More

    ಯಥಾಸ್ಥಿತಿಯಲ್ಲಿ ಆಸ್ಕರ್ ಆರೋಗ್ಯ: ಇಂದು ಡಯಾಲಿಸಿಸ್ ಮಾಡಲು ವೈದ್ಯರ ನಿರ್ಧಾರ

    ಮಂಗಳೂರು: ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಶನಿವಾರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿತ್ತು. ಭಾನುವಾರವೂ ಇದೇ ಸ್ಥಿತಿ ಮುಂದುವರಿದಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

    ಯೋಗ ಮಾಡುತ್ತಿದ್ದ ವೇಳೆ ಬಿದ್ದು ತಲೆಗೆ ಏಟಾಗಿ ಆಸ್ಕರ್ ಪ್ರಜ್ಞಾಹೀನರಾಗಿ ಒಂದು ವಾರ ಕಳೆದಿದೆ. ಆರಂಭದಲ್ಲಿ ಕೊಂಚ ಗಂಭೀರ ಸ್ಥಿತಿ ಇದ್ದರೂ ಇದೀಗ ಅವರು ಕೈ-ಕಾಲಿನ ಚಲನೆ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದು, ಚಿಕಿತ್ಸೆಗೆ ನಿಧಾನವಾಗಿ ಸ್ಪಂದಿಸುತ್ತಿದ್ದಾರೆ. ಸೋಮವಾರ ಡಯಾಲಿಸಿಸ್ ಮಾಡಲು ವೈದ್ಯರು ನಿರ್ಧರಿಸಿದ್ದಾರೆ. ಪ್ರಜ್ಞೆ ಬಾರದೆ ಇರುವುದರಿಂದ ಆಸ್ಕರ್ ತಲೆಯಲ್ಲಿ ಹೆಪ್ಪುಗಟ್ಟಿರುವ ರಕ್ತ ತೆಗೆಯುವ ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ವೈದ್ಯರು ಇನ್ನೂ ಖಚಿತ ನಿರ್ಧಾರ ಕೈಗೊಂಡಿಲ್ಲ. ನಿಧಾನವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

    ಮಾಜಿ ಸಿಎಂ ವೀರಪ್ಪ ಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ವೇದವ್ಯಾಸ ಕಾಮತ್, ಎಐಸಿಸಿ ಕೇರಳ ಉಸ್ತುವಾರಿ ಪಿ.ವಿ.ಮೋಹನ್, ಕೆಪಿಸಿಸಿ ಕಾರ್ಯದರ್ಶಿ ಡಾ.ಆನಂದ್ ಕುಮಾರ್, ಸಯ್ಯದ್ ನಾಸೀರ್ ಹುಸೇನ್, ಬೆಳ್ತಂಗಡಿಯ ಬಿಷಪ್ ಲಾರೆನ್ಸ್ ಸೇರಿದಂತೆ ಹಲವು ಮಂದಿ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿ, ವೈದ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ. ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ ಕಳೆದೆರಡು ದಿನಗಳಿಂದ ಹಗಲಿಡೀ ಆಸ್ಪತ್ರೆಯಲ್ಲೇ ಇದ್ದು ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಆಸ್ಕರ್ ಕುಟುಂಬಸ್ಥರು, ಆಪ್ತರು, ಪಕ್ಷದ ಕಾರ್ಯಕರ್ತರು ಕೂಡ ಆಸ್ಪತ್ರೆಯಲ್ಲೇ ಬೀಡುಬಿಟ್ಟಿದ್ದಾರೆ.ಇನ್ನೊಂದೆಡೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಶಾಸಕ ವೇದವ್ಯಾಸ ಕಾಮತ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts