More

    ಮನಪಾ ಪ್ರತಿಪಕ್ಷ ನಾಯಕ ಸ್ಥಾನ ಗೊಂದಲ

    ಪಿ.ಬಿ.ಹರೀಶ್ ರೈ ಮಂಗಳೂರು
    ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಆಯ್ಕೆಯಲ್ಲಿ ಇದೇ ಪ್ರಥಮ ಬಾರಿಗೆ ಗೊಂದಲ ಉಂಟಾಗಿದೆ. ಪ್ರತಿಪಕ್ಷದ ನಾಯಕನಾಗಿ ಎ.ಸಿ.ವಿನಯರಾಜ್ ಅವರನ್ನು ನೇಮಿಸಲಾಗಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ನೇರ ಪಾಲಿಕೆ ಆಯುಕ್ತರಿಗೆ ಪತ್ರ ಬರೆದದ್ದು ಗೊಂದಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಪಾಲಿಕೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಲು ಅಗತ್ಯ ಸಂಖ್ಯಾಬಲವನ್ನೂ ಕಾಂಗ್ರೆಸ್ ಹೊಂದಿಲ್ಲ ಎನ್ನುವ ಗೊಂದಲವೂ ಜತೆಗೇ ತಲೆದೋರಿದೆ.

    60 ಸದಸ್ಯತ್ವ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ-44, ಕಾಂಗ್ರೆಸ್-14 ಹಾಗೂ ಎಸ್‌ಡಿಪಿಐ-2 ಸ್ಥಾನ ಹೊಂದಿದೆ. ಹಿಂದಿನ ಮೇಯರ್ ಅವಧಿಯಲ್ಲಿ ಕಾಂಗ್ರೆಸ್‌ನ ಹಿರಿಯ ಕಾರ್ಪೊರೇಟರ್ ಅಬ್ದುಲ್ ರವೂಫ್ ಪ್ರತಿಪಕ್ಷದ ನಾಯಕ ರಾಗಿದ್ದರು. ಸಾಮಾನ್ಯವಾಗಿ ಮೇಯರ್ ಚುನಾವಣೆ ಬಳಿಕ ನಡೆಯುವ ಪರಿಷತ್ ಸಭೆಯಲ್ಲಿ ಪ್ರತಿಪಕ್ಷದವರು ತಮ್ಮ ನಾಯಕನ ಹೆಸರು ಸೂಚಿಸುತ್ತಾರೆ. ಮೇಯರ್ ಅದಕ್ಕೆ ಒಪ್ಪಿಗೆ ನೀಡುತ್ತಾರೆ. ಆದರೆ ಈ ಬಾರಿ ಕಾಂಗ್ರೆಸ್ ಅಧ್ಯಕ್ಷರು ಆಯುಕ್ತರಿಗೆ ಪತ್ರ ನೀಡಿದ ಕಾರಣ ಕಾನೂನು ರೀತಿಯ ಆಯ್ಕೆಗೆ ಪಾಲಿಕೆ ಆಡಳಿತ ಮುಂದಾಗಿದೆ ಎನ್ನುವ ಮಾಹಿತಿ ಇದೆ.

    ಪತ್ರ ಕಡತವಾಗಿದೆ: ಕಾಂಗ್ರೆಸ್ ಅಧ್ಯಕ್ಷರು ಬರೆದಿರುವ ಪತ್ರವನ್ನು ಆಯುಕ್ತರು ಪರಿಶೀಲನೆಗಾಗಿ ಪರಿಷತ್ ಕಾರ್ಯದರ್ಶಿಗೆ ರವಾನಿಸಿದ್ದಾರೆ. ಪರಿಷತ್ ಕಾರ್ಯದರ್ಶಿ ಅದನ್ನು ಕಡತವಾಗಿಸಿ ಮುಂದಿನ ಕ್ರಮಕ್ಕಾಗಿ ಮೇಯರ್‌ಗೆ ಒಪ್ಪಿಸಿದ್ದಾರೆ. ಪೌರಾಡಳಿತ ನಿಯಮ ಪ್ರಕಾರ ಪಾಲಿಕೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಲು ಮೂರನೇ ಎರಡರಷ್ಟು ಸಂಖ್ಯಾಬಲವೂ ಅಗತ್ಯ ಎನ್ನುವ ಅಂಶ ಇದರಲ್ಲಿ ಉಲ್ಲೇಖವಿದೆ. ಇದರನ್ವಯ ಪ್ರತಿ ಪಕ್ಷವಾಗಲು 20 ಸದಸ್ಯರು ಇರಬೇಕು. ಕಾಂಗ್ರೆಸ್ ಹೊಂದಿರುವುದು 14 ಸದಸ್ಯರನ್ನು ಮಾತ್ರ. ಪ್ರತಿಪಕ್ಷ ನಾಯಕರನ್ನು ಪಕ್ಷದ ಅಧ್ಯಕ್ಷರು ಸೂಚಿಸುವ ಕ್ರಮವೂ ನಿಯಮಬಾಹಿರ.

    ಕಾನೂನು ತಜ್ಞರ ಸಲಹೆ: ಪಾಲಿಕೆಯಲ್ಲಿ ಪ್ರತಿಪಕ್ಷ ನಾಯಕನಾಗಿ ಕಾರ್ಯನಿರ್ವಹಿಸುವ ಸದಸ್ಯನ ಹೆಸರನ್ನು ಮೇಯರ್ ಅಂಗೀಕರಿಸಬೇಕೆಂಬ ನಿಯಮ ಇದೆ. ಈ ಹಿಂದೆ ಆಡಳಿತ ಮತ್ತು ಪ್ರತಿಪಕ್ಷದ ಮಧ್ಯೆ ಹೊಂದಾಣಿಕೆ ಇದ್ದ ಕಾರಣ ಪ್ರತಿಪಕ್ಷದವರು ಸೂಚಿಸಿದ ಹೆಸರನ್ನು ಮೇಯರ್ ಅಂಗೀಕರಿಸುತ್ತಿದ್ದರು. ಹಾಗಾಗಿ ಸಂಖ್ಯಾಬಲ ಇಲ್ಲದಿದ್ದರೂ ಪ್ರತಿಪಕ್ಷದ ನಾಯಕನಿಗೆ ಸ್ಥಾನಮಾನ, ಪ್ರತ್ಯೇಕ ಕೊಠಡಿ ಲಭ್ಯವಾಗುತ್ತಿತ್ತು. ಆದರೆ ಈ ಬಾರಿ ಪಕ್ಷದ ಜಿಲ್ಲಾಧ್ಯಕ್ಷರು ನೇರ ಆಯುಕ್ತರಿಗೆ ಪತ್ರ ಬರೆದ ಕಾರಣ ಮೇಯರ್ ಕಾನೂನು ತಜ್ಞರ ಸಲಹೆ ಪಡೆದು ಮುಂದುವರಿಯಲು ನಿರ್ಧರಿಸಿದ್ದಾರೆ.

    ವಿನಯರಾಜ್ ಹೆಸರಿಗೆ ವಿರೋಧ?
    ಕಾಂಗ್ರೆಸ್‌ನಲ್ಲಿ 4-5 ಬಾರಿ ಆಯ್ಕೆಯಾದ ಸದಸ್ಯರಿದ್ದರೂ, ಎರಡನೇ ಬಾರಿ ಆಯ್ಕೆಯಾದ ಎ.ಸಿ.ವಿನಯರಾಜ್‌ಗೆ ಅವಕಾಶ ನೀಡಿದ್ದು ಪಕ್ಷದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿಂದೆ ಸ್ಮಾರ್ಟ್ ಸಿಟಿ ನಿರ್ದೇಶಕನ ಸ್ಥಾನಕ್ಕೆ ಪ್ರತಿಪಕ್ಷದಿಂದ ಎ.ಸಿ.ವಿನಯರಾಜ್ ಅವರ ಹೆಸರು ಸೂಚಿಸಲಾಗಿತ್ತು. ಆದರೆ ಆಡಳಿತ ಪಕ್ಷದವರು ಇದಕ್ಕೆ ಒಪ್ಪದ ಕಾರಣ ಪಾಲಿಕೆ ಸಭೆಯಲ್ಲಿ ಭಾರಿ ಚರ್ಚೆ ನಡೆದಿತ್ತು. ಇದರಲ್ಲಿ ಮೇಯರ್ ನಿರ್ಣಯ ಅಂತಿಮವಾಗಿತ್ತು. ಹಿಂದಿನ ಮೇಯರ್ ದಿವಾಕರ್ ಕಾಂಗ್ರೆಸ್‌ನ ಹಿರಿಯ ಸದಸ್ಯ ಭಾಸ್ಕರ ಮೊಯ್ಲಿ ಅವರನ್ನು ಸ್ಮಾರ್ಟ್ ಸಿಟಿ ನಿರ್ದೇಶಕರಾಗಿ ನೇಮಕ ಮಾಡಿದ್ದರು.

    ಪ್ರತಿಪಕ್ಷದ ನಾಯಕನ ಹೆಸರನ್ನು ಪರಿಷತ್ ಸಭೆಯಲ್ಲಿ ಮೇಯರ್‌ಗೆ ತಿಳಿಸುವುದು ಕ್ರಮ. ಆರಂಭದಿಂದಲೂ ಈ ಸಂಪ್ರದಾಯವಿದೆ. ಆದರೆ ಕಾಂಗ್ರೆಸ್ ಅಧ್ಯಕ್ಷರು ಆಯುಕ್ತರಿಗೆ ಪತ್ರ ಬರೆದ ಕಾರಣ ಗೊಂದಲ ಸೃಷ್ಟಿಯಾಗಿದೆ. ಹಾಗಾಗಿ ಕಾನೂನು ಪ್ರಕಾರ ಮುಂದುವರಿಯುವುದು ಅನಿವಾರ್ಯವಾಗಿದೆ. ಅಧಿಕೃತ ಪ್ರತಿಪಕ್ಷವಾಗಲು ಅಗತ್ಯ ಸ್ಥಾನಬಲ ಇರಬೇಕೆಂಬ ನಿಯಮವೂ ಇದೆ. ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು.
    ಪ್ರೇಮಾನಂದ ಶೆಟ್ಟಿ ಮೇಯರ್, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts