More

    ಧರ್ಮ ಮಾರ್ಗದಲ್ಲಿ ನಡೆದು ಜನ್ಮ ಸಾರ್ಥಕ ಪಡಿಸಿಕೊಳ್ಳಬೇಕು

    ತಿ.ನರಸೀಪುರ : ಗುರುಗಳು ನಮಗೆಲ್ಲಾ ಯಾವ ಧರ್ಮ ಮಾರ್ಗವನ್ನು ಉಪದೇಶ ಮಾಡಿದ್ದಾರೋ ಅದನ್ನು ಶ್ರದ್ಧೆಯಿಂದ ಅನುಷ್ಠಾನ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಶೃಂಗೇರಿ ಶಾರದ ಪೀಠದ ಗುರು ಕರ ಕಮಲ ಸಂಜಾತ ಶ್ರೀ ವಿಧು ಶೇಖರ ಭಾರತೀ ಶ್ರೀಗಳು ಹೇಳಿದರು.


    ಹಳೇ ತಿರುಮಕೂಡಲಿನ ಶೃಂಗೇರಿ ಶಂಕರ ಮಠದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಿ ಅವರು ಮಾತನಾಡಿದರು.


    ಪ್ರಾಚೀನ ಕಾಲದಿಂದಲೂ ಈ ಪ್ರಾಂತ್ಯದಲ್ಲಿರುವ ಆಸ್ತಿಕ ಮಹಾಜನರು ಮಠದೊಂದಿಗೆ ಗುರು-ಶಿಷ್ಯ ಸಂಬಂಧವಿರಿಸಿಕೊಂಡಿದ್ದಾರೆ. ಇಲ್ಲಿನವರು ಶೃಂಗೇರಿಗೆ ಬಂದು ಗುರುದರ್ಶನ ಮಾಡುವ, ಗುರುಗಳು ತಮ್ಮ ಯಾತ್ರಾ ಕಾಲದಲ್ಲಿ ಇಲ್ಲಿಗೆ ಆಗಮಿಸಿ ಶಿಷ್ಯರಿಗೆ ಅನುಗ್ರಹ ಮಾಡುವುದು ಅನಾದಿ ಕಾಲದಿಂದಲೂ ಬೆಳೆದು ಬಂದ ಸಂಪ್ರದಾಯವಾಗಿದೆ ಎಂದರು.


    ಪವಿತ್ರವಾದ ಕಾವೇರಿ ನದಿ ತೀರದಲ್ಲಿ ಶಂಕರ ಮಠವಿದೆ. ಹಾಗಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ಆಗಬೇಕಿದೆ. ಅಭಿವೃದ್ಧಿಯಾಗಬೇಕೆಂಬ ಸಂಕಲ್ಪ, ಪ್ರಾರ್ಥನೆ ಹಿಂದಿನಿಂದಿಲೂ ನಿಮ್ಮ ಮನದಲ್ಲಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯ ನೆರವೇರಲಿದೆ. ಅದಕ್ಕಾಗಿ ಬೇಕಾದ ವ್ಯವಸ್ಥೆ, ಪ್ರಕ್ರಿಯೆಗಳು ಈಶ್ವರನ ಅನುಗ್ರಹದಿಂದ ಆಗಲಿ ಎಂದು ಪ್ರಾರ್ಥನೆ ನಿಮ್ಮದೆಲ್ಲರದಾಗಲಿ ಎಂದರು.


    ವಿಶೇಷವಾಗಿ ಎಲ್ಲ ಆಸ್ತಿಕರ ಶ್ರದ್ಧಾ ಕೇಂದ್ರವಾಗಿರುವ ಈ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯಾಗಿ ಭಗವದಾರಾಧನೆ, ಧಾರ್ಮಿಕ ಅನುಷ್ಠಾನಗಳು, ಅದ್ವೈತ ತತ್ವದ ಪ್ರಸಾರ ಇತ್ಯಾದಿ ಕಾರ್ಯಗಳು ನಡೆಯಲಿವೆ ಎಂದ ಶ್ರೀಗಳು, ವಿಶಿಷ್ಟವಾದ ಪ್ರದೇಶದಲ್ಲಿರುವ ನೀವೆಲ್ಲರೂ ಧರ್ಮ ಶ್ರದ್ಧೆಯನ್ನು, ಗುರುಭಕ್ತಿಯನ್ನು ಹೊಂದಬೇಕು ಎಂದು ಸಲಹೆ ನೀಡಿದರು.

    ಜೀರ್ಣೋದ್ಧಾರ ಕಾರ್ಯ ಅನಿವಾರ್ಯ! :
    ಕಾವೇರಿ ನದಿ ತೀರದಲ್ಲಿರುವ ಕ್ಷೇತ್ರದಲ್ಲಿ ಶೃಂಗೇರಿ ಪರಂಪರೆಗೆ ಸಂಬಂಧವಿರುವ ಗುರುಗಳ ಅಧಿಷ್ಠಾನ ಮಂದಿರವಿದೆ. ಶಂಕರರ ಸಾನಿಧ್ಯವಿದೆ ಇವೆಲ್ಲದರ ಜೀರ್ಣೋದ್ಧಾರ ಶೀಘ್ರವಾಗಿ ಆಗಿ ಇದು ವಿಶಿಷ್ಠವಾದ ದೇವತಾ ಸನ್ನಿಧಿಯಾಗಲಿದೆ. ಧಾರ್ಮಿಕ ಆಚರಣೆಗಳು,ಧರ್ಮಷ್ಠಾನಾದಿಗಳು ಇನ್ನಷ್ಟು ಹೆಚ್ವಿನ ರೀತಿಯಲ್ಲಿ ಅನುಷ್ಠಾನ ಗೊಳ್ಳಬೇಕಾದರೆ ಜೀರ್ಣೋದ್ಧಾರ ಕಾರ್ಯ ಅನಿವಾರ್ಯ. ಹಾಗಾಗಿ ಎಲ್ಲ ಕಾರ್ಯಗಳು ನಡೆದು ಇಲ್ಲಿ ವಿಶಿಷ್ಠವಾದ ರೀತಿಯಲ್ಲಿ ಧರ್ಮ ಪ್ರಚಾರವಾಗಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶ್ರೀಗಳು ನುಡಿದರು.


    ಗುರುವಂದನಾ ಕಾರ್ಯದಲ್ಲಿ ನೂರಾರು ಭಕ್ತಾಧಿಗಳು, ಶಿಷ್ಯ ಗಣ್ಯರು ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು. ಈ ವೇಳೆ ಶ್ರೀ ಶಂಕರ ಸೇವಾ ಸಮಿತಿಯ ಟಿ.ಎನ್.ರಾಜು, ವೆಂಕಟೇಶ್ ಶಾಸ್ತ್ರಿ, ಎಂ.ಎಸ್.ಕೃಷ್ಣ, ಪವನ್, ಅಶ್ವತ್ಥ ನಾರಾಯಣ ಜೋಯಿಷ್, ಸುಮಂತ್, ಶ್ರೀನಿಧಿ ಶಂಕರ್, ಪ್ರಸಾದ್, ಸುಂದರ ರಾಮನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts