More

    ಮದುವೆ ನನ್ನ ವೈಯಕ್ತಿಕ ವಿಚಾರ; ಸೋತು ಗೆದ್ದ ಅರವಿಂದ್

    ಬೆಂಗಳೂರು: ‘ಬಿಗ್ ಬಾಸ್’ ಸೀಸನ್ 8, ಹಲವು ರೋಚಕ ಕ್ಷಣಗಳಿಗೆ ಮತ್ತು ಬದಲಾವಣೆಗೆ ಸಾಕ್ಷಿಯಾಗಿತ್ತು. ಅಂತಿಮವಾಗಿ ಮಂಜು ಪಾವಗಡ ವಿಜೇತರಾದರೆ, ಬೈಕ್ ರೇಸರ್ ಅರವಿಂದ್ ಕೆ.ಪಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಆ ಸುದೀರ್ಘ ಪ್ರಯಾಣದ ಬಗ್ಗೆ ಮಾತನಾಡುವ ಅರವಿಂದ್, ಶಾಲೆಯಂತೆ ‘ಬಿಗ್ ಬಾಸ್’ನಲ್ಲೂ ಕಲಿಯುವುದಕ್ಕೆ ಸಾಕಷ್ಟು ವಿಷಯಗಳು ಸಿಕ್ಕಿವೆ ಎನ್ನುತ್ತಾರೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು. ‘ಸಿನಿಮಾ ಮಂದಿಯಾದರೆ ಜನರಿಗೆ ಪರಿಚಿತರಾಗಿರುತ್ತಾರೆ. ಆದರೆ, ನಾನು ಅಪರಿಚಿತ. ಅವರೆಲ್ಲರ ನಡುವೆ ನಾನು ಕೊನೆಯವರೆಗೂ ಈ ಕಾರ್ಯಕ್ರಮದಲ್ಲಿ ಇರಬಹುದು ಎಂದು ಕನಸಿನಲ್ಲೂ ಊಹಿಸಿರಲಿಲ್ಲ. 43 ಲಕ್ಷ ಮತಗಳನ್ನು ಸಂಪಾದಿಸಿರುವುದು ನನ್ನ ಪಾಲಿಗೆ ಸಣ್ಣ ವಿಷಯವೇ ಅಲ್ಲ. ರನ್ನರ್ ಅಪ್ ಆದರೂ ನಾಡಿನ ಮೂಲೆ ಮೂಲೆ ತಲುಪಿದ್ದೇನೆ ಎಂಬ ಖುಷಿ ಇದೆ’ ಎಂಬುದು ಅವರ ಮಾತು.

    ರೇಸಿಂಗ್ ಅಕಾಡೆಮಿ ಪ್ಲಾನ್: ರೇಸಿಂಗ್ ಅಕಾಡೆಮಿಯೊಂದನ್ನು ಸ್ಥಾಪಿಸಬೇಕು ಎಂಬುದು ಅರವಿಂದ್ ಅವರ ಬಹುದಿನಗಳ ಕನಸಂತೆ. ‘2020ರಲ್ಲೇ ರೇಸಿಂಗ್ ಅಕಾಡೆಮಿ ಶುರು ಮಾಡುವ ಕೆಲಸ ಆರಂಭಿಸಿದ್ದೆ. ಇನ್ನೇನು ಅದರ ಕೆಲಸಗಳು ಶುರುವಾಗಬೇಕೆನ್ನುವಷ್ಟರಲ್ಲಿ ಲಾಕ್​ಡೌನ್ ಘೋಷಣೆ ಆಯಿತು. ಈ ವರ್ಷ ‘ಬಿಗ್ ಬಾಸ್’ಗೆ ಹೋಗಿದ್ದರಿಂದ ಸಾಧ್ಯವಾಗಲಿಲ್ಲ. ಇದೀಗ ರೇಸಿಂಗ್ ಅಕಾಡೆಮಿ ಪ್ಲಾನಿಂಗ್ ನಡೆಯುತ್ತಿದೆ. ಸದ್ಯ ರೇಸಿಂಗ್ ಕ್ಯಾಲೆಂಡರ್ ಹೇಗಿದೆ? ಯಾವ ದೇಶಗಳಲ್ಲಿ ಶೆಡ್ಯೂಲ್ ಆಗಿದೆ ಎಂಬುದನ್ನು ನೋಡಿಕೊಂಡು ಹೆಜ್ಜೆ ಇಡುವೆ’ ಎನ್ನುತ್ತಾರೆ ಅರವಿಂದ್.

    ದಿವ್ಯಾ ಒಳ್ಳೆಯ ಸ್ನೇಹಿತೆ

    ಮದುವೆ ನನ್ನ ವೈಯಕ್ತಿಕ ವಿಚಾರ; ಸೋತು ಗೆದ್ದ ಅರವಿಂದ್ದಿವ್ಯಾ ಉರುಡುಗ ಸಿಕ್ಕಿದ್ದಕ್ಕೆ ‘ಬಿಗ್ ಬಾಸ್’ ಜರ್ನಿ ಕಲರ್​ಫುಲ್ ಆಗಿದೆ ಎನ್ನುವ ಅರವಿಂದ್, ‘ದಿವ್ಯಾ ನನ್ನ ಪಾಲಿಗೆ ಒಳ್ಳೆಯ ಸ್ನೇಹಿತೆ ಮತ್ತು ಗೈಡ್. ಮನೆಯಿಂದ ಆಚೆ ಬಂದ ಬಳಿಕ ನಮ್ಮಿಬ್ಬರ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವದಂತಿಗಳು ಹರಿದಾಡಿವೆ. ಮದುವೆ, ನಿಶ್ಚಿತಾರ್ಥ … ಹೀಗೆ ಏನೆನೋ ಸುದ್ದಿಗಳಿವೆ. ಮದುವೆ ಎಂಬುದು ನನ್ನ ವೈಯಕ್ತಿಕ ವಿಚಾರ. ಹಾಗೇನಾದರೂ ಇದ್ದರೆ ನಾನೇ ಆ ವಿಚಾರವನ್ನು ಬಹಿರಂಗ ಪಡಿಸುತ್ತೇನೆ’ ಎನ್ನುತ್ತಾರೆ ಅರವಿಂದ್.

    ಸಿನಿಮಾ ಅವಕಾಶ ಸಿಕ್ಕರೆ ಬಿಡಲ್ಲ: ಅರವಿಂದ್ ಮತ್ತು ದಿವ್ಯಾ ಉರುಡುಗ ಅಭಿನಯದಲ್ಲಿ ‘ಅರಿವಿಯಾ’ ಎಂಬ ಚಿತ್ರ ಮಾಡುವುದಾಗಿ ಚಕ್ರವರ್ತಿ ಚಂದ್ರಚೂಡ್ ಈ ಹಿಂದೆ ಹೇಳಿದ್ದರು. ಸಿನಿಮಾದಲ್ಲಿ ನಟಿಸುವ ಕುರಿತು ಅರವಿಂದ್ ಅವರನ್ನು ಕೇಳಿದರೆ, ಯಾವುದೇ ಕೆಲಸ ಕೊಟ್ಟರೂ ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸ ಇದೆ ಎನ್ನುತ್ತಾರೆ. ‘ಸಿನಿಮಾ ಕ್ಷೇತ್ರದ ಜತೆಗಿನ ನಂಟು ಬೆಳೆದಿದೆ. ಸದ್ಯಕ್ಕೆ ಯಾವುದೂ ಅಂತಿಮವಾಗಿಲ್ಲ. ಒಂದಷ್ಟು ಸಿನಿಮಾ ಮಾತುಕತೆಗಳು ನಡೆಯುತ್ತಿವೆಯಷ್ಟೇ. ಒಳ್ಳೇ ಸಿನಿಮಾ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ’ ಎಂಬುದು ಅರವಿಂದ್ ನಿರ್ಧಾರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts