More

    ಈರುಳ್ಳಿ ಮಾರಾಟಕ್ಕೆ ಸಂಕಷ್ಟ ತಂದ ಕರೊನಾ

    ಮುರಗೋಡ: ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಈರುಳ್ಳಿ ಬೆಳೆದ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಗ್ರಾಮದ ರೈತ ರುದ್ರಪ್ಪ ತೋಟಗಿ ಎಂಬುವರು ತಮ್ಮ 2 ಎಕರೆ ಜಮೀನಿನಲ್ಲಿ ಸುಮಾರು 180 ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದಾರೆ. ಕಳೆದ ವಾರದಿಂದ ಆಗಾಗ ಬಿರುಗಾಳಿ ಸಹಿತ ಮಳೆ ಸುರಿದಿದ್ದರಿಂದ 20 ಕ್ವಿಂಟಾಲ್‌ಗೂ ಅಧಿಕ ಈರುಳ್ಳಿ ಹೊಲದಲ್ಲಿಯೇ ಕೊಳೆತಿದೆ.
    ವ್ಯರ್ಥವಾಯಿತು ಶ್ರಮ: ಬೀಜ, ಗೊಬ್ಬರ, ಕ್ರಿಮಿನಾಶಕ ಮತ್ತು ಕೂಲಿ ಕಾರ್ಮಿಕರಿಗೆ ದಿನಗೂಲಿ ಸೇರಿ ಪ್ರತಿ ಎಕರೆಗೆ 25 ಸಾವಿರ ರೂ. ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಖರೀದಿದಾರರು ಕ್ವಿಂಟಾಲ್‌ಗೆ 150- 200 ರೂ. ಕೇಳುತ್ತಿದ್ದಾರೆ. ಕೊಯ್ಲು ಮಾಡಿ ಚೀಲ ತುಂಬಿ ಹೊಲದಿಂದ ಮಾರುಕಟ್ಟೆಗೆ ಸಾಗಣೆ ಮಾಡಲು ಕ್ವಿಂಟಾಲ್‌ಗೆ 300 ರೂ.ಗೂ ಹೆಚ್ಚು ಖರ್ಚಾಗಿದೆ. ಈ ದರದಲ್ಲಿ ನಮಗೆ ಲಾಭ ಸಿಗಲು ಸಾಧ್ಯವಿಲ್ಲ. ವರ್ಷದ ಶ್ರಮ ವ್ಯರ್ಥವಾಯಿತು ಎಂದು ರೈತ ರುದ್ರಪ್ಪ ಅಳಲು ತೋಡಿಕೊಂಡಿದ್ದಾರೆ.

    ಗ್ರಾಮದ ಚಂದ್ರಪ್ಪ ಕಾಜೋಳ ಒಂದು ಎಕರೆ ಜಮೀನಿನಲ್ಲಿ 70 ಕ್ವಿಂಟಾಲ್, ಬಸವರಾಜ ಮೇದಾರ 80 ಕ್ವಿಂಟಾಲ್, ಲಿಂಬೆಪ್ಪ ಅಂಗಡಿ 150 ಕ್ವಿಂಟಾಲ್ ಈರುಳ್ಳಿ ಬೆಳೆದಿದ್ದಾರೆ. ರೈತರು ಖರ್ಚು ಮಾಡಿದಷ್ಟು ಹಣ ದೊರಕಬೇಕಾದರೆ ಸರ್ಕಾರ ಕನಿಷ್ಠ ಮೂರು ಸಾವಿರ ರೂ. ಬೆಲೆ ನೀಡಿ ಈರುಳ್ಳಿ ಖರೀದಿಸಬೇಕು. ಇಲ್ಲವಾದರೆ ಸಂಕಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ರೈತ ಲಿಂಬೆಪ್ಪ ಅಂಗಡಿ.

    ಕೂಲಿಯೂ ಗಿಟ್ಟುತ್ತಿಲ್ಲ: ಈರುಳ್ಳಿ ಬೆಳೆಯಲು ಸಾವಿರಾರು ರೂ. ಖರ್ಚು ಮಾಡಿದ್ದೇವೆ. ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಯಲ್ಲಿ ಈಗ ಈರುಳ್ಳಿ ಕೇಳುವವರಿಲ್ಲ. ಹೆಚ್ಚಿನ ಇಳುವರಿ ಬಂದ ಕಾರಣ ನೇರ ಮಾರಾಟಕ್ಕೂ ಸಾಧ್ಯವಾಗುತ್ತಿಲ್ಲ. ಈಗಿನ ದರಕ್ಕೆ ಮಾರಾಟ ಮಾಡಿದರೆ ಕೊಯ್ಲು ಮಾಡಿದ ಕೂಲಿ ಮತ್ತು ಮಾರುಕಟ್ಟೆಗೆ ಸಾಗಣೆ ಮಾಡಲು ಮಾಡಿದ ಖರ್ಚು ಸಹ ಕೈ ಸೇರುವುದಿಲ್ಲ ಎನ್ನುತ್ತಾರೆ ಈರುಳ್ಳಿ ಬೆಳೆಗಾರರು.

    ರೈತರ ಬೆಳೆ ಮಾರಾಟಕ್ಕೆ ತೊಂದರೆಯಾಗಿರುವ ಬಗ್ಗೆ ಸೋಮವಾರ ಹಿರಿಯ ಅಧಿಕಾರಿ ಗಳೊಂದಿಗೆ ಏರ್ಪಡಿಸಲಾದ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಚರ್ಚಿಸಲಾಗುವುದು. ರೈತರಿಗೆ ನ್ಯಾಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
    | ರಾಜಶೇಖರ ಯರಗಟ್ಟಿ ಮುರಗೋಡ ತೋಟಗಾರಿಕೆ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts