More

    ಸಾರ್ವಜನಿಕ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗೆ ಆಕ್ರೋಶ

    ಶ್ರೀರಂಗಪಟ್ಟಣ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಭೇಟಿ ನೀಡಿ ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡರು.

    ರೈತ ಮುಖಂಡ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಶುಕ್ರವಾರ ಆಗಮಿಸಿದ ಕಾರ್ಯಕರ್ತರು, ತಾಲೂಕು ಆಸ್ಪತ್ರೆ ಹೊರಭಾಗದಲ್ಲಿ ಹೊರ ರೋಗಿಗಳ ವಿವರ ನೋಂದಾಯಿಸಿಕೊಂಡು ಚೀಟಿ ನೀಡಲು ಸರತಿ ಸಾಲಿನಲ್ಲಿ ಜನರನ್ನು ಕಾಯಿಸಿ ನಿಲ್ಲಿಸಿದ್ದನ್ನು ಕಂಡು ಜತೆಗೆ ಆಸ್ಪತ್ರೆಯ ಒಳಭಾಗದಲ್ಲಿ ಅಶುಚಿತ್ವ ವಾತಾವರಣ ಖಂಡಿಸಿ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದರು.

    ಬಳಿಕ ಸ್ಥಳಕ್ಕೆ ಆಗಮಿಸಿದ ಆಸ್ಪತ್ರೆ ಉಸ್ತುವಾರಿ ವೈದ್ಯೆ ಡಾ.ಚಂದ್ರಿಕಾ ಅವರೊಂದಿಗೆ ಮಾತನಾಡಿದ ಕೆ.ಎಸ್.ನಂಜುಂಡೇಗೌಡ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುವ ಹೊರರೋಗಿಗಳ ವಿವರ ಪಡೆದು ಅವರನ್ನು ತುರ್ತಾಗಿ ನೋಂದಣಿ ಚೀಟಿ ನೀಡಿ ವೈದ್ಯರ ಬಳಿಗೆ ಚಿಕಿತ್ಸೆಗೆ ಕಳುಹಿಸಿಕೊಡದೆ ಅನಗತ್ಯವಾಗಿ ವಿಳಂಬ ಮಾಡಲಾಗುತ್ತಿದೆ. ಅಂತಹ ರೋಗಿಗಳು ಆಸ್ಪತ್ರೆ ಮುಂದೆ ನಿತ್ರಾಣಗೊಂಡು ಬಳಲುತ್ತಿದ್ದಾರೆ. ಆಸ್ಪತ್ರೆಯ ಕೌಂಟರ್‌ನಲ್ಲಿ ಚೀಟಿ ನೀಡುವ ಕೆಲವರ ವರ್ತನೆಯಿಂದ ಜನರು ಹೆದರಿ ವಾಪಸ್ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.

    ಆಸ್ಪತ್ರೆಯ ಕೆಲ ವೈದ್ಯರು ರೋಗಿಗಳನ್ನು ಮೈಸೂರಿಗೆ ಹೋಗುವಂತೆ ಹೇಳಿ ಸಾಗುಹಾಕುತ್ತಿರುವ ವರ್ತನೆ ಖಂಡನೀಯ. ಆಸ್ಪತ್ರೆಯಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸರಿಯಾದ ಶೌಚಗೃಹ ವ್ಯವಸ್ಥೆ ಕಲ್ಪಿಸಿ. ಈ ಬಗ್ಗೆ ಇತ್ತೀಚೆಗೆ ತಾಲೂಕು ಆರೋಗ್ಯಾಧಿಕಾರಿಗಳನ್ನು ಭೇಟಿ ಮಾಡಿ ಅವರ ಗಮನಕ್ಕೆ ತಂದು ವ್ಯವಸ್ಥೆ ಬದಲಾಯಿಸಲು ಮನವಿ ಮಾಡಿದ್ದರೂ ನಿರ್ಲಕ್ಷೃ ವಹಿಸಿರುವುದು ಸರಿಯಲ್ಲ. ಇದು ಬದಲಾಗದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

    ವೈದ್ಯೆ ಡಾ.ಚಂದ್ರಿಕಾ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಹೊರ ರೋಗಿಗಳ ವಿವರ ಪಡೆದು ಚೀಟಿ ನೀಡಲಾಗುತ್ತಿದೆ. ನೀವು ಗಮನಕ್ಕೆ ತಂದಿರುವ ಸಮಸ್ಯೆ ಕುರಿತು ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

    ಸಮಿತಿ ಅಧ್ಯಕ್ಷ ಬಿ.ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಹನಿಯಂಬಾಡಿ ನಾಗರಾಜು, ಪ್ರಧಾನ ಕಾರ್ಯದರ್ಶಿ ಎಂ.ವಿ.ಕೃಷ್ಣ, ದರ್ಶನ್, ಖಜಾಂಚಿ ಪುಟ್ಟಮಾದು, ಸಂಚಾಲಕರಾದ ಮಂಜುನಾಥ್, ಹೊಸಹಳ್ಳಿ ಸ್ವಾಮಿ, ಶ್ರೀಧರ್, ಹೆಬ್ಬಾಡಿ ಹುಂಡಿ ಸಿದ್ದೇಗೌಡ, ಹೊಸೂರು ಶಿವರಾಜು, ಶಿವಣ್ಣ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts