More

    ನಮ್ಮದು ಸಂಘ ಪರಿವಾರಕ್ಕೆ ಸೇರಿದ ಕುಟುಂಬ; ನಾವೂ ಹಾಫ್​ ಚಡ್ಡಿ ಹಾಕಿದವರೇ ಎಂದ ರಮೇಶ್​ ಜಾರಕಿಹೊಳಿ

    ಬೆಳಗಾವಿ: ಮೊದಲಿನಿಂದಲೂ ನಾವು ಸಂಘ ಪರಿವಾರದವರು. ಗೋವಾ ವಿಮೋಚನಾ ಚಳವಳಿ ವೇಳೆ ನನ್ನ ತಂದೆ ಮೂರು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ.
    ನಗರದ ನಾವಗೆಯ ಗಣೇಶ ಬಾಗ್‌ನಲ್ಲಿ ಧನಂಜಯ ಮಿತ್ರ ಪರಿವಾರದಿಂದ ಭಾನುವಾರ ಆಯೋಜಿಸಿದ್ದ ಬಿಜೆಪಿ ಬೆಂಬಲಿತ ನೂತನ ಗ್ರಾಪಂ ಸದಸ್ಯರ ಅಭಿನಂದನಾ ಸಮಾರಂಭ ಹಾಗೂ ಹಿಂದು ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಮೊದಲು ಜನಸಂಘದಲ್ಲಿ ದೀಪದ ಚಿತ್ರ ಇದ್ದ ಕರಿ ಬಣ್ಣದ ಟೋಪಿ ಮತ್ತು ಹಾಫ್ ಚಡ್ಡಿ ಹಾಕುತ್ತಿದ್ದೆವು. ನಮ್ಮ ಕುಟುಂಬದ ರಾಜಕೀಯ ಉದಯವಾಗಿದ್ದು ಜನಸಂಘದಿಂದ. ಕಾಲ ಬದಲಾದಂತೆ ಅನಿವಾರ್ಯವಾಗಿ ಕಾಂಗ್ರೆಸ್‌ಗೆ ಹೋಗಬೇಕಾಯಿತು. ನನ್ನ ತಂದೆಯವರು ಗೋವಾ ವಿಮೋಚನೆಗಾಗಿ ಹೋರಾಟ ಮಾಡಿದ ಜಗನ್ನಾಥ ಜೋಶಿ ಅವರ ಅನುಯಾಯಿಯಾಗಿದ್ದರು ಎಂದು ಹೇಳಿದರು. ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಮಾಜಿ ಶಾಸಕ ಸಂಜಯ ಪಾಟೀಲ ಇತರಿದ್ದರು.

    ದೇವರ ಮೇಲೆ ಆಣೆ ಮಾಡಬೇಕು: ಜ. 17ರಂದು ಬೆಳಗಾವಿಯಲ್ಲಿ ಜರುಗಲಿರುವ ಜನಸೇವಕ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಪಾಲ್ಗೊಳ್ಳಲಿದ್ದಾರೆ. 3-4 ಲಕ್ಷ ಜನ ಸೇರಿಸುವ ಸಂಕಲ್ಪ ಮಾಡಿದ್ದೇವೆ. ಹೀಗಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರವೊಂದರಿಂದಲೇ ಒಂದು ಲಕ್ಷ ಜನ ಸೇರಬೇಕು. ನಿಮಗೇನು ಸಹಾಯಬೇಕೋ ಅದರ ವ್ಯವಸ್ಥೆ ಮಾಡುತ್ತೇನೆ ಎಂದರು. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಹಳ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಪರವಾಗಿಯೇ ಕೆಲಸ ಮಾಡಬೇಕು. ಆಕಾಂಕ್ಷಿಗಳಾರೂ ದ್ರೋಹ ಮಾಡುವುದಿಲ್ಲ ಎಂದು ಮಹಾರಾಷ್ಟ್ರದ ಜ್ಯೋತಿಬಾ ದೇವರ ಪಾದ ಮುಟ್ಟಿ ಆಣೆ ಮಾಡಬೇಕು. ಒಟ್ಟಿನಲ್ಲಿ 2023ರಲ್ಲಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸಲೇಬೇಕು ಎಂದು ರಮೇಶ ಜಾರಕಿಹೊಳಿ ಹೇಳಿದರು.

    ದೆಹಲಿಯಲ್ಲಿ ನನ್ನ ಜೊತೆ ಟೀ ಕುಡಿದಿದ್ದ: ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಮೇಶ ಜಾರಕಿಹೊಳಿ, ವಂಚನೆ ಪ್ರಕರಣದಲ್ಲಿ ಸದ್ಯ ತನಿಖೆ ಎದುರಿಸುತ್ತಿರುವ ಯುವರಾಜ ಸ್ವಾಮಿ ಒಂದೆರಡು ಬಾರಿ ನನಗೂ ದೆಹಲಿಯಲ್ಲಿ ಭೇಟಿಯಾಗಿದ್ದನು. ದೆಹಲಿಯಲ್ಲಿ ನನ್ನ ಜತೆ ಟೀ ಕುಡಿದಿದ್ದಾನೆ. ಆದರೆ, ನಾನು ಅವನ ಜತೆ ೆಟೋ ತೆಗೆಸಿಕೊಂಡಿಲ್ಲ. ಅದರೆ, ಫೋಟೋ ತೆಗೆಸಿಕೊಂಡವರನ್ನು ಮಾಧ್ಯಮದವರು ತಪ್ಪಿತಸ್ಥರಂತೆ ಬಿಂಬಿಸಬೇಡಿ. ಉನ್ನತ ಸ್ಥಾನದಲ್ಲಿದ್ದಾಗ ಫೋಟೋ ತೆಗೆಸಿಕೊಳ್ಳಲು ಬರುವುದು ಸಹಜ ಎಂದು ರಮೇಶ ಹೇಳಿದರು.

    ಹೆಬ್ಬಾಳ್ಕರ್ ಯಾರೆಂದೇ ಗೊತ್ತಿಲ್ಲ

    ಬಿಜೆಪಿಯವರಿಗೆ ಸುಳ್ಳು ಹೇಳುವ ಸಂಸ್ಕೃತಿ ಇದೆ. ಬಿಜೆಪಿ ನಾಯಕರು ಸುಳ್ಳು ಹೇಳುತ್ತಿದ್ದಾರೆ ಎಂಬ ಶಾಸಕಿ ಹೆಬ್ಬಾಳ್ಕರ್ ಆರೋಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನನಗೆ ಲಕ್ಷ್ಮೀ ಹೆಬ್ಬಾಳ್ಕರ್ ಯಾರೆಂಬುದೇ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.

    ಗೋಕಾಕ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರ ನನ್ನ ಎರಡು ಕಣ್ಣುಗಳಿದ್ದಂತೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ನಿಶ್ಚಿತ. ಅತಿ ಹೆಚ್ಚು ಮತ ಪಡೆಯುವತ್ತ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು.
    | ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts