More

    ಆನ್‌ಲೈನ್‌ನಲ್ಲಿ ಮದರಸ ಶಿಕ್ಷಣ

    ಅನ್ಸಾರ್ ಇನೋಳಿ ಉಳ್ಳಾಲ

    ಲಾಕ್‌ಡೌನ್‌ನಿಂದ ಮದರಸ ಶಿಕ್ಷಣವೂ ಅಂತರ್ಜಾಲ ಮಯವಾಗಿದ್ದು, ಕರ್ನಾಟಕ, ಕೇರಳದ 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಶಿಕ್ಷಣ ಪಡೆಯಲಿದ್ದಾರೆ.

    ಕಳೆದ ವರ್ಷದ ಲಾಕ್‌ಡೌನ್ ಸಂದರ್ಭ ಶಾಲೆಗಳು ಆನ್‌ಲೈನ್ ಶಿಕ್ಷಣಕ್ಕೆ ಆದ್ಯತೆ ನೀಡಿದ್ದರಿಂದ ಮಕ್ಕಳಿಗೆ ಮೊಬೈಲ್ ಕೊಡುವುದು ಅನಿವಾರ್ಯವಾಯಿತು. ಶಾಲೆ ಶುರುವಾಗದೆ ಮದರಸವನ್ನೂ ಆರಂಭಿಸುವಂತಿರಲಿಲ್ಲ. ಈ ಸಂದರ್ಭ ಸಮಸ್ತ ಕೇರಳ ಜಂಯಿಯತುಲ್ ಉಲಮಾ ತನ್ನ ಸಿಲೆಬಸ್‌ನಡಿ ನಡೆಯುತ್ತಿರುವ ಮದರಸಗಳ ಅಧ್ಯಾಪಕರಿಗೆ ತರಬೇತಿ ನೀಡಿ ಪ್ರಥಮ ಬಾರಿ ಆನ್‌ಲೈನ್ ಶಿಕ್ಷಣ ಆರಂಭಿಸಿತು. ಈ ವರ್ಷ ಸಮಸ್ತ ಸಿಲೆಬಸ್ ಅಡಿಯಲ್ಲಿ ಮದರಸ ಶಿಕ್ಷಣ ಜೂನ್ 1ರಿಂದಲೇ ಆರಂಭವಾಗಿದೆ. ಸಕಲ ಸಿದ್ಧತೆಯೊಂದಿಗೆ ಪರಿಣಾಮಕಾರಿಯಾಗಿ ಆನ್‌ಲೈನ್ ತರಗತಿ ನಡೆಯಲಿದ್ದು, ಒಂದನೇ ತರಗತಿ ದಾಖಲಾತಿಯೊಂದಿಗೆ ಮಕ್ಕಳು ಪುಸ್ತಕ ಖರೀದಿಸುವುದೂ ಕಡ್ಡಾಯ.

    ಧರ್ಮಗುರುಗಳಿಗೂ ಅನಿವಾರ್ಯ ಆಧುನಿಕತೆ: ಹಿಂದೆ ಧಾರ್ಮಿಕ ಶಿಕ್ಷಣದತ್ತ ಒಲವು ತೋರಿಸಿ ಧರ್ಮಗುರುವಾದವರು ಲೌಕಿಕ ಶಿಕ್ಷಣ ಪದ್ಧತಿಯಿಂದ ದೂರವೇ ಇರುತ್ತಿದ್ದರು. ಕ್ರಮೇಣ ಕನಿಷ್ಠ ಮಟ್ಟದಲ್ಲಿ ಲೌಕಿಕ ಶಿಕ್ಷಣ ಪಡೆಯಲು ಆರಂಭಿಸಿದರು. ಪ್ರಸ್ತುತ ಆಧುನಿಕತೆಗೆ ತಕ್ಕಂತೆ ಕಂಪ್ಯೂಟರ್, ಆಂಗ್ಲ ಭಾಷೆಯಲ್ಲಿ ಲೌಕಿಕ ಮತ್ತು ಧಾರ್ಮಿಕ ಶಿಕ್ಷಣ ಪಡೆದ ಯುವ ಧರ್ಮಗುರುಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇದರ ಪ್ರಭಾವದಿಂದ ಆಂಗ್ಲ ಭಾಷೆಯಲ್ಲೂ ಧಾರ್ಮಿಕ ಶಿಕ್ಷಣ ನೀಡುವ ವ್ಯವಸ್ಥೆ ಇದೆ. ಇದರ ಮಧ್ಯೆಯೂ ಹಿಂದೆ ಧರ್ಮಗುರು ಆದವರು ಅನಿವಾರ್ಯವಾಗಿ ಅಂತರ್ಜಾಲ ಶಿಕ್ಷಣ ಪಡೆದಿದ್ದಾರೆ. ಒಂದು ವೇಳೆ ಇಂಥ ಶಿಕ್ಷಣಕ್ಕೆ ಒಗ್ಗದವರಿಗೆ ಕೆಲಸ ಇಲ್ಲ ಎಂಬ ಸ್ಥಿತಿ ಬಂದೊದಗಿದೆ.

    12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು!: ಕೇರಳ ಮತ್ತು ಕರ್ನಾಟಕದಲ್ಲಿ ಸಮಸ್ತ ಸಿಲೆಬಸ್‌ನಡಿ 10,291 ಮದರಸಗಳಿದ್ದು, 12 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು, ಒಂದು ಲಕ್ಷಕ್ಕೂ ಮಿಕ್ಕಿ ಅಧ್ಯಾಪಕರಿದ್ದಾರೆ. ಇವರೆಲ್ಲರೂ ಆನ್‌ಲೈನ್ ಶಿಕ್ಷಣಕ್ಕೆ ಹೊಂದಿಕೊಳ್ಳಲಿದ್ದಾರೆ.

    ಮಕ್ಕಳು ಮದರಸಕ್ಕೆ ಹೋಗುವುದು ಕಷ್ಟ ಎಂಬ ನೆಲೆಯಲ್ಲಿ ಆನ್‌ಲೈನ್ ಶಿಕ್ಷಣ ವ್ಯವಸ್ಥೆ ಜಾರಿಗೆ ತಂದಿದ್ದು, ಅಧ್ಯಾಪಕರು ಉತ್ತಮ ರೀತಿಯಲ್ಲಿ ಜಾರಿಗೆ ತರಬೇಕು. ಜಮಾಅತರು ಅಧ್ಯಾಪಕರಿಗೆ ಊಟೋಪಚಾರ, ಸೂಕ್ತ ಸಮಯದಲ್ಲಿ ವೇತನ ನೀಡಬೇಕು. ಮದರಸಕ್ಕೆ ಮಕ್ಕಳು ಬರುತ್ತಿಲ್ಲವೆಂದು ಅಧ್ಯಾಪಕರನ್ನು ಕೆಲಸದಿಂದ ತೆಗೆಯಬಾರದು. ಮಕ್ಕಳ ಶಿಕ್ಷಣದ ವಿಚಾರದಲ್ಲಿ ಪಾಲಕರೂ ಕಡೆಗಣಿಸಬಾರದು.

    ಶೈಖುನಾ ಜಿಫ್ರಿ ಮುತ್ತುಕೋಯ ತಂಙಳ್
    ಅಧ್ಯಕ್ಷರು, ಸಮಸ್ತ ಕೇರಳ ಜಂಇಯಯತುಲ್ ಮುಅಲ್ಲಿಮೀನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts