More

    ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಲೈನ್ ; ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ರಾಜ್‌ಕುಮಾರ್ ನೆರವು

    ಚನ್ನಪಟ್ಟಣ : ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧ ವರ್ಣಿಸಲು ಅಸಾಧ್ಯ. ಇತ್ತೀಚಿನ ದಿನಗಳಲ್ಲಿ ಈ ಇಬ್ಬರ ನಡುವಿನ ಸಂಬಂಧ ಹಳಸಿದ ಸುದ್ದಿಗಳೇ ಹೆಚ್ಚು. ಆದರೆ, ಚನ್ನಪಟ್ಟಣದ ಸರ್ಕಾರಿ ವೈದ್ಯರೊಬ್ಬರು ಮಾದರಿ ಕೆಲಸ ಮಾಡುವ ಮೂಲಕ ವೈದ್ಯೋ ನಾರಾಯಣೋ ಹರಿಃ ಎಂಬ ಮಾತನ್ನು ಸಾಬೀತು ಮಾಡಿದ್ದಾರೆ.

    ಸರ್ಕಾರಿ ಆಸ್ಪತ್ರೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಅದೊಂದು ಕಾಟಾಚಾರಕ್ಕೆ ವೈದ್ಯಕೀಯ ಸೇವೆ ನೀಡುವ ಸ್ಥಳ. ಅಲ್ಲಿನ ವೈದ್ಯರು ರೋಗಿಗಳನ್ನು ನಿರ್ಲಕ್ಷಿಸುತ್ತಾರೆ, ಅವರಿಗೆ ಸಾರ್ವಜನಿಕರ ಆರೋಗ್ಯದ ಕಾಳಜಿ ಇಲ್ಲ.., ಸೇವೆಗಿಂತ ಹಣಕ್ಕೆ ಪ್ರಾಧಾನ್ಯತೆ…. ಹೀಗೆ ಇತ್ಯಾದಿ ಆರೋಪಗಳಿವೆ. ಆದರೆ, ಇಂತಹ ಆಪಾದನೆಗಳನ್ನು ಸುಳ್ಳು ಮಾಡುವಂತೆ ಇಲ್ಲೊಬ್ಬ ಸರ್ಕಾರಿ ವೈದ್ಯ ತಾನು ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆಯಲ್ಲಿ ಸ್ವಂತ ಖರ್ಚಿನಿಂದ ಆಕ್ಸಿಜನ್ ಲೈನ್ ಅಳವಡಿಸುವ ಮೂಲಕ ಬೇಷ್ ಎನಿಸಿಕೊಂಡಿದ್ದಾರೆ.

    ಹೌದು.., ನಗರದ ಸಾರ್ವಜನಿಕ ಆಸ್ಪತ್ರೆ ಮೂಳೆತಜ್ಞ ಡಾ.ರಾಜ್‌ಕುಮಾರ್ ಅವರು ವಾಯು ಸಂಜೀವಿನಿ ಎಂಬ ಹೆಸರಿನಲ್ಲಿ 1.96 ಲಕ್ಷ ರೂ. ಖರ್ಚುಮಾಡಿ ಆಸ್ಪತ್ರೆ ತುರ್ತು ಚಿಕಿತ್ಸಾ ವಿಭಾಗಕ್ಕೆ ಅನುಕೂಲವಾಗುವಂತೆ 16 ಆಕ್ಸಿಜನ್ ಪೈಪ್‌ಲೈನ್‌ಗಳನ್ನು ಅಳವಡಿಸಿದ್ದಾರೆ. ಇವರ ಈ ಕಾರ್ಯ ಕೋವಿಡ್ ರೋಗಿಗಳಿಗೆ ಸಹಕಾರಿಯಾಗಿದೆ.

    ನಗರದ ಸಾರ್ವಜನಿಕ ಆಸ್ಪತ್ರೆ 100 ಹಾಸಿಗೆಗಳ ಸೌಲಭ್ಯ ಹೊಂದಿದ್ದು, ಇದರಲ್ಲಿ 50 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಈ ಫೈಕಿ 30 ಹಾಸಿಗೆಗಳಿಗೆ ಆಕ್ಸಿಜನ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಒಳರೋಗಿಗಳಾಗಿ ದಾಖಲಾಗದವರಿಗೆ, ತುರ್ತಾಗಿ ಆಕ್ಸಿಜನ್ ಸಮಸ್ಯೆ ಎದುರಿಸುವವರು ಹಾಗೂ ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ರೋಗಿಗಳಿಗೆ ಆಕ್ಸಿಜನ್ ಅವಶ್ಯಕತೆ ಇದ್ದಲ್ಲಿ ಆಕ್ಸಿಜನ್ ಕೊಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆ ಅರಿತ ಡಾ. ರಾಜ್‌ಕುಮಾರ್, ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ತುರ್ತು ಚಿಕಿತ್ಸಾ ವಿಭಾಗದಲ್ಲಿ 9, ಸಾರ್ವಜನಿಕ ಆಸ್ಪತ್ರೆ ಹೊರಾಂಗಣದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಫೀವರ್ ಕ್ಲಿನಿಕ್ ಮತ್ತು ಕೋವಿಡ್ ಪರೀಕ್ಷಾ ಕೇಂದ್ರದ ಬಳಿ 7 ಆಕ್ಸಿಜನ್ ಪಾಯಿಂಟ್‌ಗಳನ್ನು ಅಳವಡಿಸುವ ಮೂಲಕ ರೋಗಿಗಳಿಗೆ ನೆರವಾಗಿದ್ದಾರೆ.

    ವೈದ್ಯರ ಈ ಮಾದರಿ ಕೆಲಸಕ್ಕೆ ಅವರ ಸಹೋದರ ಶ್ರೀನಿವಾಸ್ ಎಂಬುವವರು ಸಹ ಕೈಜೋಡಿಸಿದ್ದು, ಸ್ವಂತ ಹಣದಲ್ಲಿ ಆಕ್ಸಿಜನ್ ಲೈನ್ ಅಳವಡಿಸುವ ಮೂಲಕ ವಾಯುಸಂಜೀವಿನಿ ಯೋಜನೆಯನ್ನು ನಿರ್ಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರ ಆಸ್ಪತ್ರೆಗಳಿಗೂ ಈ ಯೋಜನೆಯನ್ನು ವಿಸ್ತರಿಸುವ ಉದ್ದೇಶವನ್ನು ಡಾ.ರಾಜ್‌ಕುಮಾರ್ ಹೊಂದಿದ್ದಾರೆ. ಡಾ. ರಾಜ್‌ಕುಮಾರ್ ಮಾದರಿ ಕಾರ್ಯಕ್ಕೆ ಬೊಂಬೆನಾಡಿನ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

    ತುರ್ತಾಗಿ ಪ್ರಾಣ ವಾಯುವಿಗೆ ಅನುಕೂಲ : ಸಾರ್ವಜನಿಕ ಆಸ್ಪತ್ರೆಗೆ ಬರುವ ಕೆಲ ಕರೊನಾ ಸೋಂಕಿತರನ್ನು ರಾಮನಗರದ ಕಂದಾಯ ಭವನದಲ್ಲಿ ಸ್ಥಾಪಿಸಿರುವ ಕೋವಿಡ್ ಆಸ್ಪತ್ರೆ ಅಥವಾ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿಗೆ ಹೆಚ್ಚುವರಿ ಚಿಕಿತ್ಸೆಗಾಗಿ ಕಳಿಸಿಕೊಡಲಾಗುತ್ತದೆ. ಅಲ್ಲಿಯವರೆಗೆ ಆಕ್ಸಿಜನ್ ನೀಡಲು ಅವಕಾಶ ಇಲ್ಲದ ಕಾರಣ ಸಾಕಷ್ಟು ಸಮಸ್ಯೆಯಾಗುತ್ತಿತ್ತು. ಇದೀಗ ಹೆಚ್ಚುವರಿಯಾಗಿ 16 ಆಕ್ಸಿಜನ್ ಪಾಯಿಂಟ್‌ಗಳನ್ನು ಅಳವಡಿಸಿರುವುದರಿಂದ ರೋಗಿಗಳಿಗೆ ತುರ್ತು ಪ್ರಾಣವಾಯು ನೀಡಲು ಸಹಕಾರಿಯಾಗಲಿದೆ. ಅಲ್ಲದೆ ಕೋವಿಡ್ ಕೇರ್ ಸೆಂಟರ್ ಭರ್ತಿಯಾದರೂ, ತುರ್ತಾಗಿ ಈ ಸ್ಥಳದಲ್ಲಿ ರೋಗಿಗಳಿಗೆ ತಾತ್ಕಾಲಿಕ ಪ್ರಾಣವಾಯು ನೀಡಲು ಸಾಧ್ಯವಾಗಲಿದೆ.

    ಹಲವು ವರ್ಷಗಳಿಂದ ಈ ಆಸ್ಪತ್ರೆಯಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಹಲವು ರೋಗಿಗಳ ಪರಿಚಯ ಇದೆ. ಕರೊನಾ ವೈರಸ್ ವೈದ್ಯಕೀಯ ಲೋಕಕ್ಕೆ ಒಡ್ಡಿರುವ ಸವಾಲು ಅಷ್ಟಿಷ್ಟಲ್ಲ. ಆಸ್ಪತ್ರೆಯಲ್ಲಿ ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆಯಿದೆ. ಆದರೆ, ತುರ್ತಾಗಿ ಅವಶ್ಯಕತೆ ಇರುವವರಿಗೆ ಈ ಆಕ್ಸಿಜನ್ ಲೈನ್ ಸಹಕಾರಿಯಾಗಲಿದೆ. ವೈದ್ಯನಾಗಿ ನನಗೂ ಒಂದಿಷ್ಟು ಸಾಮಾಜಿಕ ಜವಾಬ್ದಾರಿ ಇದೆ. ನನ್ನ ಜನರ ಆರೋಗ್ಯದ ಬಗ್ಗೆ ಕಾಳಜಿಯಿದೆ. ಈ ಕಾರಣದಿಂದ ಸಹೋದರನ ಸಹಕಾರದಿಂದ ವಾಯುಸಂಜೀವಿನಿ ಎಂಬ ಹೆಸರಿನಲ್ಲಿ ಆಕ್ಸಿಜನ್ ಪಾಯಿಂಟ್‌ಗಳನ್ನು ಅಳವಡಿಸಿದ್ದೇನೆ. ಸರ್ಕಾರವೇ ಎಲ್ಲವನ್ನು ಮಾಡಬೇಕು ಎಂಬ ಭಾವನೆ ಇರಬಾರದು. ಈ ತುರ್ತು ಪರಿಸ್ಥಿತಿಯಲ್ಲಿ ಎಲ್ಲರೂ ಸಾಥ್ ನೀಡಬೇಕು.
    ಡಾ.ರಾಜ್‌ಕುಮಾರ್ ಮೂಳೆತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts