲಾನ್‌ನ ನೂತನ ಸಂಸ್ಕರಣಾ ಘಟಕದಲ್ಲಿ ಲಾರಿ ನೇರ ಘಟಕದ ಒಳ ಪ್ರವೇಶಿಸಿ, ಅಲ್ಲೇ ಅನ್‌ಲೋಡ್ ಮಾಡಲಿದೆ. ಘಟಕದ ಕಟ್ಟಡಕ್ಕೆ ನಾಲ್ಕು ಸುತ್ತ ಗಾಜು ಅಳವಡಿಸಲಾಗುತ್ತದೆ. ಹಾಗಾಗಿ ತ್ಯಾಜ್ಯದಿಂದ ಪ್ಲಾಸ್ಟಿಕ್ ಬೇರ್ಪಡಿಸುವಿಕೆ, ವಿದ್ಯುತ್ ಉತ್ಪಾದನೆ ಸಹಿತ ವಿವಿಧ ಹಂತಗಳನ್ನು ಹೊರಗಿನಿಂದ ವೀಕ್ಷಿಸಬಹುದು. ತ್ಯಾಜ್ಯ ನೀರನ್ನು ಅಲ್ಲೇ ಸಂಸ್ಕರಣೆ ಮಾಡಿ ಗಿಡಗಳಿಗೆ ಹಾಯಿಸುವ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂಸ್ಕರಣಾ ಘಟಕದ ಬಳಿಯೇ ಕ್ರೀಡಾಂಗಣ, ಉದ್ಯಾನವನ ನಿರ್ಮಿಸಿ ಪ್ರವಾಸಿ ತಾಣವಾಗಿಸಲು ಸಂಸ್ಥೆ ಉದ್ದೇಶಿಸಿದೆ.

    ವಿದ್ಯುತ್ ಉತ್ಪಾದನೆ: ಪಚ್ಚನಾಡಿ ಯಾರ್ಡ್ 79 ಎಕರೆ ಪ್ರದೇಶದಲ್ಲಿದೆ. ಪ್ರತಿದಿನದ ತ್ಯಾಜ್ಯದ ಜತೆ ಈಗಾಗಲೇ ರಾಶಿ ಬಿದ್ದಿರುವ 350 ಟನ್ ಹಳೇ ತ್ಯಾಜ್ಯ ಸಂಸ್ಕರಣೆಯಾಗಲಿದೆ. ಇದರಿಂದ 4-5 ವರ್ಷದಲ್ಲಿ ತ್ಯಾಜ್ಯದ ರಾಶಿ ಕಡಿಮೆಯಾಗಲಿದೆ. ಪ್ರತಿದಿನ ಸುಮಾರು 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಅಬೆಲಾನ್ ಹೊಂದಿದೆ.

    ಅತ್ಯಾಧುನಿಕ ಮಾದರಿ ತ್ಯಾಜ್ಯ ಸಂಸ್ಕರಣಾ ಘಟಕ ಮಂಗಳೂರಿಗೆ ಅವಶ್ಯವಾಗಿದೆ. ಅಬೆಲಾನ್ ಎನ್ನುವ ಸಂಸ್ಥೆ ಅಧ್ಯಯನ ನಡೆಸಿ ಯೋಜನಾ ವರದಿ ಸಲ್ಲಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ತಜ್ಞರ ಅಭಿಪ್ರಾಯ ಪಡೆದು ಅನುಮತಿ ನೀಡುವ ಬಗ್ಗೆ ನಿರ್ಧರಿಸಲಿದೆ.
    ಡಿ.ವೇದವ್ಯಾಸ ಕಾಮತ್
    ಶಾಸಕರು, ಮಂಗಳೂರು ನಗರ ದಕ್ಷಿಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts