More

    ಕೊಪ್ಪಳದ ಹಿರಿಯ ಉಪ ನೋಂದಣಾಧಿಕಾರಿ ಹುದ್ದೆಗೆ ಹಿಂಬಡ್ತಿ; ರಾಜಕೀಯ ಒತ್ತಡ ಆರೋಪ

    ಕೊಪ್ಪಳ: ಜಿಲ್ಲೆಯಾಗಿ ಕೊಪ್ಪಳ 25 ವರ್ಷ ಪೂರೈಸಿದೆ. ಹಲವು ರಂಗಗಳಲ್ಲಿ ಅಭಿವೃದ್ಧಿ ಮುಮ್ಮುಖವಾಗಿದ್ದರೆ, ನೋಂದಣಿ ಮತ್ತು ಮುದ್ರಾಂಕ ಕಚೇರಿ ಮಾತ್ರ ಹಿಮ್ಮುಖವಾಗಿ ಸಾಗುತ್ತಿದೆ. ರಾಜಕೀಯ ಹಾಗೂ ಅಧಿಕಾರಿಗಳ ಒತ್ತಡಕ್ಕೆ ಮಣಿದಿರುವ ಇಲಾಖೆ, ಹಿರಿಯ ಉಪ ನೋಂದಣಾಧಿಕಾರಿ ಹುದ್ದೆಗೆ ಹಿಂಬಡ್ತಿ ನೀಡುವ ಮೂಲಕ ಅಭಿವೃದ್ಧಿಗೆ ಮಾರಕವಾಗಿರುವ ಆರೋಪ ಕೇಳಿ ಬರುತ್ತಿದೆ.
    ಏಜೆಂಟರ ಹಾವಳಿ, ಸಾರ್ವಜನಿಕರಿಗೆ ಮೂಲಸೌಕರ್ಯ ಕಲ್ಪಿಸದಿರುವುದು, ಭ್ರಷ್ಟಾಚಾರ ಆರೋಪಗಳಿಗೆ ಗುರಿಯಾಗಿರುವ ಇಲಾಖೆ ಇನ್ನು ಜನಸ್ನೇಹಿಯಾಗುವ ಮನಸ್ಸು ಮಾಡುತ್ತಿಲ್ಲ. ಜಿಲ್ಲೆಯಲ್ಲಿ 7 ತಾಲೂಕುಗಳಿವೆ. ನೂತನ ತಾಲೂಕುಗಳ ಪೈಕಿ ಕಾರಟಗಿಯಲ್ಲಿ ಈಗಾಗಲೇ ನೋಂದಣಿ ಕಚೇರಿ ಇದೆ. ಕುಕನೂರು ಹಾಗೂ ಕನಕಗಿರಿಯಲ್ಲಿ ಆರಂಭಿಸಬೇಕಿದೆ. ತಾಲೂಕುಗಳಾಗಿ 4 ವರ್ಷಗಳಾಗಿದ್ದು, ನೂತನ ಕಚೇರಿ ಆರಂಭಿಸುವತ್ತ ಇಲಾಖೆ ಮನಸ್ಸು ಮಾಡುತ್ತಿಲ್ಲ. ಬದಲಿಗೆ ಈಗಿರುವ ಹುದ್ದೆ, ಕಚೇರಿ ಕರ್ತವ್ಯ, ಜವಾಬ್ದಾರಿಗಳಿಗೆ ಕತ್ತರಿ ಹಾಕಿದೆ. ಆಸ್ತಿ, ವಿವಾಹ, ವ್ಯವಹಾರ, ದಸ್ತಾವೇಜು, ಋಣಭಾರ ಪ್ರಮಾಣ ಪತ್ರ ವಿತರಣೆ ಸುಸೂತ್ರಗೊಳಿಸಲು ಸರ್ಕಾರ ನಾನಾ ಕಸರತ್ತು ನಡೆಸುತ್ತಿದೆ. ಜಿಲ್ಲಾ ಕೇಂದ್ರ ಕೊಪ್ಪಳ ನೋಂದಣಿ ಕಚೇರಿಯಲ್ಲಿ ವಾರ್ಷಿಕ 10-12 ಕೋಟಿ ರೂ. ಆರ್ಥಿಕ ವಹಿವಾಟು ನಡೆಯುತ್ತಿದೆ. ಇದಕ್ಕೆ ತಕ್ಕಂತೆ ಮೂಲ ಸೌಲಭ್ಯಗಳಿಲ್ಲ.
    ಕೊಪ್ಪಳ, ಯಲಬುರ್ಗಾ ಮತ್ತು ಗಂಗಾವತಿಯಲ್ಲಿ ಹಿರಿಯ ಉಪ ನೋಂದಣಾಧಿಕಾರಿ ಹುದ್ದೆಗಳಿವೆ. ಆದರೆ, ಕಳೆದ ತಿಂಗಳು ನೋಂದಣಿ ಮತ್ತು ಮುಂದ್ರಾಂಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎ.ಜಿ.ವೀಣಾ, ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿರುವ ಹಿರಿಯ ನೋಂದಣಾಧಿಕಾರಿ ಹುದ್ದೆ ರದ್ದುಪಡಿಸಿ ಆದೇಶಿಸಿದ್ದಾರೆ. ಅಧಿಕಾರಿಗಳ ಕೊರತೆ ಒಂದಡೆಯಾದರೆ, ರಾಜಕೀಯ ಒತ್ತಡವೂ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಕಚೇರಿಯಿಂದ ಸರ್ಕಾರಕ್ಕೆ ಉತ್ತಮ ಆದಾಯ ಹರಿದು ಬರುತ್ತಿದೆ. ಈಗಿರುವ ಕಚೇರಿಯಲ್ಲಿಯೇ ಕಾರ್ಯ ಒತ್ತಡ ಅಧಿಕವಾಗಿದೆ. ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಇಲ್ಲ. ಹೀಗಾಗಿ ದಲ್ಲಾಲಿಗಳ ಹಾವಳಿ ಅಧಿಕವಾಗಿದೆ. ಹೀಗಿದ್ದರೂ ಕೊರತೆಗಳನ್ನು ಮರೆಮಾಚಿ ಹಿಂಬಡ್ತಿಗೆ ಆದೇಶ ಮಾಡಿರುವ ಕ್ರಮ ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಯಲಬುರ್ಗಾ ಹಿರಿಯ ನೋಂದಣಾಧಿಕಾರಿ ಹುದ್ದೆ ಹಿಂಬಡ್ತಿಗೂ ಚಿಂತನೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಕೊಪ್ಪಳ ಜತೆಗೆ ತುಮಕೂರು ಜಿಲ್ಲೆಯ ತಿಪಟೂರು, ರಾಜಾಜಿನಗರ, ಪೀಣ್ಯ ನೋಂದಣಿ ಕಚೇರಿ ಹುದ್ದೆಗಳಿಗೆ ಹಿಂಬಡ್ತಿ ನೀಡಿದರೆ, ಇಂದಿರಾನಗರ, ಜಾಲ, ಬಿ.ಟಿ.ಎಂ.ಲೇಔಟ್, ಚಿಂತಾಮಣಿ ಉಪ ನೋಂದಣಿ ಕಚೇರಿಗಳಲ್ಲಿನ ಉಪ ನೋಂದಣಾಧಿಕಾರಿ ಹುದ್ದೆಗಳನ್ನು ಹಿರಿಯ ಉಪ ನೊಂದಣಾಧಿಕಾರಿ ಹುದ್ದೆಗಳಿಗೇರಿಸಿ ಬಡ್ತಿ ನೀಡಲಾಗಿದೆ.

    ಆಡಳಿತಾತ್ಮಕ ದೃಷ್ಟಿ ನೆಪ

    ಇಲಾಖೆ ಆಡಳಿತಾತ್ಮಕ ದೃಷ್ಟಿಯಿಂದ ಹುದ್ದೆಗಳಿಗೆ ಮುಂಬಡ್ತಿ, ಹಿಂಬಡ್ತಿ ನೀಡಿರುವುದಾಗಿ ಆದೇಶದಲ್ಲಿ ತಿಳಿಸಿದೆ. ಆದರೆ, ಇದರ ಹಿಂದೆ ರಾಜಕೀಯ ಒತ್ತಡವೂ ಕೆಲಸ ಮಾಡಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಕೊಪ್ಪಳ ಉಪ ನೋಂದಣಿ ಕಚೇರಿ ಅಧಿಕಾರಿ ನಿವೃತ್ತಿಯಾಗಿದ್ದಾರೆ. ಜಿಲ್ಲೆಯ ಪ್ರಮುಖ ರಾಜಕೀಯ ನಾಯಕರೊಬ್ಬರು ತಮಗೆ ಬೇಕಾದ ಅಧಿಕಾರಿಯನ್ನು ಕರೆತರಲು ಪ್ರಯತ್ನ ನಡೆಸಿದ್ದಾರೆಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

    ಹೊಸ ತಾಲೂಕಗಳಲ್ಲಿಲ್ಲ ಕಚೇರಿ

    ಜಿಲ್ಲೆಯಲ್ಲಿ ರಚನೆಯಾದ ನೂತನ ತಾಲೂಕುಗಳ ಪೈಕಿ ಕಾರಟಗಿಯಲ್ಲಿ ಈಗಾಗಲೇ ಉಪ ನೋಂದಣಿ ಕಚೇರಿಯಿದೆ. ಕುಕನೂರು ಹಾಗೂ ಕನಕಗಿರಿ ತಾಲೂಕುಗಳಲ್ಲಿ ಇನ್ನು ಆರಂಭವಾಗಿಲ್ಲ. ಕಚೇರಿ ಆರಂಭಕ್ಕೆ ಬೇಕಾದ ಸಿಬ್ಬಂದಿ ನೇಮಕವಾಗಿಲ್ಲ. ತಾಲೂಕು ರಚನೆಯಾಗಿ ಹಲವು ವರ್ಷಗಳಾದರೂ ಆಸ್ತಿ ವಹಿವಾಟು ವ್ಯವಹಾರಗಳಿಗೆ ಹಳೆಯ ತಾಲೂಕುಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

    ಕೊಪ್ಪಳ ಹಿರಿಯ ಉಪ ನೋಂದಣಾಧಿಕಾರಿ ಹುದ್ದೆ ಹಿಂಬಡ್ತಿ ಮಾಡಿರುವುದು ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಮೊದಲಿನಂತೆ ಮುಂದುವರಿಸುವಂತೆ ಮನವಿ ಮಾಡುತ್ತೇನೆ.
    ರಾಘವೇಂದ್ರ ಹಿಟ್ನಾಳ್,
    ಶಾಸಕ, ಕೊಪ್ಪಳ

    ಜಿಲ್ಲಾಕೇಂದ್ರದಲ್ಲಿ ಸಾಕಷ್ಟು ಕಾರ್ಖಾನೆಗಳಿವೆ. ಮೊನ್ನೆ ಸಿಎಂ ಅವರೇ ಕೈಗಾರಿಕಾ ಸಮ್ಮೇಳನ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಕಂದಾಯ ಅಧಿಕಾರಿಗಳು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಹಿಂಬಡ್ತಿಗೆ ಕಾರಣರಾಗಿದ್ದಾರೆ.
    ಅಮರೇಶ ಕರಡಿ
    ಬಿಜೆಪಿ ಮುಖಂಡ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts