More

    ಮುಗಿಬಿದ್ದ ಮದ್ಯಪ್ರಿಯರು!

    ಬೆಳಗಾವಿ: ಜಿಲ್ಲೆಯಲ್ಲಿ 48 ದಿನಗಳ ನಂತರ ಸೋಮವಾರ ಮದ್ಯ ಮಾರಾಟ ಆರಂಭವಾಗಿದ್ದು, ಮದ್ಯಪ್ರಿಯರು ವೈನ್‌ಶಾಪ್‌ಗಳತ್ತ ಧಾವಿಸುತ್ತಿದ್ದಾರೆ. ಆದರೆ, ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡುತ್ತಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗುತ್ತಿದೆ.

    ಎಂಆರ್‌ಪಿ (ಮಿನಿಮಮ್ ರಿಟೇಲ್ ಪ್ರೈಸ್)ಕ್ಕಿಂತ ಪ್ರತಿ ಬಾಟಲ್‌ಗೆ 38ರಿಂದ 86 ರೂ. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿವೆ. ಮತ್ತೊಂದೆಡೆ ಎಂಎಸ್‌ಐಎಲ್‌ನಲ್ಲಿ ಎಂಆರ್‌ಪಿ ದರದಲ್ಲಿ ಖರೀದಿಸುವ ಮಧ್ಯವರ್ತಿಗಳು ಗ್ರಾಮೀಣ ಪ್ರದೇಶಗಳಿಗೆ ಹೋಗಿ ದುಪ್ಪಟ್ಟು ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಸುಂಕ ಕಟ್ಟುವುದು ಎಂಆರ್‌ಪಿ ದರದ ಮಾರಾಟ ಮೇಲೆ ಮಾತ್ರ. ಹಾಗಾಗಿ ಸರ್ಕಾರಕ್ಕೆ ಕೋಟ್ಯಂತರ ರೂ. ಆದಾಯ ನಷ್ಟವಾಗುತ್ತಿದೆ. ಈ ಕುರಿತು ಅಬಕಾರಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಹಕರು ಆಗ್ರಹಿಸಿದ್ದಾರೆ. ಸದ್ಯ ಬೆಳಗಾವಿ ಜಿಲ್ಲೆಯಲ್ಲಿ ಅಧಿಕೃತವಾಗಿ 225 ವೈನ್‌ಶಾಪ್, 59 ಎಂಎಸ್‌ಐಎಲ್ ಕಾರ್ಯನಿರ್ವಹಿಸುತ್ತಿವೆ. ಈ ಅಂಗಡಿಗಳಲ್ಲಿ ಒಂದೇ ದಿನಕ್ಕೆ ಲಕ್ಷಕ್ಕೂ ಅಧಿಕ ಮದ್ಯದ ಬಾಟಲ್ ಮಾರಾಟ ಆಗಿವೆ.

    ಅಂಗಡಿ ಎದುರು ಹೊಸ ಮುಖಗಳು: ಬೆಳಗಾವಿ ಜಿಲ್ಲೆಯಲ್ಲಿ ಮದ್ಯದ ಅಂಗಡಿಗಳ ಮುಂದೆ ಸೋಮವಾರ ಬೆಳಗ್ಗೆಯಿಂದಲೇ ಜನ ಸಾಲುಗಟ್ಟಿ ನಿಂತಿದ್ದರು. ನಗರ ಮತ್ತು ಪಟ್ಟಣ ಪ್ರದೇಶದಲ್ಲಿರುವ ಎಂಎಸ್‌ಎಲ್ ಮಳಿಗೆ ಮುಂದೆ ಉದ್ದ ಸಾಲಿತ್ತು. ಸರ್ಕಾರ ಒಬ್ಬ ವ್ಯಕ್ತಿಗೆ ಆರು ಬಾಟಲ್ ಮಾತ್ರ ನಿಗದಿಪಡಿಸಿದೆ. ಆದರೆ, ಅಂಗಡಿಗಳ ಎದುರು ವ್ಯಸನಿಗಳಲ್ಲದವರು ಸರತಿ ಸಾಲಿನಲ್ಲಿ ನಿಂತಿದ್ದರು. ಅವರಿಗೆ ಬ್ರಾೃಂಡ್ ಹೆಸರುಗಳೂ ಗೊತ್ತಿಲ್ಲ. ಕೈಯಲ್ಲಿ ಚೀಟಿ ಹಿಡಿದುಕೊಂಡು ಬರುತ್ತಿದ್ದಾರೆ. ಅವರೆಲ್ಲರೂ ತೆಗೆದುಕೊಂಡ ಹೋದ ಮದ್ಯವನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಮಳಿಗೆ ಸಿಬ್ಬಂದಿ ತಿಳಿಸಿದ್ದಾರೆ.

    45 ಅಂಗಡಿಗಳು ಬಂದ್: ಬೆಳಗಾವಿ ಜಿಲ್ಲೆಯಲ್ಲಿ ನಿರ್ಬಂಧಿತ ವಲಯ (ಕಂಟೇನ್‌ಮೆಂಟ್) ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ 45 ಮದ್ಯದ ಅಂಗಡಿಗಳು ಮತ್ತು 7 ಎಂಎಸ್‌ಐಎಲ್ ಮಳಿಗೆಗಳು ಬಂದ್ ಆಗಿವೆ. ಇನ್ನುಳಿದ ಪ್ರದೇಶಗಳಲ್ಲಿ ಬೆಳಗ್ಗೆ 9ರಿಂದ ರಾತ್ರಿ 7 ಗಂಟೆಯವರೆಗೆ 225 ಮದ್ಯದ ಅಂಗಡಿಗಳು ಮತ್ತು 59 ಎಂಇಎಸ್ ಎಂಎಸ್‌ಐಎಲ್ ಮಳಿಗೆಗಳು ಕಾರ್ಯನಿರ್ವಹಿಸಲಿವೆ. ಈಗಾಗಲೇ ಮದ್ಯದ ಅಂಗಡಿಗಳಲ್ಲಿ ಸ್ಟಾಕ್ ಪರಿಶೀಲನೆ ನಡೆಸಲಾಗುತ್ತಿದ್ದು, ಕೆಲವು ಕಡೆ ಸ್ಟಾಕ್‌ನಲ್ಲಿ ಏರುಪೇರು ಕಂಡಿಬಂದಲ್ಲಿ ಅಂತಹ ಅಂಗಡಿಗಳಿಗೆ ನೋಟಿಸ್ ನೀಡಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಪಟಾಕಿ ಸಿಡಿಸಿ ಸಂಭ್ರಮ: ಬೆಳಗಾವಿ ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮದ್ಯದ ಅಂಗಡಿಗಳ ನಾಮಫಲಕಕ್ಕೆ ಗ್ರಾಹಕರೇ ಹೂವಿನ ಮಾಲೆ ಹಾಕಿ ಪೂಜೆ ಸಲ್ಲಿಸಿದರು. ಗೋಕಾಕ ತಾಲೂಕಿನ ಘಟಪ್ರಭಾ ಸೇರಿ ಸುತ್ತಮುತ್ತಲಿನ ಭಾಗಗಳಲ್ಲಿ ಗ್ರಾಹಕರು ಮದ್ಯದ ಅಂಗಡಿಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಬೆಳಗಾವಿ ನಗರದ ಭಾಗ್ಯನಗರ, ಅನಗೋಳ, ವಡಗಾಂವಿ, ಶಹಾಪುರ ಭಾಗಗಳಲ್ಲಿ ಮದ್ಯದ ಅಂಗಡಿಗಳ ಮಾಲೀಕರು ಮೊದಲ ಗ್ರಾಹಕನಿಗೆ ಹೂವಿನ ಹಾರ ಹಾಕಿ ಮಾರಾಟಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.

    ಬ್ಯಾಂಕ್ ಗ್ರಾಹಕರಿಗೆ ಮುಜುಗುರ

    ಬೆಳಗಾವಿ ನಗರ ಟಿಳಕವಾಡಿಯ ಖಾನಾಪುರ ರಸ್ತೆಯಲ್ಲಿ ಒಂದೇ ಕಟ್ಟಡದಲ್ಲಿ ಬ್ಯಾಂಕ್ ಮತ್ತು ಮದ್ಯ ಅಂಗಡಿಯಿದ್ದು, ಸೋಮವಾರ ಬೆಳಗ್ಗೆಯಿಂದ ಮದ್ಯದ ಅಂಗಡಿ ಮುಂದೆ ಗ್ರಾಹಕರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು. ಪಕ್ಕದಲ್ಲಿಯೇ ಬ್ಯಾಂಕ್ ಮುಂದೆ ಗ್ರಾಹಕರು ಸರತಿಯಲ್ಲಿದ್ದರು. ಬ್ಯಾಂಕ್‌ನ ಕೆಲಸಕ್ಕೆ ಬಂದ ಕೆಲವರು ಗೊತ್ತಾಗದೆ ಮದ್ಯದ ಅಂಗಡಿಯ ಮುಂದಿನ ಸಾಲಿನಲ್ಲಿ ನಿಂತುಕೊಂಡಿದ್ದರು. ಸ್ವಲ್ಪ ಸಮಯದ ಬಳಿಕ ಗೊತ್ತಾಗಿ ಬ್ಯಾಂಕ್ ಗ್ರಾಹಕರು ಮುಜುಗುರ ಎದುರಿಸಬೇಕಾಯಿತು.

    ಸಾಮಾಜಿಕ ಅಂತರ ಮಾಯ..

    ಕರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಸರ್ಕಾರವು ಲಾಕ್‌ಡೌನ್ ಘೋಷಣೆ ಮಾಡಿತ್ತು. ಇದೀಗ ಜನರ ಸಲುವಾಗಿ ಲಾಕ್‌ಡೌನ್ ಸಡಿಲುಗೊಳಿಸಿದೆ. ಆದರೆ, ಸೋಮವಾರ ಬೆಳಗಾವಿ ನಗರದಲ್ಲಿ ಸಾರ್ವಜನಿಕರು ಮದ್ಯದ ಅಂಗಡಿಗಳು ಮತ್ತು ಎಂಎಸ್‌ಐಎಲ್ ಮಳಿಗೆಗಳ ಮುಂದೆ ಮುಗಿಬಿದ್ದರು. ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಗುಂಪು ಗುಂಪಾಗಿ ನಿಂತುಕೊಂಡಿರುವ ದೃಶ್ಯಗಳು ಕಂಡುಬಂದವು.

    ಜಿಲ್ಲೆಯಲ್ಲಿ ಕಂಟೇನ್‌ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಇನ್ನುಳಿದ ಪ್ರದೇಶಗಳಲ್ಲಿ 225 ಮದ್ಯದ ಅಂಗಡಿಗಳು ಮತು 59 ಎಂಎಸ್‌ಐಎಲ್ ಮಳಿಗೆ ಆರಂಭಿಸಲಾಗಿದೆ. ಎಂಆರ್‌ಪಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಖಚಿತವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಖುದ್ದಾಗಿ ಪರಿಶೀಲನೆ ನಡೆಸಲಾಗುವುದು.
    | ಬಸವರಾಜ ಗಂದಿಗವಾಡ ಅಬಕಾರಿ ಜಿಲ್ಲಾ ಆಯುಕ್ತ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts