More

    ಆನ್​ಲೈನ್ ಕಲಿಕೆ ನಾಟ್ ರೀಚೆಬಲ್ !

    ಯಲ್ಲಾಪುರ: ಕರೊನಾ, ಲಾಕ್​ಡೌನ್ ಕಾರಣಕ್ಕಾಗಿ ಶಾಲೆ-ಕಾಲೇಜ್​ಗಳು ಮುಚ್ಚಿದ್ದು, ಸದ್ಯ ಆನ್​ಲೈನ್ ಶಿಕ್ಷಣ ಜಾರಿಯಲ್ಲಿದೆ. ಆದರೆ, ತಾಲೂಕಿನ ಬಹುತೇಕ ಗ್ರಾಮೀಣ ಭಾಗಗಳಲ್ಲಿ ನೆಟ್​ವರ್ಕ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣದಿಂದಲೂ ವಂಚಿತರಾಗುವ ಸ್ಥಿತಿ ಬಂದಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ಆನ್​ಲೈನ್ ಕ್ಲಾಸ್​ಗಾಗಿ ನೆಟ್​ವರ್ಕ್ ಹುಡುಕಲು ಬೆಟ್ಟ-ಗುಡ್ಡ ಅಲೆಯುವಂತಾಗಿದೆ.
    ತಾಲೂಕಿನ ವಜ್ರಳ್ಳಿ, ಕಡ್ಲೆಮನೆ, ಶೆಳೆಮನೆ, ಮಾಗೋಡ, ನಂದೊಳ್ಳಿ, ಲಾಲಗುಳಿ ಸೇರಿದಂತೆ ಬಹುತೇಕ ಗ್ರಾಮೀಣ ಭಾಗಗಳಲ್ಲಿ ನೆಟ್​ವರ್ಕ್ ಸಮಸ್ಯೆಯಿದೆ. ತೇಲಂಗಾರ, ಬಿಸಗೋಡ ಭಾಗದಲ್ಲಿ ಮೊಬೈಲ್ ಟವರ್ ಇದ್ದರೂ, ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಇಲ್ಲದೆ ಟವರ್ ಕಾರ್ಯನಿರ್ವಹಿಸುವುದಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗುವುದೆ ಹೆಚ್ಚಾಗಿರುವುದರಿಂದ, ಆ ಭಾಗದ ಜನರಿಗೆ ಟವರ್ ಇದ್ದರೂ ನೆಟ್​ವರ್ಕ್ ಭಾಗ್ಯ ಇಲ್ಲ.
    ಆನ್​ಲೈನ್ ಕ್ಲಾಸ್​ಗಾಗಿ ವಿದ್ಯಾರ್ಥಿಗಳು, ಹೊರ ಊರುಗಳಲ್ಲಿ ನೆಲೆಸಿ, ಸದ್ಯ ಊರಿನಲ್ಲಿರುವ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಗಾಗಿ ಕಾಡಿನಲ್ಲಿ ಕುಳಿತಿರುವ ದೃಶ್ಯ ಸಾಮಾನ್ಯವಾಗಿದೆ. ಕಾಡಿನಲ್ಲಿ ಕಿ.ಮೀಗಟ್ಟಲೆ ಅಲೆದು ನೆಟ್​ವರ್ಕ್ ಸಿಗುವ ಸ್ಥಳವೊಂದನ್ನು ಖಾತ್ರಿಪಡಿಸಿಕೊಂಡು, ಅಲ್ಲಿ ಮಳೆ-ಬಿಸಿಲಿನಿಂದ ರಕ್ಷಣೆಗಾಗಿ ಸಣ್ಣ ಟೆಂಟ್ ಒಂದನ್ನು ನಿರ್ವಿುಸಿಕೊಂಡು ವಿದ್ಯಾಥಿಗಳು, ಉದ್ಯೋಗಿಗಳು ತಮ್ಮ ಕಾರ್ಯಕ್ಕೆ ಅನುಕೂಲ ಮಾಡಿಕೊಳ್ಳುತ್ತಿದ್ದಾರೆ.
    ಶೆಳೆಮನೆ, ಕಡ್ಲೆಮನೆ, ಬಿಡಾರ ಗ್ರಾಮದಲ್ಲಿ ಸಮೀಪದ ಗುಡ್ಡ ಹತ್ತಿ ಅಲ್ಲಿ ಕುಳಿತು ಮೊಬೈಲ್ ನೆಟ್​ವರ್ಕ್ ಸಂಪರ್ಕ ಸಾಧಿಸಿ, ಶಿಕ್ಷಣ ಸಂಸ್ಥೆಗಳು ಕಳಿಸಿರುವ ಪಾಠಗಳನ್ನು ಓದುತ್ತಿದ್ದಾರೆ. ಇದರಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಸಹ ಸೇರಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಮೊಬೈಲ್ ನೆಟವರ್ಕ್ ಇರುವ ಪಟ್ಟಣ ಪ್ರದೇಶಕ್ಕೆ ಬಂದು ಶಿಕ್ಷಣ ಪಡೆಯಬೇಕೆಂದರೆ ಕೂಡ ಬಸ್ಸುಗಳ ಓಡಾಟವಿಲ್ಲ. ಹೀಗಾಗಿ ನೆಟ್​ವರ್ಕ್ ಪಡೆದುಕೊಳ್ಳಲು ಸಾಧ್ಯವಾಗದಂತಹ ಸ್ಥಿತಿಯ ಮಧ್ಯೆ, ಅತ್ಯಂತ ಕಷ್ಟಪಟ್ಟು ಮಕ್ಕಳು ಆನಲೈನ್ ಶಿಕ್ಷಣ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲವಿರುವವರ ಮನೆಗಳಿಗೆ ಒ.ಎಫ್.ಸಿ ಇಂಟರ್ನೆಟ್ ಸಂಪರ್ಕ ಸಾಧ್ಯವಾಗುತ್ತಿದ್ದು, ಮಧ್ಯಮ ಹಾಗೂ ಬಡ ಕುಟುಂಬದ ಮಕ್ಕಳು ಒ.ಎಫ್.ಸಿ ಸಂಪರ್ಕಕ್ಕೆ ಅತಿ ಹೆಚ್ಚು ಬೆಲೆ ತೆರಲು ಸಾಧ್ಯವಾಗುತ್ತಿಲ್ಲ.

    ಈಗಾಗಲೇ ಶಾಲೆ-ಕಾಲೇಜ್​ಗಳು ಬಂದ್ ಆಗಿರುವುದರಿಂದ ನೇರ ಶಿಕ್ಷಣ ಸಿಗದೆ ನಮ್ಮ ಭವಿಷ್ಯ ಏನು ಎಂಬ ಚಿಂತೆ ಕಾಡುತ್ತಿದೆ. ಆನ್​ಲೈನ್ ಮೂಲಕವಾದರೂ ಕಲಿಕಾ ಚಟುವಟಿಕೆಗಳನ್ನು ನಡೆಸುವುದಕ್ಕೆ ಸಾಧ್ಯವಾಗಬಹುದೆಂದುಕೊಂಡರೆ ನೆಟ್​ವರ್ಕ್ ಸಮಸ್ಯೆ ನಮಗೆ ದೊಡ್ಡ ಸವಾಲಾಗಿದೆ. ಈ ಅವ್ಯವಸ್ಥೆ ನಮ್ಮ ಭವಿಷ್ಯದ ಮೇಲೆ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.
    | ರಾಜೇಶ ಗಾಂವ್ಕಾರ ತೇಲಂಗಾರ, ವಿದ್ಯಾರ್ಥಿ

    ಗ್ರಾಮೀಣ ಭಾಗದ ನೆಟ್​ವರ್ಕ್ ಸಮಸ್ಯೆ ಗಮನಕ್ಕೆ ಬಂದಿದೆ. ಈ ಕುರಿತು ನಮ್ಮ ಮೇಲಧಿಕಾರಿಗಳಿಗೂ ಮಾಹಿತಿ ನೀಡಲಾಗಿದೆ. ಟವರ್ ಗಳು ವಿದ್ಯುತ್ ವ್ಯತ್ಯಯವಾದಾಗಲೂ ಸರಿಯಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಬ್ಯಾಕಪ್ ಬ್ಯಾಟರಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಅದಕ್ಕಾಗಿ ಈಗಾಗಲೇ ಪ್ರಕ್ರಿಯೆಗಳು ಆರಂಭವಾಗಿವೆ.
    | ನಿತಿನ್, ಬಿಎಸ್​ಎನ್​ಎಲ್ ಜೆಟಿಒ, ಯಲ್ಲಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts