More

    ಹುಬ್ಬಳ್ಳಿ ಆರ್​ಎಫ್​ಎಸ್​ಎಲ್ ಉದ್ಘಾಟನೆಗೆ ಸಜ್ಜು

    ಕೇಶವಮೂರ್ತಿ ವಿ.ಬಿ. ಹುಬ್ಬಳ್ಳಿ

    ಬೆಂಗಳೂರು ನಂತರ ಐದು ವಿಶೇಷ ಘಟಕಗಳನ್ನು ಒಳಗೊಂಡಿರುವ ಹುಬ್ಬಳ್ಳಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯ (ಆರ್​ಎಫ್​ಎಸ್​ಎಲ್) ಉದ್ಘಾಟನೆಗೆ ಸಜ್ಜಾಗಿದೆ. ಕೊಲೆ, ದರೋಡೆ, ಕಳ್ಳತನ, ಅತ್ಯಾಚಾರಗಳಂಥ ಅಪರಾಧ ಪ್ರಕರಣಗಳ ತನಿಖೆಗೆ ವೇಗ ಸಿಗಲಿದೆ. ಈಗಾಗಲೇ ಪ್ರಯೋಗಾರ್ಥ ಕಾರ್ಯ ಆರಂಭಗೊಂಡಿದೆ.

    ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದ ಬಳಿಯ ಸಾರಿಗೆ ಸಂಸ್ಥೆಗೆ ಸೇರಿದ ಕಟ್ಟಡವೊಂದನ್ನು ಪೊಲೀಸ್ ಇಲಾಖೆಯು ಆರ್​ಎಫ್​ಎಸ್​ಎಲ್ ಕಚೇರಿಯನ್ನಾಗಿ ಮಾರ್ಪಡಿಸಲಾಗಿದೆ. ಸುಸಜ್ಜಿತವಾದ ಕಟ್ಟಡದಲ್ಲಿ ಉಪನಿರ್ದೇಶಕರ ಕಚೇರಿ, ಐದು ವಿಶೇಷ ಘಟಕಗಳ ಲ್ಯಾಬ್​ಗಳು, ಸಿಬ್ಬಂದಿ, ಆಡಳಿತ ಕೊಠಡಿ, ರ್ಪಾಂಗ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

    ಹುಬ್ಬಳ್ಳಿ ಆರ್​ಎಫ್​ಎಸ್​ಎಲ್ ಡಿಎನ್​ಎ, ಭೌತಶಾಸ್ತ್ರ (ಫಿಸಿಕ್ಸ್), ಕಂಪ್ಯೂಟರ್ ಫೋರೆನ್ಸಿಕ್, ಮೊಬೈಲ್ ಫೋರೆನ್ಸಿಕ್ ಹಾಗೂ ಆಡಿಯೋ, ವಿಡಿಯೋ ಫೋರೆನ್ಸಿಕ್ ಘಟಕಗಳನ್ನು ಒಳಗೊಂಡಿದೆ. ಆರ್​ಎಫ್​ಎಸ್​ಎಲ್ ಆರಂಭದಿಂದ ಪೊಲೀಸ್ ಇಲಾಖೆಗೆ ಆನೆಬಲ ಬರಲಿದೆ. ಆರ್​ಎಫ್​ಎಸ್​ಎಲ್ ಉದ್ಘಾಟನೆಗೆ ಸಜ್ಜಾಗಿದ್ದು, ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.

    ವೈಶಿಷ್ಟ್ಯ ಏನು?: ಡಿಎನ್​ಎ ಘಟಕದ ಪ್ರಯೋಗಾಲಯದಿಂದ ಕೊಲೆ ಪ್ರಕರಣಗಳು, ತಂದೆ- ತಾಯಿ ಪತ್ತೆ, ಮಗು ಅದಲು- ಬದಲು ಪ್ರಕರಣಗಳು, ಅನಾಥ ದೇಹ ಪತ್ತೆ ಪ್ರಕರಣಗಳನ್ನು ಪತ್ತೆ ಹಚ್ಚಬಹುದು. ಭೌತಶಾಸ್ತ್ರ ಘಟಕದಲ್ಲಿ ಅಪಘಾತ, ಹಿಟ್ ಆಂಡ್ ರನ್ ಮತ್ತಿತರ ಪ್ರಕರಣಗಳನ್ನು ಪತ್ತೆ ಹಚ್ಚಬಹುದು. ಗಾಜಿನ ಚೂರು, ಬಣ್ಣ ಆಧರಿಸಿ ವಾಹನ ಗುರುತಿಸಬಹುದು. ನಕಲಿ ವಾಹನದ ಚಾಸಿ ನಂಬರ್ ಭೇದಿಸಲು ಇದು ಸಹಕಾರಿಯಾಗಲಿದೆ. ಆಡಿಯೋ, ವಿಡಿಯೋ ಫೋರೆನ್ಸಿಕ್ ಘಟಕದಲ್ಲಿ ಧ್ವನಿ ಯಾರದ್ದು ಎಂಬುದನ್ನು ಪತ್ತೆ ಹಚ್ಚಬಹುದು. ಮೊಬೈಲ್​ಫೋನ್ ಫೋರೆನ್ಸಿಕ್​ನಲ್ಲಿ ಸೈಬರ್ ಅಪರಾಧಗಳು, ವಾಟ್ಸ್ ಆಪ್, ಫೇಸ್​ಬುಕ್ ಮೂಲಕ ಕಳುಹಿಸುವ ಸಂದೇಶ, ಫೋಟೋ ಯಾರದ್ದೆಂದು ಪತ್ತೆ ಹಚ್ಚಬಹುದು.

    ಉಪನಿರ್ದೇಶಕ ಸೇರಿ 40 ಸಿಬ್ಬಂದಿ: ಆರ್​ಎಫ್​ಎಸ್​ಎಲ್​ಗೆ ಉಪ ನಿರ್ದೇಶಕ ಸೇರಿ ಒಟ್ಟು 40 ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದೆ. ಉಪನಿರ್ದೇಶಕರಾಗಿ ಡಾ. ಚಂದ್ರಶೇಖರ ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಐವರು ಸಹಾಯಕ ನಿರ್ದೇಶಕರು, ಐವರು ಹಿರಿಯ ವಿಜ್ಞಾನಿಗಳು, 10 ವಿಜ್ಞಾನಿಗಳು, 10 ಜನ ಸಹಾಯಕ ಸಿಬ್ಬಂದಿ ಸೇರಿದಿಂತೆ 40 ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts