More

    ಪಚ್ಚನಾಡಿ ಆರ್‌ಒಬಿ ಕೆಲಸಕ್ಕೆ ವೇಗ

    ಮಂಗಳೂರು: ನಿಧಾನಗತಿಯಲ್ಲಿ ಸಾಗುತ್ತಿದ್ದ ಪಚ್ಚನಾಡಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಮತ್ತೆ ವೇಗ ಸಿಕ್ಕಿದ್ದು, ಮುಂದುವರಿದ ಕಾಮಗಾರಿಯಾಗಿ ಎರಡು ಪಿಲ್ಲರ್‌ಗಳ ನಡುವೆ ಕಾಂಕ್ರೀಟ್ ಗರ್ಡರ್ ಅಳವಡಿಸಲಾಗಿದೆ. ಅದರ ಮೇಲೆ ಕಾಂಕ್ರೀಟ್ ಲೇಯರ್ ರಸ್ತೆ ನಿರ್ಮಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದೆ. ವರ್ಷಾಂತ್ಯದ ವೇಳೆ ಸೇತುವೆ ಸಿದ್ಧಗೊಂಡು ವಾಹನ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.

    ದಕ್ಷಿಣ ರೈಲ್ವೆಯ ಮಂಗಳೂರು ಜಂಕ್ಷನ್‌ನಿಂದ ಪಣಂಬೂರುವರೆಗಿನ ಹಳಿ ಡಬ್ಲಿಂಗ್ ಹಾಗೂ ವಿದ್ಯುದ್ದೀಕರಣ ಕಾಮಗಾರಿಯ ಭಾಗವಾಗಿ, ನಗರದ ಪಚ್ಚನಾಡಿಯಲ್ಲಿ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. ಆದರೆ ಇನ್ನೂ ಮುಗಿಯದಿರುವುದಕ್ಕೆ ಈಗಾಗಲೇ ಸ್ಥಳೀಯರು, ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 12ಮೀ.ಅಗಲ ಹಾಗೂ ಸುಮಾರು 25 ಮೀ.ಉದ್ದ ಸೇತುವೆ ನಿರ್ಮಾಣ ಕಾಮಗಾರಿ 2018ರಲ್ಲಿ ಆರಂಭವಾಗಿತ್ತು. ಆರಂಭಿಕ 5 ಕೋಟಿ ರೂ. ವೆಚ್ಚದ ಯೋಜನೆಯ ಮೊತ್ತ ಪ್ರಸ್ತುತ ಕೆಲವು ಕೋಟಿಗಳಷ್ಟು ಹೆಚ್ಚಾಗಿದೆ. ವರ್ಷಾಂತ್ಯದೊಳಗೆ ಕಾಮಗಾರಿ ಮುಗಿಸುವ ಉದ್ದೇಶ ರೈಲ್ವೆ ಇಲಾಖೆ ಹೊಂದಿದೆ.

    ಸೇತುವೆ ಆದ ಬಳಿಕ ಎರಡೂ ದಿಕ್ಕಿನಲ್ಲಿ ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದ್ದು, ಬೋಂದೆಲ್-ವಾಮಂಜೂರು ನಡುವಿನ ಬಾಕಿ ಇರುವ ಪಚ್ಚನಾಡಿ ಭಾಗದ ಕಾಂಕ್ರೀಟ್ ರಸ್ತೆ ಕಾಮಗಾರಿಯೂ ಪೂರ್ಣಗೊಳ್ಳಬೇಕಿದೆ. ಇದರಿಂದ ಪಿಲಿಕುಳ ಸೇರಿದಂತೆ ಮೂಡುಬಿದಿರೆ, ಕಾರ್ಕಳ, ಗುರುಪುರ, ಪೊಳಲಿ, ಭಾಗಕ್ಕೆ ಹೋಗುವವರಿಗೆ ಹೆಚ್ಚು ಅನುಕೂಲವಾಗಲಿದೆ.

    ಅನುಮತಿ ಸಿಗದೆ ವಿಳಂಬ: ಕಾಮಗಾರಿಯ ಅತ್ಯಂತ ಕ್ಲಿಷ್ಟಕರ ಕೆಲಸಗಳಲ್ಲಿ ಗರ್ಡರ್ ಅಳವಡಿಕೆ ಒಂದಾಗಿದೆ. ಕಾಮಗಾರಿ ವೇಳೆ ರೈಲು ಸಂಚಾರ ಕೆಲ ಸಮಯ ರದ್ದು ಮಾಡಬೇಕಾದ ಅನಿವಾರ್ಯತೆಯೂ ಇರುತ್ತದೆ. ಆದ್ದರಿಂದ ರೈಲ್ವೆ ಇಲಾಖೆಯ ಸೇಫ್ಟಿ ಕಮಿಷನರ್ ಭೇಟಿ ನೀಡಿ ಪರಿಶೀಲಿಸಬೇಕಾದ ಅಗತ್ಯವಿದ್ದು, ಕರೋನಾ ಮೊದಲ ಅಲೆಯ ಕಾರಣದಿಂದ ಅವರು ಬರುವುದು ವಿಳಂಬವಾಯಿತು. ಪರಿಶೀಲಿಸಿ ಅನುಮತಿ ನೀಡಿ, ಕಾಮಗಾರಿ ಆರಂಭವಾಗುತ್ತಿದ್ದಂತೆ ಮತ್ತೆ ಎರಡನೇ ಅಲೆಯ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮತ್ತೆ ಕಾಮಗಾರಿ ನಿಧಾನವಾಯಿತು ಎನ್ನುವುದು ಇಲಾಖಾ ಅಧಿಕಾರಿಗಳ ಮಾತು.

    ಗೇಟ್‌ನಿಂದ ಸಮಸ್ಯೆ: ರೈಲ್ವೆ ಮೇಲ್ಸೇತುವೆ ಪಕ್ಕದಲ್ಲೇ ಕಾಂಕ್ರೀಟ್ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್ ಕ್ರಾಸಿಂಗ್ ವ್ಯವಸ್ಥೆ ಮಾಡಿ ಗೇಟ್ ಅಳವಡಿಸಲಾಗಿದೆ. ಇದರಿಂದ ಕಳೆದ ಮೂರು ವರ್ಷದಿಂದ ಸ್ಥಳೀಯರು ಪ್ರತಿದಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ರೈಲು ಬರುವಾಗ ಒಮ್ಮೆ ಗೇಟ್ ಹಾಕಿದರೆ ತೆರೆಯಲು ಕನಿಷ್ಠ 15-20 ನಿಮಿಷ ತಗಲುತ್ತದೆ. ಪರಿಣಾಮ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ತುರ್ತು ಸಂಚಾರ ವಾಹನಗಳಿಗೆ ಸಮಸ್ಯೆಯಾಗುತ್ತಿದ್ದು, ಜತೆಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ಬಸ್‌ಗಳು ಟ್ರಿಪ್ ಕಟ್ ಮಾಡುತ್ತಿವೆ. ಶೀಘ್ರ ಸೇತುವೆ ನಿರ್ಮಿಸಿ ಎನ್ನುವ ಬೇಡಿಕೆ ಸ್ಥಳೀಯರದ್ದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts