More

    ಕರೊನಾ ಮಧ್ಯೆ ಆನ್‌ಲೈನ್ ವಂಚನೆ ಹೆಚ್ಚಳ

    ಹರೀಶ್ ಮೋಟುಕಾನ ಮಂಗಳೂರು

    ಕರೊನಾ ಲಾಕ್‌ಡೌನ್ ನಡುವೆ ಬ್ಯಾಂಕ್ ಖಾತೆಯಲ್ಲಿರುವ ಹಣವೂ ವಂಚಕರ ಪಾಲಾಗುವ ಭೀತಿ ಎದುರಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಕಳೆದ 20 ದಿನಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ. ಹಲವು ಮಂದಿ ಮರ್ಯಾದೆಗೆ ಅಂಜಿ ದೂರು ನೀಡುವ ಗೋಜಿಗೆ ಹೋಗಿಲ್ಲ.
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಪ್ರಕರಣ ದಾಖಲಾಗಿದೆ. ‘ನಿಮ್ಮ ಖಾತೆಗೆ ಹಣ ಬಂದಿದ್ದು, ಒಟಿಪಿ ಸಂಖ್ಯೆ ನೀಡಿ’ ಎಂದು ಕೇಳಲಾಗುತ್ತದೆ. ವಂಚಕರ ಮಾತನ್ನು ನಂಬಿ ಒಟಿಪಿ ಸಂಖ್ಯೆ ನೀಡಿದರೆ ಕ್ಷಣ ಮಾತ್ರದಲ್ಲಿ ಖಾತೆಯಲ್ಲಿದ್ದ ಹಣ ಡ್ರಾ ಆಗುತ್ತದೆ. ನಾಲ್ಕೈದು ದಿನಗಳ ಅವಧಿಯಲ್ಲಿ ಕಡಬ ಕೋಡಿಂಬಾಳ ಗ್ರಾಮದ ನಿವಾಸಿಯೊಬ್ಬರು 99,900 ರೂ, ಬಂಟ್ವಾಳ ಅರಳ ನಿವಾಸಿ 10 ಸಾವಿರ ರೂ, ಉಪ್ಪಿನಂಗಡಿಯ ವ್ಯಕ್ತಿಯೊಬ್ಬರು 15,999 ರೂ.ವನ್ನು ಇದೇ ರೀತಿ ಕಳೆದುಕೊಂಡಿದ್ದಾರೆ.

    ಉಡುಪಿ ಜಿಲ್ಲೆಯಲ್ಲಿ 5 ವಂಚನೆ ಪ್ರಕರಣಗಳು ದಾಖಲಾಗಿವೆ. ಒಟ್ಟು ಒಂದು ಲಕ್ಷ ರೂ.ವನ್ನು ಕಳೆದುಕೊಂಡಿದ್ದಾರೆ. 8 ಮಂದಿ ಎಚ್ಚೆತ್ತುಕೊಂಡು ಕರೆ ಮಾಡಿದವರನ್ನು ವಿಚಾರಿಸಿ, ಅವರ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
    ಹಲವು ಮಂದಿಗೆ ಪ್ರತಿ ದಿನ ಇಂತಹ ಕರೆಗಳು ಬರುತ್ತಿವೆ. ಅವರನ್ನು ವಿಚಾರಿಸಿದಾಗ ಕರೆ ಕಟ್ ಮಾಡುತ್ತಾರೆ. ಬಳಿಕ ಆ ಸಂಖ್ಯೆಯ ಮೊಬೈಲ್ ನಂಬರ್ ಸ್ವಿಚ್ಡ್‌ಆಫ್ ಆಗುತ್ತದೆ. ಇಂತಹ ವಂಚಕರನ್ನು ಪತ್ತೆ ಮಾಡಲು ಹಲವು ಮಂದಿ ಪೊಲೀಸರ ಮೊರೆ ಹೋಗಿದ್ದಾರೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

    ಮದ್ಯ ಸರಬರಾಜು ನೆಪದಲ್ಲಿ ವಂಚನೆ
    ಲಾಕ್‌ಡೌನ್‌ನಿಂದ ಮದ್ಯ ಮಾರಾಟ ಕಳೆದ 22 ದಿನಗಳಿಂದ ಬಂದ್ ಆಗಿದೆ. ಇದನ್ನೇ ವಂಚಕರು ಬಂಡವಾಳವನ್ನಾಗಿಸಿಕೊಂಡಿದ್ದಾರೆ. ವೈನ್ ಶಾಪ್‌ನ ಹೆಸರು ಹೇಳಿಕೊಂಡು ಆನ್‌ಲೈನ್ ಮೂಲಕ ಹಣ ಪಾವತಿಸಿದರೆ ನಿಮ್ಮ ವಿಳಾಸಕ್ಕೆ ಮದ್ಯ ಸರಬರಾಜು ಮಾಡುತ್ತೇವೆ ಎಂದು ಕರೆ ಮಾಡಿ ನಂಬಿಸಿದ್ದಾರೆ. ವಂಚಕರನ್ನು ನಂಬಿ ಹಣ ಪಾವತಿಸಿದವರು ಮದ್ಯವೂ ಇಲ್ಲದೆ ಹಣವೂ ಇಲ್ಲದೆ ವಂಚನೆಗೊಳಗಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ನಕಲಿ ವಿಳಾಸ, ಮಾಹಿತಿ ನೀಡಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

    ದೇಣಿಗೆ ನೀಡುವಂತೆ ನಕಲಿ ಕರೆ
    ಕರೊನಾ ಹಿನ್ನೆಲೆಯಲ್ಲಿ ಪ್ರಧಾನಿ ಹಾಗೂ ಸಿಎಂ ಪರಿಹಾರ ನಿಧಿಗೆ ದಾನಿಗಳು ಹಣ ಕಳುಹಿಸುತ್ತಿದ್ದು, ಈ ಸಂದರ್ಭವನ್ನು ವಂಚಕರು ದುರುಪಯೋಗ ಮಾಡುತ್ತಿದ್ದಾರೆ. ನಕಲಿ ಬ್ಯಾಂಕ್ ಖಾತೆಗಳ ವಿವರ ನೀಡಿ ಹಣವನ್ನು ತಮ್ಮ ವೈಯುಕ್ತಿಕ ಖಾತೆಗಳಿಗೆ ವರ್ಗಾಯಿಸುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಗೆ ದೇಣಿಗೆ ನೀಡಬೇಕು ಎಂದು ನಕಲಿ ಸಂಸ್ಥೆಗಳ ಹೆಸರಿನಲ್ಲಿ ಕರೆ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕಿಸುತ್ತಿರುವುದು ಕಂಡು ಬರುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಆರ್ಥಿಕವಾಗಿ ಹಿಂದುಳಿದವರ ಖಾತೆಗಳಿಗೆ ಜನ ಧನ ಯೋಜನೆ ಮೂಲಕ ಹಣ ಜಮೆ ಮಾಡಿದೆ. ವಂಚಕರು ಸಾರ್ವಜನಿಕರಿಗೆ ವಿವಿಧ ಆಮಿಷ ಒಡ್ಡಿ ಅವರ ಬ್ಯಾಂಕ್ ಖಾತೆಗಳ ವಿವರ ಮತ್ತು ಗೌಪ್ಯ ಮಾಹಿತಿ ಪಡೆದು ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ.

    ಎಚ್ಚರ ವಹಿಸಬೇಕಾದ ಅಂಶ
    * ಬ್ಯಾಂಕ್ ಮಾಹಿತಿ, ಇ-ಮೇಲ್ ಪಾಸ್‌ವರ್ಡ್, ಒಟಿಪಿ ಇತರರಿಗೆ ನೀಡಬೇಡಿ.
    * ಸಾಮಾಜಿಕ ಜಾಲತಾಣ, ಇ-ಮೇಲ್, ಮೊಬೈಲ್ ಸಂದೇಶಗಳಿಗೆ ವೈಯುಕ್ತಿಕ ಮಾಹಿತಿ ಹಂಚಬೇಡಿ.
    * ಬಹುಮಾನ, ಹಣ ಬಂದಿದೆ ಎನ್ನುವ ಸಂದೇಶ ನಂಬಬೇಡಿ.

    ಲಾಕ್‌ಡೌನ್ ಅವಧಿಯಲ್ಲಿ ಆನ್‌ಲೈನ್ ವಂಚನೆ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಸಾರ್ವಜನಿಕರು ಬ್ಯಾಂಕ್ ಖಾತೆ ವಿವರ, ಗೌಪ್ಯ ಮಾಹಿತಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ನಕಲಿ ಖಾತೆಗಳಿಗೆ ದೇಣಿಗೆ ವರ್ಗಾಯಿಸಬಾರದು. ಸಂದೇಹಗಳಿದ್ದರೆ ಸಂಬಂಧಪಟ್ಟ ಬ್ಯಾಂಕ್‌ಗಳನ್ನು ಸಂಪರ್ಕಿಸಿ. ಪರಿಹಾರ ನಿಧಿಗೆ ಯಾವುದೇ ವ್ಯಕ್ತಿ, ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಅವಕಾಶವಿಲ್ಲ.
    ಲಕ್ಷ್ಮೀ ಪ್ರಸಾದ್
    ಎಸ್ಪಿ, ದಕ್ಷಿಣ ಕನ್ನಡ

    ಉಡುಪಿ ಜಿಲ್ಲೆಯಲ್ಲಿ ಕಳೆದ 20 ದಿನಗಳ ಅವಧಿಯಲ್ಲಿ 5 ವಂಚನೆ ಪ್ರಕರಣ ದಾಖಲಾಗಿವೆ. ಇಲ್ಲಿನ ಜನರು ಎಚ್ಚೆತ್ತುಕೊಂಡು ಕರೆ ಮಾಡಿದವರನ್ನೇ ಪ್ರಶ್ನಿಸುತ್ತಿದ್ದಾರೆ. ವಂಚನೆ ಕರೆ ಬಂದಿರುವ 8 ಮಂದಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರು ಈ ನಿಟ್ಟಿನಲ್ಲಿ ಇನ್ನಷ್ಟು ಜಾಗೃತರಾಗಬೇಕು.
    ಸೀತಾರಾಮ
    ಇನ್‌ಸ್ಪೆಕ್ಟರ್, ಸೆನ್ ಅಪರಾಧ ಠಾಣೆ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts