More

    ಸಾವಯವ ಗೊಬ್ಬರವಾಯ್ತು ಕಳೇಬರ!

    ಯಲ್ಲಾಪುರ: ರೈತರು ಪ್ರೀತಿಯಿಂದ ಸಾಕುವ ದನಕರುಗಳು ಸಾವನಪ್ಪಿದಾಗ ಕೊಟ್ಟಿಗೆಯಲ್ಲಿ ಸೂತಕದ ಛಾಯೆ ಒಂದೆಡೆಯಾದರೆ, ಆ ಹಸುವನ್ನು ಮಣ್ಣು ಮಾಡುವುದೊಂದು ತಲೆನೋವು. ಹೀಗಿರುವಾಗ ತಾಲೂಕಿನ ರಾಮಾಗಾಳಿಯ ಗುರುದತ್ತ ಭಾಗ್ವತ್ ಎಂಬ ಯುವ ಕೃಷಿಕ ಸಾವನಪ್ಪಿದ ಜಾನುವಾರುಗಳ ಕಳೇಬರಗಳಿಂದ ಗೊಬ್ಬರ ತಯಾರಿಸಿ, ಅದನ್ನು ಗಿಡಗಳಿಗೆ ಉಣಿಸುವ ಮೂಲಕ ಮಾದರಿಯಾಗಿದ್ದಾರೆ.

    ಕೃಷಿ ಡಿಪ್ಲೋಮಾ ಓದಿರುವ ಗುರುದತ್ತ ಭಾಗ್ವತ, ಸಾಕಷ್ಟು ಉದ್ಯೋಗ ಅವಕಾಶಗಳು ಅರಸಿ ಬಂದರೂ, ಅದಕ್ಕೆ ಒಪ್ಪದೇ ಕೃಷಿಯಲ್ಲಿ ತೊಡಗಿರುವುದು ವಿಶೇಷ.

    25 ಸಾವಿರ ರೂ. ವೆಚ್ಚದಲ್ಲಿ ಗೊಬ್ಬರ ತಯಾರಿಕಾ ಘಟಕ ಆರಂಭಿಸಿದ ಅವರು, ತಮ್ಮ 15 ಎಕರೆ ತೋಟಕ್ಕೆ ಸಾವಯವ ಗೊಬ್ಬರವಾಗಿ ಮೃತ ಜಾನುವಾರುಗಳಿಂದ ತಯಾರಾದ ದ್ರವವನ್ನು ನೀಡುತ್ತಾರೆ.

    ಪ್ರತಿ ತಿಂಗಳು ಈ ದೃವವನ್ನು ನೀರಿಗೆ ಬೆರೆಸಿ ನೀಡುವುದು ಅವರ ಕಾಯಕ. ಇದನ್ನು ಹೊರತುಪಡಿಸಿ ಆಗಾಗ ರಾಸಾಯನಿಕ ಗೊಬ್ಬರವನ್ನು ಸಹ ಬಳಸುತ್ತಾರೆ.

    ಗುರುದತ್ತ ಅವರಿಗೆ ತಂದೆ ಗೋಪಾಲಕೃಷ್ಣ ಭಾಗ್ವತ್ ಪ್ರತಿ ಕೆಲಸದಲ್ಲಿಯೂ ಜೊತೆಯಾಗಿದ್ದಾರೆ. ತಮ್ಮ ತೋಟಗಳಿಗೆ ಮೊದಲು ಅವರು ಜೀವಾಮೃತ ತಯಾರಿಸಿ ಸಿಂಪಡಿಸುತ್ತಿದ್ದರು. ನಂತರ ಕುಪ್ಪಳ್ಳಿಯ ಆನಂದ ರಾವ್ ಎಂಬವರಿಂದ ಪ್ರೇರಣೆ ಪಡೆದು ಈ ದ್ರವರೂಪದ ಗೊಬ್ಬರ ತಯಾರಿಕೆಗೆ ಮುಂದಾದರು.

    ತಮ್ಮ ತೋಟದ ನಡುವೆ 5X7 ಗಾತ್ರದ ಎರಡು ಗುಂಡಿಗಳನ್ನು ತೆಗೆದು, ಅದರಲ್ಲಿ ಸಿಮೆಂಟ್ ರಿಂಗ್​ಗಳನ್ನು ಇಳಿಸಿದ್ದು, ಸಾವನಪ್ಪಿದ ಜಾನುವಾರುಗಳನ್ನು ಅಲ್ಲಿ ಹಾಕುತ್ತಾರೆ. ನಂತರ ಜಾನುವಾರು ತೂಕದ ಅನುಗುಣವಾಗಿ ಮಜ್ಜಿಗೆ, ಒಂದು ಡಬ್ಬಿ ಬೆಲ್ಲವನ್ನು ಸುರಿಯುತ್ತಾರೆ. ಆ ಹೊಂಡಕ್ಕೆ ಗಾಳಿ ಆಡದಂತೆ ಮುಚ್ಚಿ, ಹೊಂಡದ ಒಳಗಿನ ವಾಸನೆ ಹೊರ ಹೋಗುವುದಕ್ಕಾಗಿ ಒಂದು ರಂದ್ರವನ್ನಿರಿಸಿದ್ದಾರೆ. ಅದೇ ರಂದ್ರದಿಂದ ಆಗಾಗ ಸಗಣಿ ಹಾಗೂ ಗೋಮೂತ್ರವನ್ನು ಒದಗಿಸುತ್ತಾರೆ. ಈ ಎಲ್ಲಾ ಮಿಶ್ರಣಗಳಿಂದ ಬೆಳೆಯುವ ಬಾಕ್ಟಿರಿಯಾಗಳು ಬಹುಬೇಗ ಜಾನುವಾರು ದೇಹವನ್ನು ಕರಗಿಸುತ್ತದೆ.

    ಮೂರು ತಿಂಗಳಿನಲ್ಲಿ ಜಾನುವಾರುಗಳ ಎಲುಬು ಸಹ ಬಹುತೇಕ ಕರಗಿ, ದ್ರವರೂಪದ ಗೊಬ್ಬರವಾಗಿ ದೊರೆಯುತ್ತದೆ. ಈ ಗೊಬ್ಬರ ತಯಾರಿಸುವ ಪ್ರಕ್ರಿಯೆಯಲ್ಲಿ ಎಲ್ಲಿಯೂ ಕೊಳೆತ ವಾಸನೆ ಬರುವುದಿಲ್ಲ ಎಂಬುದು ಇನ್ನೊಂದು ವಿಶೇಷ.

    ನಂತರ ಪ್ರತಿ ಲೀಟರ್ ಸ್ಲರಿ ನೀರಿಗೆ 50 ಮಿ.ಲೀ. ಈ ದ್ರವ ರೂಪದ ಗೊಬ್ಬರವನ್ನು ಬೆರೆಸಿ, ಡ್ರಿಪ್ ಪೈಪ್​ಗಳ ಮೂಲಕ ತಮ್ಮ ತೋಟದಲ್ಲಿರುವ ಎಲ್ಲಾ ಬಗೆಯ ಗಿಡಗಳಿಗೆ ನೀಡುತ್ತಾರೆ.

    ಇದರಿಂದ ಗಿಡಗಳಿಗೆ ಬೇಡಿಕೆಯಿರುವ ಸಾವಯವ ಗೊಬ್ಬರ ಪೂರೈಕೆಯಾಗುತ್ತದೆ ಎಂಬುದು ಅವರ ಅನುಭವದ ಮಾತು. ಅಡಕೆ, ಕಾಳುಮೆಣಸು, ಕಾಫಿ ಜೊತೆ ಭತ್ತ, ಮೇವಿನ ಹುಲ್ಲು ಸೇರಿದಂತೆ ವಿವಿಧ ಬೆಳೆಗಳ ಮೇಲೆ ಅವರು ಈ ಗೊಬ್ಬರದ ಪ್ರಯೋಗ ನಡೆಸಿದ್ದಾರೆ. ಎಲ್ಲಾ ಕಡೆ ಉತ್ತಮ ಫಲಿತಾಂಶ ಬಂದಿದೆ.

    ವಿವಿಧ ಗೋಶಾಲೆಗಳಲ್ಲಿ ಸಾವನಪ್ಪಿದ ಜಾನುವಾರುಗಳ ಮೃತದೇಹವನ್ನು ತಂದು ಈ ಪ್ರಕ್ರಿಯೆಗೆ ಒಳಪಡಿಸುತ್ತಾರೆ. ಜೊತೆಗೆ ಜಾನುವಾರು ಸಾವನ್ನಪ್ಪಿದ ಬಗ್ಗೆ ಯಾರಾದರೂ ತಿಳಿಸಿದಲ್ಲಿ ಅಲ್ಲಿಗೆ ತೆರಳಿ ಅವುಗಳನ್ನು ತಂದು ತಮ್ಮ ತೋಟದಲ್ಲಿ ಮಣ್ಣು ಮಾಡುತ್ತಾರೆ. ಹೀಗೆ ಜಾನುವಾರು ಹೂಳಿದ ಪ್ರದೇಶದಲ್ಲಿನ ಮಣ್ಣಿನ ಫಲವತ್ತದೆ ಸಹ ಹೆಚ್ಚಾಗಿರುವ ಬಗ್ಗೆ ಅವರು ಅನುಭವ ಹಂಚಿಕೊಳ್ಳುತ್ತಾರೆ.

    ಜಾನುವಾರು ಸಾವನ್ನಪ್ಪಿದ ನಂತರವೂ ಅದು ಕನಿಷ್ಠ 20 ಸಾವಿರ ರೂ ಬೆಲೆ ಬಾಳುತ್ತದೆ. ಸಾವನ್ನಪ್ಪಿದ ಪ್ರಾಣಿಗಳ ಕಳೇಬರ ವಿಲೇವಾರಿ ದೊಡ್ಡ ಸವಾಲಾಗಿರುವ ಸನ್ನಿವೇಶದಲ್ಲಿ ಅವುಗಳಿಂದ ಗೊಬ್ಬರ ತಯಾರಿಸಿ ಮರುಬಳಕೆ ಮಾಡುತ್ತಿರುವುದು ಉತ್ತಮ ಪ್ರಯತ್ನ.

    | ಡಾ ಸುಬ್ರಾಯ ಭಟ್ಟ, ಸಹಾಯಕ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಯಲ್ಲಾಪುರ

    ಬದುಕಿದ್ದಾಗ ನಮ್ಮೊಡನೆ ಅನ್ಯೋನ್ಯತೆಯ ಸಂಬಂಧ ಹೊಂದಿರುವ ಜಾನುವಾರುಗಳನ್ನು, ಸತ್ತ ನಂತರ ಹೂತು ಹಾಕಿಯೋ ಅಥವಾ ಎಲ್ಲಿಯೋ ಎಸೆಯುವುದರ ಬದಲು, ಈ ರೀತಿಯ ವಿಧಾನ ಅನುಸರಿಸಿದರೆ, ಆ ಜಾನುವಾರುಗಳು ಸತ್ತ ಮೇಲೂ ನಮ್ಮೊಂದಿಗಿವೆ ಎಂಬ ಸಮಾಧಾನ ತರುತ್ತದೆ. ಜತೆಗೆ ಉತ್ತಮ ಕೃಷಿಗೂ ಪೂರಕವಾಗಬಲ್ಲದು.

    | ಗುರುದತ್ತ ಭಾಗ್ವತ, ಯುವ ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts