More

    ಉಕ್ಕಿಹರಿದ ಬಳ್ಳಾರಿ ನಾಲಾ, ಹಲವೆಡೆ ಸಂಚಾರ ದುಸ್ತರ

    ಬೆಳಗಾವಿ: ಕುಂದಾನಗರಿಯಲ್ಲಿ ಮಳೆ ಆರ್ಭಟ ಶುಕ್ರವಾರ ಕೊಂಚ ತಗ್ಗಿದ್ದರೂ, ಬಳ್ಳಾರಿ ನಾಲಾ ನೀರು ಉಕ್ಕಿ ಹರಿದು ಸಮಸ್ಯೆ ಉಂಟಾಗಿದೆ. ಸುರಿಯುತ್ತಿದ್ದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ನಗರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಪ್ರಮುಖ ರಸ್ತೆಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಂಚಾರ ಮತ್ತಷ್ಟು ದುಸ್ತರವಾಗಿತ್ತು.

    ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮಾರ್ಕಂಡೇಯ ನದಿ ತುಂಬಿ ಹರಿಯುತ್ತಿದೆ. ಇಂದರಿಂದಾಗಿ ತಾಲೂಕಿನ ಅಂಬೇವಾಡಿ, ಹಿಂಡಲಗಾ ಹಾಗೂ ಮನ್ನೂರು ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳ ರಸ್ತೆ ಮುಳುಗಿದ್ದು, ಸಂಪರ್ಕ ಕಡಿತಗೊಂಡಿದೆ.

    ಸೆಲ್ಫಿ ಗೀಳು: ರಸ್ತೆ ಮುಳುಗಡೆಯಾಗಿ ಅಪಾಯದ ಮಟ್ಟದಲ್ಲಿ ನದಿ ನೀರು ಹರಿಯುತ್ತಿದ್ದರೂ ಅಂಬೇವಾಡಿ ಗ್ರಾಮಸ್ಥರು, ಯುವಕರು ಭಯವಿಲ್ಲದೆ ಮಕ್ಕಳೊಂದಿಗೆ ತೆರಳಿ ಸೆಲ್ಫಿ ತೆಗೆದುಕೊಳ್ಳುತ್ತ ಮೋಜಿನಲ್ಲಿ ತೊಡಗಿದ್ದರು. ಇನ್ನೂ ಕೆಲವರು ಜೀವಾಪಾಯ ಸಾಧ್ಯತೆ ಇದ್ದರೂ ಹರಸಾಹಸ ಪಟ್ಟು ರಸ್ತೆ ದಾಟಿ ಮನೆ ಸೇರುತ್ತಿದ್ದರು.

    ಬೆಳೆ ಜಲಾವೃತ: ಕುಂದಾನಗರಿಯಲ್ಲಿ ವರುಣಾರ್ಭಟದಿಂದ ಬಳ್ಳಾರಿ ನಾಲಾ ತುಂಬಿ ಹರಿಯುತ್ತಿದೆ. ಅಲ್ಲದೆ, ನಾಲಾ ಸುತ್ತಮುತ್ತಲಿನ ಹಾಗೂ ವೀರಭದ್ರೇಶ್ವರ ದೇವಸ್ಥಾನ ಸಮೀಪದ ಬಡಾವಣೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡು ಕತ್ತಲೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ತಾಲೂಕಿನ ಕೃಷಿ ಜಮೀನುಗಳಿಗೆ ಬಳ್ಳಾರಿ ನಾಲಾದ ನೀರು ನುಗ್ಗಿದ್ದು, ಬೆಳೆಗಳು ಜಲಾವೃತಗೊಂಡಿವೆ. ಅಲ್ಲದೆ, ಬೆಳಗಾವಿ ತಾಲೂಕಿನ 16ಕ್ಕೂ ಅಧಿಕ ಗ್ರಾಮಗಳ ಸುತ್ತಮುತ್ತ ನೀರು ನಿಂತಿದೆ. ಇದರಿಂದ ಜನಸಂಚಾರಕ್ಕೆ ಕಷ್ಟವಾಗಿದೆ. ವರುಣನ ಅಬ್ಬರ ಇದೇ ರೀತಿ ಮುಂದುವರಿದಲ್ಲಿ ತಾಲೂಕಿನ 24 ಹಳ್ಳಿಗಳು ಸಂಪೂರ್ಣ ಜಲಾವೃತಗೊಳ್ಳುವ ಸಾಧ್ಯತೆಯಿದೆ ಎಂದು ಜಲಸಂಪನ್ಮೂಲ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಜಿಲ್ಲೆಯಲ್ಲಿ ಕೆಲ ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಿರಣ್ಯಕೇಶಿ ನದಿ, ಮಾರ್ಕಂಡೇಯ ನದಿ ಹಾಗೂ ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು ಘಟಪ್ರಭಾ ನದಿಯಲ್ಲಿ ಒಳಹರಿವು ಹೆಚ್ಚಾಗಿದೆ. ಇದರಿಂದ ಅಲ್ಲಲ್ಲಿ ಸೇತುವೆಗಳು ಮುಳಗಡೆಯಾಗಿವೆ. ಸದ್ಯ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಬಿಟ್ಟಿಲ್ಲ.
    | ಅರವಿಂದ ಕಣಗಲಿ ಮುಖ್ಯ ಅಭಿಯಂತ ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts