More

    35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಬ್ಯಾಂಕ್ ಲಾಕರ್​ನಿಂದಲೇ ನಾಪತ್ತೆ!

    ಉತ್ತರ ಪ್ರದೇಶ: ಸುರಕ್ಷಿತವಾಗಿರಲಿ ಎಂದು ಹಲವರು ಬ್ಯಾಂಕ್ ಲಾಕರ್​ನಲ್ಲಿ ತಮ್ಮ ಬೆಲೆಬಾಳುವ ದಾಖಲೆ, ಚಿನ್ನಾಭರಣಗಳು ಇಟ್ಟಿರುತ್ತಾರೆ. ಆದರೆ ಬ್ಯಾಂಕ್​ವೊಂದರ ಸೇಫ್ಟಿ ಲಾಕರ್​​ನಿಂದಲೇ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ನಾಪತ್ತೆಯಾಗಿವೆ. ಈ ಸಂಬಂಧ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

    ಮಾಹಿತಿ ಇಲಾಖೆಯ ಮಾಜಿ ಉಪ ನಿರ್ದೇಶಕ ನವಲ್​ ಕಾಂತ್ ತಿವಾರಿ ದೂರುದಾರರು. ಇವರು ಗೋರಖ್​ಪುರಕ್ಕೆ ವರ್ಗಾವಣೆ ಆಗಿದ್ದಾಗ ಅಲ್ಲಿನ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಲ್ಲಿ ತಮ್ಮ ಹಾಗೂ ಪತ್ನಿ ಸ್ನೇಹಲತಾ ಹೆಸರಿನಲ್ಲಿ ಜಂಟಿಯಾಗಿ ಒಂದು ಸೇಫ್ಟಿ ಲಾಕರ್ ಪಡೆದಿದ್ದರು. ಅದರಲ್ಲಿ 35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಇಟ್ಟಿದ್ದು, 2011ರ ಜೂನ್ 2ರಂದು ಕೊನೆಯದಾಗಿ ಲಾಕರ್​ ತೆರೆದಿದ್ದೆ. ಆ ನಂತರ ವರ್ಗಾವಣೆಯಾದ್ದರಿಂದ ಆ ಕಡೆ ಹೋಗಲು ಆಗಿರಲಿಲ್ಲ ಎಂದು ನವಲ್ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಕುಟುಂಬದವರೊಬ್ಬರ ಮದುವೆ ಇದ್ದ ಹಿನ್ನೆಲೆಯಲ್ಲಿ ಗುರುವಾರ ಬ್ಯಾಂಕ್​ಗೆ ತೆರಳಿ ಲಾಕರ್​ ತೆರೆದಿದ್ದೆ. ಅದಕ್ಕೂ ಮುನ್ನ ಬ್ಯಾಂಕ್​ನವರು ಕೆವೈಸಿ ಪ್ರಕ್ರಿಯೆ ಮಾಡಿಸಿಕೊಂಡು ಹಳೆಯ 25 ಸಾವಿರ ರೂ. ಠೇವಣಿ ಜತೆಗೆ ಹೆಚ್ಚುವರಿಯಾಗಿ ಲಾಕರ್ ಬಾಡಿಗೆ ಎಂದು ಮತ್ತೆ 25 ಸಾವಿರ ರೂ. ಪಡೆದಿದ್ದರು. ಎಲ್ಲ ಮುಗಿಸಿ ಲಾಕರ್ ತೆರೆದಾಗ ಅದು ಖಾಲಿ ಇತ್ತು ಎಂಬುದಾಗಿ ನವಲ್ ದೂರಿನಲ್ಲಿ ತಿಳಿಸಿದ್ದಾರೆ.

    ಅವರು 2011ರ ಬಳಿಕ ಈಗಲೇ ಬಂದಿರುವುದು, ಅವರು ಲಾಕರ್​ ನಂಬರ್ ಕೂಡ ಮರೆತು ಹೋಗಿದ್ದರು. ನಮ್ಮ ದಾಖಲೆಗಳ ಪ್ರಕಾರ 2014ರಲ್ಲೇ ಲಾಕರ್ ಸರೆಂಡರ್ ಮಾಡಲಾಗಿದೆ. ಅಷ್ಟಕ್ಕೂ ಬ್ಯಾಂಕ್​ನ ಯಾವ ಉದ್ಯೋಗಿಯೂ ಲಾಕರ್​ನಲ್ಲಿ ಏನಿದೆ ಎಂಬ ಮಾಹಿತಿ ಇರಿಸಿಕೊಳ್ಳುವುದಿಲ್ಲ. ಅದಾಗ್ಯೂ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದ್ದು, ಈಗಾಗಲೇ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ ಎಂದು ಬ್ಯಾಂಕ್​ ಮ್ಯಾನೇಜರ್​ ಕುಮಾರ್ ಅಮಿತಾಭ್ ತಿಳಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts