More

    ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧ

    ರಾಣೆಬೆನ್ನೂರ: ಪೌರತ್ವ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ದೇಶದ ಜನತೆಯ ಶಕ್ತಿಯನ್ನು ಜಗತ್ತಿಗೆ ತೋರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ತಿದ್ದುಪಡಿ ಕಾಯ್ದೆ ಹಿಂಪಡೆಯುವವರೆಗೂ ಹೋರಾಟ ನಿಲ್ಲಬಾರದು. ಗೆಲುವು ಸಿಗುವವರೆಗೂ ಹೋರಾಟ ನಿರಂತರವಾಗಿರಬೇಕು ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದರು.

    ಪ್ರಜಾಪ್ರಭುತ್ವ ಹಾಗೂ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ವತಿಯಿಂದ ನಗರದ ಮುನ್ಸಿಪಲ್ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

    ದೇಶದ ಮುಸ್ಲಿಮರು ಹೆದರಬೇಡಿ ಎಂದು ಹೇಳುತ್ತಿರುವ ಮೋದಿಯವರಿಗೆ ನಾವು ಯಾರಿಗೂ ಹೆದರಲ್ಲ ಎಂಬುದು ಗೊತ್ತಿಲ್ಲ. ಈಗ ಅವರಿಗೆ ತಿಳಿಸಿಕೊಡುವ ಸಮಯ ಬಂದಿದೆ. ಧರ್ಮದ ಆಧಾರದ ಮೇಲೆ ದೇಶ ಕಟ್ಟಲು ಸಾಧ್ಯವಿಲ್ಲ ಎಂಬುದು ಬಿಜೆಪಿಯವರಿಗೆ ಅರ್ಥ ಮಾಡಿಸಬೇಕು. ಮಾನವೀಯತೆ ಬಿಟ್ಟು ಇಸ್ಲಾಂ ಧರ್ಮ ಇಲ್ಲ. ನಮಗೆ ಪಾಕಿಸ್ತಾನಕ್ಕೆ ಹೋಗಿ ಎನ್ನುತ್ತಾರೆ. ಆದರೆ, ನಾವು ಎಂದೂ ಪಾಕಿಸ್ತಾನಕ್ಕೆ ಹೋಗಿಲ್ಲ. ಮೋದಿಯವರೇ ಹೋಗಿ ಬಂದಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು ಎಂದರು.

    ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಬಿಜೆಪಿಯವರು ನಡೆದಿದ್ದೇ ದಾರಿ ಎಂಬಂತಾಗಿದೆ. ಜನತೆ ಕೂಡ ಅವರನ್ನು ಬೆಂಬಲಿಸುತ್ತಿದ್ದಾರೆ. ನಾವು ಜಾಗ್ರತರಾಬೇಕು. ಇಂದು ಪೌರತ್ವ ಕಾಯ್ದೆ ತಿದ್ದುಪಡಿ, ಮುಂದೆ ಇನ್ನೂ ಹಲವು ಕಾನೂನುಗಳನ್ನು ತಿದ್ದುಪಡಿ ಮಾಡುತ್ತಾರೆ. ಆದ್ದರಿಂದ ಹೋರಾಟ ತೀವ್ರಗೊಳಿಸಬೇಕು. ಗೆಲ್ಲುವವರೆಗೂ ಹೋರಾಟ ಕೈ ಬಿಡಬಾರದು ಎಂದರು.

    ನಂತರ ತಹಸೀಲ್ದಾರ್ ಬಸವನಗೌಡ ಕೋಟೂರು ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಿದರು.

    ಮಾಜಿ ಸಚಿವ ಬಸವರಾಜ ಶಿವಣ್ಣನವರ, ಪ್ರಮುಖರಾದ ಜಬ್ಬರಖಾನ್ ಹೊನ್ನಾಳಿ, ಪ್ರಕಾಶ ಕೋಳಿವಾಡ, ಜಾಕೀರ ಸನದಿ, ಎಂ.ಎಂ. ಹಿರೇಮಠ, ರವೀಂದ್ರಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ಏಕನಾಥ ಬಾನುವಳ್ಳಿ, ಅಬ್ದುಲ್​ವಹಾಬ್ ಶಾಫಿ, ಚಂದ್ರಣ್ಣ ಬೇಡರ, ಕೃಷ್ಣಪ್ಪ ಕಂಬಳಿ, ಕೃಷ್ಣಮೂರ್ತಿ ಸುಣಗಾರ, ಶೇರುಖಾನ್ ಖಾಬುಲಿ, ಸಣ್ಣತಮ್ಮಪ್ಪ ರ್ಬಾ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.

    ಮುಸ್ಲಿಮರು ವಿಶ್ವಾಸದಿಂದ ಜೀವನ ಮಾಡುತ್ತಿದ್ದಾರೆ. ಎನ್​ಆರ್​ಸಿ ಪಡೆದುಕೊಳ್ಳಲು ಆಧಾರ ಕಾರ್ಡ್, ರೇಷನ್ ಕಾರ್ಡ್, ಮತದಾನ ಚೀಟಿ ಬೇಡ ಎನ್ನುವುದಾದರೆ ಯಾವ ಆಧಾರದ ಮೇಲೆ ನಾವು ಎನ್​ಆರ್​ಸಿ ಪಡೆದುಕೊಳ್ಳಬೇಕು.

    | ಸಿ.ಎಂ. ಇಬ್ರಾಹಿಂ, ಕೇಂದ್ರದ ಮಾಜಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts