More

    ಜಿಪಂ ಅಧ್ಯಕ್ಷೆ ಪದಚ್ಯುತಿಗೆ ಕಸರತ್ತು?

    ಜಿಪಂ ಅಧ್ಯಕ್ಷೆ ಪದಚ್ಯುತಿಗೆ ಕಸರತ್ತು?

    ಚಿಕ್ಕಮಗಳೂರು: ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರನ್ನು ಅವಧಿಗೆ ಮುನ್ನವೇ ಅಧಿಕಾರದಿಂದ ಕೆಳಗಿಳಿಸಲು ಸ್ವಪಕ್ಷೀಯರೇ ತೆರೆಮರೆಯ ಕಸರತ್ತು ನಡೆಸುತ್ತಿರುವುದು ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ತರೀಕೆರೆ ತಾಲೂಕು ಲಕ್ಕವಳ್ಳಿ ಕ್ಷೇತ್ರದ ಬಿ.ಎಸ್.ಚೈತ್ರಶ್ರೀ ಮಾಲತೇಶ್ ಹಾಗೂ ಕೊಪ್ಪ ತಾಲೂಕು ಜಯಪುರ ಕ್ಷೇತ್ರದ ಸುಜಾತಾ ಕೃಷ್ಣಪ್ಪ ಮಾತ್ರ ಅರ್ಹರಿದ್ದರು. ಇಬ್ಬರಿಗೆ ಅಧಿಕಾರ ಹಂಚಿಕೆಯಾಗುವ ತೀರ್ವನವಾಗಿತ್ತು. ಅದರಂತೆ ಮೊದಲು ಅಧ್ಯಕ್ಷ ಸ್ಥಾನ ಅಲಂಕರಿಸುವವರು ಎರಡು ವರ್ಷ ಹಾಗೂ ಮಿಕ್ಕ ಅವಧಿಯನ್ನು ಇನ್ನೊಬ್ಬರಿಗೆ ಬಿಟ್ಟುಕೊಡಬೇಕೆಂದು ಪಕ್ಷ ತಾಕೀತು ಮಾಡಿತ್ತು.

    ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ರ್ಚಚಿಸಿ ಆಂತರಿಕ ಒಡಂಬಡಿಕೆ ಮಾಡಿಕೊಂಡಂತೆ ಮೊದಲಿಗೆ ಅಧ್ಯಕ್ಷರಾದ ಚೈತ್ರಶ್ರೀ ತಮ್ಮ ಅವಧಿ ಮುಗಿದ ತಕ್ಷಣ ರಾಜೀನಾಮೆ ನೀಡಬೇಕಿತ್ತು. ಆದರೆ ರಾಜೀನಾಮೆ ನೀಡದೆ ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ವಿವಾದ ಅಂದು ರಾಜ್ಯಾಧ್ಯಕ್ಷರಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರನ್ನು ತಲುಪಿತ್ತು. ಹಾಗಾಗಿ ಚೈತ್ರಶ್ರೀ ಅವರನ್ನು ಅಮಾನತುಗೊಳಿಸಿ ಶಿಸ್ತುಕ್ರಮ ಕೈಗೊಳ್ಳಲಾಗಿತ್ತು. ಈ ಬೆಳವಣಿಗೆ ಬಳಿಕ ಉಳಿದ ಪೂರ್ಣಾವಧಿಗೆ ಸುಜಾತಾ ಕೃಷ್ಣಪ್ಪ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

    ಇದೀಗ ಜಿಪಂ ಅವಧಿ ಜತೆಗೆ ಅಧ್ಯಕ್ಷರ ಅವಧಿ ಪೂರ್ಣಗೊಳ್ಳಲು ಒಂಬತ್ತು ತಿಂಗಳು ಬಾಕಿ ಇರುವಾಗಲೇ ಸುಜಾತಾ ಕೃಷ್ಣಪ್ಪ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ. ಮತ್ತೆ ಚೈತ್ರಶ್ರೀ ಅವರಿಗೆ ಅವಕಾಶ ಕಲ್ಪಿಸಲು ಪಕ್ಷದ ಹಿರಿಯ ಮುಖಂಡರೇ ಮುಂದಾಗಿದ್ದಾರೆ ಎನ್ನಲಾಗಿದೆ.

    ರಾಜೀನಾಮೆಗೆ ಮೌಖಿಕ ಆದೇಶ?: ಪಕ್ಷದ ಜಿಲ್ಲಾ ವರಿಷ್ಠರು ಸುಜಾತಾ ಕೃಷ್ಣಪ್ಪ ಅವರಿಗೆ ರಾಜೀನಾಮೆ ನೀಡುವಂತೆ ಈಗಾಗಲೇ ಮೌಖಿಕವಾಗಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆದಿರುವ ಒಂದಷ್ಟು ಕಾರ್ಯಕರ್ತರು ಯಾವುದೇ ಗುರುತರ ಕಾರಣಗಳಿಲ್ಲದೆ ಸುಜಾತಾ ಕೃಷ್ಣಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದು, ಸಚಿವರು ಸಹ ಅವರ ಪದಚ್ಯುತಿಗೆ ಒಲವು ವ್ಯಕ್ತಪಡಿಸಿಲ್ಲ ಎಂದು ಗೊತ್ತಾಗಿದೆ.

    ಕಾರಣವಿಲ್ಲದೆ ಪದಚ್ಯುತಿ ಏಕೆ?: ಜಿಪಂನಲ್ಲಿ ಸುಜಾತಾ ಕೃಷ್ಣಪ್ಪ ಅಧಿಕಾರ ವಹಿಸಿಕೊಂಡ ದಿನದಿಂದಲೂ ಭ್ರಷ್ಟಾಚಾರ ರಹಿತ, ಗೊಂದಲಗಳಿಗೆ ಆಸ್ಪದ ಇಲ್ಲದಂತೆ ಉತ್ತಮ ಆಡಳಿತ ನಡೆಸಿಕೊಂಡು ಬಂದಿದ್ದಾರೆ. ಸಕಾರಣವಿಲ್ಲದೆ ಅವರನ್ನು ಪದಚ್ಯುತಿಗೊಳಿಸುವ ಔಚಿತ್ಯವೇನು ಎಂಬ ಪ್ರಶ್ನೆ ಎದ್ದಿದೆ. ಅವರ ರಾಜೀನಾಮೆ ಬಳಿಕ ಅಧ್ಯಕ್ಷ ಹುದ್ದೆ ನೀಡಲು ಪಕ್ಷದ ಹೊಸ ಸದಸ್ಯರು ಇಲ್ಲದಿರುವಾಗ ಇಂತಹ ಪ್ರಯತ್ನ ಅಗತ್ಯವಿದೆಯೇ ಎಂದು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪಕ್ಷದ ಕೋರ್ ಕಮಿಟಿ ತೀರ್ವನದ ವಿರುದ್ಧವೇ ಚೈತ್ರಶ್ರೀ ತಿರುಗಿ ಬಿದ್ದಿದ್ದರೆಂಬ ಕಾರಣಕ್ಕಾಗಿಯೇ ಅವರು ಪಕ್ಷದ ಶಿಸ್ತುಕ್ರಮಕ್ಕೆ ಒಳಗಾಗಿರುವಾಗ ಮತ್ತೆ ಅವರನ್ನೇ ಅಧಿಕಾರಕ್ಕೆ ತರುವ ಪ್ರಯತ್ನ ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಉಂಟುಮಾಡುವ ಪ್ರಯತ್ನ ಎನ್ನುವ ಟೀಕೆಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಅಷ್ಟಕ್ಕೂ ಪಕ್ಷದ ಜಿಪಂ ಸದಸ್ಯರಲ್ಲಿ ಶೇ.80ಕ್ಕೂ ಹೆಚ್ಚು ಸದಸ್ಯರು ಅಧ್ಯಕ್ಷರ ಬದಲಾವಣೆಗೆ ವಿರೋಧಿಸಿದ್ದಾರೆ ಎಂದು ಗೊತ್ತಾಗಿದೆ.

    ಅಮಾನತು ಆದೇಶವನ್ನೇ ಹಿಂಪಡೆದಿಲ್ಲ: ಅಧ್ಯಕ್ಷರ ಸ್ವಕ್ಷೇತ್ರದ ಪ್ರಮುಖ ಮುಖಂಡರೇ ಸುಜಾತಾ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರಯತ್ನಿಸುತ್ತಿದ್ದು, ಅದಕ್ಕೆ ತರೀಕೆರೆ ಕ್ಷೇತ್ರದ ಪ್ರಭಾವಿ ಮುಖಂಡರ ಬೆಂಬಲವೂ ಇದೆ. ಈ ನಡುವೆ ಚೈತ್ರಶ್ರೀ ಅಮಾನತು ಆದೇಶವನ್ನೇ ಪಕ್ಷ ಹಿಂಪಡೆಯದಿರುವಾಗ ಮತ್ತೆ ಅವರಿಗೆ ಅಧಿಕಾರ ನೀಡುವ ಚಿಂತನೆ ಮಾಡಿದ್ದಾದರೂ ಏಕೆ ಎಂಬ ಪ್ರಶ್ನೆ ಜತೆಯಲ್ಲೇ ಮತ್ತೆ ಅಧಿಕಾರ ನೀಡಲು ಅಮಾನತು ಹಿಂಪಡೆಯದಿರುವ ತಾಂತ್ರಿಕ ತೊಡಕು ಎದುರಾಗಲಿದೆ. ಅಂಥ ಪರಿಸ್ಥಿತಿ ಎದುರಾದಲ್ಲಿ ಪಕ್ಷದ ವರಿಷ್ಠರ ಮನವೊಲಿಸುವ ನಿರ್ಧಾರಕ್ಕೂ ಈ ಮುಖಂಡರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

    ತಕ್ಷಣಕ್ಕೆ ಈ ಪ್ರಯತ್ನ ಸಫಲವಾಗದಿದ್ದಲ್ಲಿ ಹಾಲಿ ಉಪಾಧ್ಯಕ್ಷರನ್ನೇ ಪ್ರಭಾರ ಅಧ್ಯಕ್ಷರನ್ನಾಗಿ ನೇಮಿಸಿ ಅವರ ಅಧ್ಯಕ್ಷತೆಯಲ್ಲೇ ಜಿಪಂ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಬಹುದು. ಆ ವೇಳೆಗಾಗಲೇ ಮೂರ್ನಾಲ್ಕು ತಿಂಗಳು ಕಳೆಯಲಿದ್ದು, ಸಿಗುವ ಕಾಲಾವಕಾಶದ ಲಾಭ ಪಡೆದು ಚೈತ್ರಶ್ರಿ ಅಮಾನತು ಆದೇಶ ರದ್ದುಪಡಿಸಬಹುದು ಎನ್ನುವ ಲೆಕ್ಕಾಚಾರವೂ ನಡೆದಿದೆ ಎನ್ನಲಾಗಿದೆ.

    ಸ್ವಕ್ಷೇತ್ರದಿಂದ ಮುಖಂಡರಿಗೆ ಮನವಿ: ಈ ಸೂಕ್ಷ್ಮ ಪರಿಸ್ಥಿತಿ ಅರಿತ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ಅವರ ಸಮುದಾಯದ ಪ್ರಮುಖರು ಪಕ್ಷದ ಮುಖಂಡರನ್ನು ಭೇಟಿ ಮಾಡಿ ಕಾರಣವಿಲ್ಲದೆ ಅಧ್ಯಕ್ಷರನ್ನು ಕೆಳಗಿಳಿಸಬಾರದು ಎಂದು ಮನವಿ ಮಾಡಿದ್ದಾರೆ. ಈ ನಡುವೆ ಕೆಲ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ರ್ಚಚಿಸಿದ್ದು, ಲಿಖಿತ ಮನವಿ ಸಲ್ಲಿಸಿ ಅವಧಿ ಪೂರ್ಣಗೊಳ್ಳುವವರೆಗೆ ಅಧ್ಯಕ್ಷರ ಬದಲಾವಣೆ ಮಾಡಬಾರದೆಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

    ರಾಜಕೀಯದ ಅನುಭವವೇ ಇಲ್ಲದಿದ್ದ ನನ್ನನ್ನು ಪಕ್ಷವೇ ಗುರುತಿಸಿ ಅವಕಾಶ ಕಲ್ಪಿಸಿ ಸ್ಥಾನಮಾನ ನೀಡಿದೆ. ಜಿಪಂ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಪಕ್ಷದಲ್ಲಿ ಆಂತರಿಕವಾಗಿ ಬೆಳವಣಿಗೆಯಾಗಿದೆ ಎನ್ನುವ ವಿಚಾರವೇ ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾನು ಬದ್ಧ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ವಿಜಯವಾಣಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts