More

    ಒನ್ ಆಂಡ್ ಓನ್ಲಿ :30 ವರ್ಷಗಳ ನಂತರ ಕನ್ನಡಿಗನಾದ ಕ್ರೇಜಿಸ್ಟಾರ್

    ಬೆಂಗಳೂರು : ‘ಈ ಟೈಟಲ್ ನಂದೇ. 30 ವರ್ಷಗಳ ಹಿಂದೆ ನಾನೇ ರಿಜಿಸ್ಟರ್ ಮಾಡಿಸಿದ್ದೆ. ಆದರೆ, ಸಿನಿಮಾ ಮಾಡೋದಕ್ಕೆ ಆಗಿರಲಿಲ್ಲ. ಈಗ ಅದೇ ಟೈಟಲ್ ನಂಗೇ ವಾಪಸ್ಸು ಸಿಕ್ಕಿದೆ …’  ರವಿಚಂದ್ರನ್ ಹೀಗೆ ಹೇಳಿದ್ದು, ‘ಕನ್ನಡಿಗ’ ಎಂಬ ಟೈಟಲ್ ಬಗ್ಗೆ. ಈ ಹೆಸರಿನ ಚಿತ್ರ ಸೋಮವಾರ ಪ್ರಾರಂಭವಾಯ್ತು. ಮೊದಲ ಸ್ವಾತಂತ್ರ್ಯ ಸಂಗ್ರಾಮ ನಂತರದ ವರ್ಷಗಳಲ್ಲಿ ನಡೆಯುವ ಈ ಕಥೆಯಲ್ಲಿ ರವಿಚಂದ್ರನ್ ಅವರು ಲಿಪಿಕಾರನಾಗಿ ಅಭಿನಯಿಸುತ್ತಿದ್ದಾರೆ. ಈ ತರಹದ್ದೊಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ರವಿಚಂದ್ರನ್ ಖುಷಿಯಾಗಿದ್ದರು. ಅದೇ ಖುಷಿಯಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದರು.

    ಸಿನಿಮಾನೇ ಚಟ

    ಡ್ರಗ್ಸ್ ದಂಧೆ ಮತ್ತು ಕನ್ನಡ ಚಿತ್ರರಂಗದ ನಂಟಿನ ಕುರಿತು ಮಾತನಾಡುವ ಅವರು, ತಮಗೆ ಸಿನಿಮಾನೇ ಚಟ ಎನ್ನುತ್ತಾರೆ. ‘ಈ ಕಾಟ ಈಗಲಿಂದ ಅಲ್ಲ. ಬಹಳ ವರ್ಷಗಳಿಂದ ಇದೆ. ‘ಶಾಂತಿ ಕ್ರಾಂತಿ’ ಸಂದರ್ಭದಲ್ಲೇ ಈ ಬಗ್ಗೆ ಒಂದಿಷ್ಟು ರೀಸರ್ಚ್ ಮಾಡಿದ್ದೆವು. ಕೆಲವು ಕಾಲೇಜುಗಳ ಡ್ರಗ್ಸ್ ಮಾರಾಟವಾಗುತ್ತದೆ. ಆದರೆ, ಈಗ ಸಿನಿಮಾ ನಂಟು ಸಿಕ್ಕಿರುವುದರಿಂದ ದೊಡ್ಡ ಸುದ್ದಿ ಆಗುತ್ತಿದೆ. ಆ ಬಗ್ಗೆ ನನಗೆ ಗೊತ್ತಿಲ್ಲ. ತಿಳಿದುಕೊಳ್ಳುವ ಮನಸ್ಸೂ ಇಲ್ಲ’ ಎನ್ನುತ್ತಾರೆ ರವಿಚಂದ್ರನ್.

    ‘ಇದು ನನ್ನ ಜಾನರ್ ಸಿನಿಮಾ ಅಲ್ಲ. ಇದು ನನ್ನ ಮಟ್ಟಿಗೆ ಹೊಸ ಶೈಲಿ ಚಿತ್ರ. ಈ ಹೆಸರೇ ದೊಡ್ಡ ಜವಾಬ್ದಾರಿ. ಇಂಥದ್ದೊಂದು ಚಿತ್ರದಲ್ಲಿ ನಟಿಸುತ್ತಿರುವುದೇ ಹೆಮ್ಮೆ. ಗಿರಿರಾಜ್ ನನಗೆ ಬೌಂಡ್ ಸ್ಕ್ರಿಪ್ಟ್ ತಂದುಕೊಟ್ಟರು. ಇದುವರೆಗೂ ನನಗೆ ಯಾರೂ ಪೂರ್ತಿ ಚಿತ್ರಕಥೆ ಕೊಟ್ಟಿರಲಿಲ್ಲ. ನಾಲ್ಕು ಪೇಜ್ ಓದುವಷ್ಟರಲ್ಲಿ ಸುಸ್ತಾಯಿತು. ಇದೊಂದು ಅಪ್ಪಟ ಕನ್ನಡದ ಚಿತ್ರ. ಅವರಿಗೆ ಒಪ್ಪಿಸಿಕೊಳ್ತೀನಿ. ನನ್ನಿಂದ ಕೆಲಸ ತೆಗೆಯುವ ಜವಾಬ್ದಾರಿ ಅವರದು’ ಎನ್ನುತ್ತಾರೆ ರವಿಚಂದ್ರನ್.

    ಕರೊನಾ ದಂಧೆಯಾಗಿದೆ: ಇನ್ನು 2021ರಲ್ಲಿ ಬಹಳ ಫ್ರೆಶ್ ಆಗಿ ಎಂಟ್ರಿ ಕೊಡಬೇಕು ಎನ್ನುವುದು ರವಿಚಂದ್ರನ್ ಅವರ ಯೋಚನೆ. ‘ಮುಂದಿನ ವರ್ಷ ಚಿತ್ರ ಬಿಡುಗಡೆಯಾಗುತ್ತದೆ. ಅಷ್ಟರಲ್ಲಿ ಕರೊನಾ ಹೋಗಿರುತ್ತದೆ. ಆ ಸಂದರ್ಭದಲ್ಲಿ ಹೊಸದಾಗಿ ಎಂಟ್ರಿ ಕೊಡಬೇಕು ಎನ್ನುವ ಯೋಚನೆ ಇದೆ. ಈಗಾಗಲೇ ಜನರಲ್ಲಿ ಭಯ ಕಡಿಮೆ ಆಗಿದೆ. ಹೆದರುತ್ತಾ ಕೂತರೆ ಉಳಿಗಾಲವಿಲ್ಲ ಎಂದು ಅರ್ಥವಾಗಿದೆ. ಹೆದರಿಕೆ ಇಲ್ಲದಿದ್ದರೆ ಪರವಾಗಿಲ್ಲ. ಆದರೆ, ಎಚ್ಚರಿಕೆ ಖಂಡಿತಾ ಬೇಕು. ಎಚ್ಚರಿಕೆಯಿಂದಲೇ ಮುಂದೆ ಸಾಗಬೇಕು. ಆದರೆ, ಇವತ್ತಿನ ಪರಿಸ್ಥಿತಿಯಲ್ಲಿ ಕರೊನಾ ಎನ್ನುವುದು ದೊಡ್ಡ ದಂಧೆ ಆಗಿದೆ. ಹೆಣದ ಮೇಲೂ ವ್ಯಾಪಾರ ಮಾಡಬಹುದು ಎಂದು ತೋರಿಸಿಕೊಟ್ಟಿದೆ. ಸಹಾನುಭೂತಿ ಎನ್ನುವುದೇ ಸತ್ತುಹೋಗಿದೆ. ಎಲ್ಲರೂ ವ್ಯಾಪಾರ ಮಾಡೋಕೆ ಇಳಿದುಬಿಟ್ಟರೆ, ಜನ ಎಲ್ಲಿಂದ ದುಡ್ಡು ತರುತ್ತಾರೆ’ ಎಂದು ಪ್ರಶ್ನಿಸುತ್ತಾರೆ ರವಿಚಂದ್ರನ್.

    ದರ್ಶನ್ ಬರಲಿ, ಇಲ್ಲ ನಾನು ಬರ್ತೀನಿ: ಇನ್ನು, ಅವರ ನಿರ್ದೇಶನದ ‘ರವಿ ಬೋಪಣ್ಣ’ ಸಂಪೂರ್ಣವಾಗಿದೆಯಂತೆ. ಯಾರೂ ಬಿಡುಗಡೆ ಮಾಡುವುದಿಲ್ಲ ಎಂದರೆ, ಬಿಡುಗಡೆ ಮಾಡುವುದಕ್ಕೆ ತಾವು ತಯಾರು ಎನ್ನುತ್ತಾರೆ ಅವರು. ‘ಜನ ಹೊಸ ಸಿನಿಮಾಗಳನ್ನ ಬಯಸುತ್ತಿದ್ದಾರೆ. ಆದರೆ, ಎಲ್ಲರೂ ಒಟ್ಟಿಗೆ ಬಂದರೆ, ಈ ಪರಿಸ್ಥಿತಿಯಲ್ಲಿ ಕಷ್ಟ. ಹಾಗಾಗಿ, ದರ್ಶನ್ ಸಿನಿಮಾ ಬಿಡುಗಡೆಯಾಗಲೀ, ಇಲ್ಲದಿದ್ದರೆ ನಾನು ಬಿಡುಗಡೆ ಮಾಡುತ್ತೇನೆ. ಇಂಥ ಸಮಯದಲ್ಲಿ ಪೈಪೋಟಿ ಇರಬಾರದು. ಎಲ್ಲಾ ಚಿತ್ರಮಂದಿರಗಳಲ್ಲೂ ಒಂದೇ ಚಿತ್ರ ಬಿಡುಗಡಯೆಆಗಬೇಕು. ಯಾವುದಾದರೂ ಒಂದು ದೊಡ್ಡ ಸಿನಿಮಾ ಬಂದರೆ, ಜನ ಖಂಡಿತಾ ಬರುತ್ತಾರೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಅವರು.

    50ನೇ ವರ್ಷಕ್ಕೆ ಒಂದು ಚಿತ್ರ: ಇನ್ನು ಈಶ್ವರಿ ಸಂಸ್ಥೆ 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಹೊಸ ಸಿನಿಮಾ ಮಾಡುವುದಾಗಿ ಘೋಷಿಸುವ ರವಿಚಂದ್ರನ್, ಜತೆಗೊಂದು ಆಪ್ ಶುರು ಮಾಡುವುದಾಗಿ ಹೇಳುತ್ತಾರೆ. ಒನ್ ಆಂಡ್ ಓನ್ಲಿ ಎನ್ನುವ ಈ ಆಪ್​ನಲ್ಲಿ ಇನ್ನು ಮುಂದೆ ಹೊಸ ಸಿನಿಮಾಗಳನ್ನು ಮಾಡಿ ಬಿಡುಗಡೆ ಮಾಡುತ್ತಾರಂತೆ. ಆ ಚಿತ್ರಗಳು ಚಿತ್ರಮಂದಿರಗಳಿಗೆ ಬರದಿದ್ದರೂ ಆಪ್​ನಲ್ಲಿ ಖಂಡಿತಾ ಬಿಡುಗಡೆಯಾಗುತ್ತದೆ. ಒಂದು ಚಿತ್ರಕ್ಕೆ ಇಷ್ಟು ಎಂದು ಜನ ದುಡ್ಡು ಕೊಟ್ಟು ವಿಭಿನ್ನ ಚಿತ್ರಗಳನ್ನು ನೋಡಬಹುದು’ ಎಂಬುದು ರವಿಚಂದ್ರನ್ ಅವರ ಯೋಚನೆ.

    ಒಂಬತ್ತು ಗಂಟೆ ವಿಚಾರಣೆ ಎದುರಿಸಿದ್ರೂ ಒಂದು ಕಪ್ ಟೀ ಕೂಡ ಕುಡಿದಿರಲಿಲ್ಲ ನಮೋ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts