More

    ರಾಮಾಪುರ ಹೋಬಳಿಯಲ್ಲಿ ಗೋ ಶಾಲೆ ತೆರೆಯಿರಿ

    ಹನೂರು: ತಾಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಗೋ ಶಾಲೆ ತೆರೆಯುವಂತೆ ಸೋಮವಾರ ತಾಲೂಕು ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು.

    ಸಂಘದ ಅಧ್ಯಕ್ಷ ಅಮ್ಜಾದ್ ಖಾನ್ ಮಾತನಾಡಿ, ಈ ವರ್ಷ ಮಳೆಯಿಲ್ಲದ ಪರಿಣಾಮ ತಾಲೂಕಿನಲ್ಲಿ ಬರಗಾಲ ಆವರಿಸಿದ್ದು, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಉಲ್ಬಣಿಸಿದೆ. ಕೆಲ ರೈತರು ಹಣ ನೀಡಿ ಮೇವು ಖರೀದಿಸುತ್ತಿದ್ದಾರೆ. ಬಹುತೇಕ ರೈತರು ಜಾನುವಾರುಗಳಿಗೆ ಮೇವು ಪೂರೈಸಲು ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ದೂರಿದರು.

    ಬರಗಾಲ ಹಿನ್ನೆಲೆಯಲ್ಲಿ 3 ದಿನದ ಹಿಂದೆ ಜಿಲ್ಲಾಡಳಿತ ಕೌದಳ್ಳಿ, ಶೆಟ್ಟಳ್ಳಿ ಹಾಗೂ ಕುರಟ್ಟಿ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಗೋ ಶಾಲೆ ತೆರೆದು ಜಾನುವಾರುಗಳಿಗೆ ಮೇವು ಪೂರೈಸಲಾಗುತ್ತಿದೆ. ಆದರೆ ಹೆಚ್ಚು ನಾಟಿ ಹಸುಗಳನ್ನು ಹೊಂದಿರುವ ರಾಮಾಪುರ ಹೋಬಳಿಯ ಅಜ್ಜೀಪುರ, ಸೂಳೇರಿಪಾಳ್ಯ, ಮಾರ್ಟಳ್ಳಿ, ಹೂಗ್ಯಂ, ಮಿಣ್ಯಂ ಹಾಗೂ ದಿನ್ನಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಗೋ ಶಾಲೆ ತೆರೆದಿಲ್ಲ. ಇದರಿಂದ ಈ ಭಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಮನದಟ್ಟು ಮಾಡಿಕೊಂಡು ಈ ಭಾಗದಲ್ಲೂ ಗೋ ಶಾಲೆಯನ್ನು ತೆರೆಯುವುದರ ಮೂಲಕ ಮೇವು ಹಾಗೂ ಕುಡಿಯುವ ನೀರು ಒದಗಿಸಬೇಕು ಎಂದು ಮನವಿ ಮಾಡಿದರು.

    ರೈತ ಸಂಘದ ಮನವಿ ಆಲಿಸಿದ ತಹಸೀಲ್ದಾರ್, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸುವುದಾಗಿ ಭರವಸೆ ನೀಡಿದರು. ಸಂಘದ ಕಾರ್ಯದರ್ಶಿ ಬಸವರಾಜು, ಗ್ರಾಪಂ ಸದಸ್ಯ ಸೋಮಣ್ಣ, ಮುಖಂಡರಾದ ಜಯರಾಜು, ಪುಟ್ಟಸ್ವಾಮಿ, ಕೃಷ್ಣನಾಯ್ಕ, ಶ್ರೀನಿವಾಸ್, ರಾಜು, ನಾರಾಯಣಗೌಡ, ನಾಗಮಾದೇಗೌಡ, ಮುತ್ತುರಾಜು, ದೇವರಾಜು, ಪ್ರವೀಣ್‌ಕುಮಾರ್, ರಮೇಶ್ ಇನ್ನಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts