More

    ಮತ್ತೊಮ್ಮೆ ಮೋದಿ ಗೋಡೆ ಬರಹ ಅಭಿಯಾನಕ್ಕೆ ಚಾಲನೆ

    ಮೈಸೂರು: ಮತ್ತೊಮ್ಮೆ ಮೋದಿ-2024 ಗೋಡೆ ಬರಹ ಅಭಿಯಾನಕ್ಕೆ ಕೆ.ಆರ್.ನಗರದಲ್ಲಿ ಚಾಲನೆ ನೀಡಲಾಯಿತು.
    ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ಅವರು ಬುಧವಾರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಎಲ್ಲ ವರ್ಗದ ದೃಷ್ಟಿ ಇಟ್ಟುಕೊಂಡು ನೂರಾರು ಯೋಜನೆಗಳನ್ನು ಜಾರಿಗೊಳಿಸಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯತ್ತಿದ್ದಾರೆ. ಅವರ ಕಾರ್ಯ ಸಾಧನೆಯಿಂದಲೇ ಎಲ್ಲ ದೇಶಗಳೂ ಗೌರವಿಸುತ್ತಲಿವೆ. ಅದರಲ್ಲೂ ಇಂದು ಅಬುದಾಬಿಯಲ್ಲಿ ಅಲ್ಲಿನ ನಾಗರಿಕರ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಭಾರತ ನಿಮ್ಮನ್ನು ಗೌರವಿಸುತ್ತದೆ ಎಂದು ಕನ್ನಡದಲ್ಲಿ ಮಾತನಾಡಿರುವುದು ನಮ್ಮ ನಾಡು ನುಡಿಗೆ ಸಂದ ಗೌರವ ಎಂದರು.
    ಕೇವಲ ಹತ್ತು ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಭಾರತವು ಆರ್ಥಿಕತೆಯಲ್ಲಿ 11ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಮುಂದಿನ ದಿನಗಳ 3ನೇ ಅವಧಿಯಲ್ಲಿ ಭಾರತವು ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಲಿದ್ದು, ಇತರ ದೇಶಗಳು ಭಾರತವನ್ನು ಮತ್ತಷ್ಟು ಬೆಂಬಲಿಸುತ್ತಿವೆ. ಹಾಗೆಯೇ ಭವಿಷ್ಯದಲ್ಲಿ ಭಾರತ ದೇಶದ ಜತೆಗೆ ಹೆಚ್ಚು ವ್ಯವಹರಿಸಲು ಶುರು ಮಾಡುವ ಮೂಲಕ ಭಾರತ ವಿಶ್ವಗುರುವಾಗುವುದರಲ್ಲಿ ಸಂಶಯ ಬೇಡ ಎಂದರು.
    ನಮ್ಮ ದೇಶದ ಯೋಧರು ಕತಾರ್‌ನಲ್ಲಿ ಮರಣ ದಂಡನೆಗೆ ಗುರಿಯಾಗಿದ್ದ ವೇಳೆ ಮೋದಿ ಅವರು ಜವಾಬ್ದಾರಿ ವಹಿಸಿ, ಆ ದೇಶದ ಅಧ್ಯಕ್ಷರು ಮತ್ತು ಕಾನೂನು ಸುವ್ಯವಸ್ಥೆಯೊಂದಿಗೆ ಸಂಪರ್ಕ ಬೆಳೆಸಿ ರಾಜತಾಂತ್ರಿಕ ನೀತಿ ಮೂಲಕ ಅವರನ್ನು ಮರಳಿ ನಮ್ಮ ದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗಿರುವುದು ಇಡೀ ದೇಶವೇ ಹೆಮ್ಮೆ ಪಡುವ ಸಂಗತಿ. ಭಾರತೀಯ ಮಿಲಿಟರಿ ಪಡೆ ಬಿಜೆಪಿ ಆಡಳಿತಾವಧಿಯಲ್ಲಿ ಬಲಿಷ್ಠ ಸೇನೆಯಾಗಿರುವುದನ್ನು ನಾವೆಲ್ಲ ಕಣ್ಣಾರೆ ನೋಡಬಹುದಾಗಿದೆ ಎಂದರು.
    ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ಗೌಡ, ಕ್ಷೇತ್ರ ಅಧ್ಯಕ್ಷ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಜಯರಾಮೇಗೌಡ, ಗೋಡೆ ಬರಹ ಸಂಚಾಲಕ ಪರಿಷಿತ್ತಿನ ರಾಜ್ ಅರಸ್, ಸಾ.ರಾ.ತಿಲಕ್, ಮಾರ್ಕಂಡಯ್ಯ, ಧರ್ಮ, ಅನಿಲ್, ಗುಂಡ, ಸ್ವಪ್ನ ನಾಗೇಶ್, ಕೃಷ್ಣಯ್ಯ, ಬೂತ್, ವಾರ್ಡ್ ಅಧ್ಯಕ್ಷರು, ಪುರಸಭಾ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts